Manmohan Singh: ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಜಗಳ
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರ ನಡೆದಿದೆ. ಕೇಂದ್ರ ಸರ್ಕಾರ ಸಕಲ ಗೌರವಗಳೊಂದಿಗೆ ಮಾಜಿ ಪ್ರಧಾನಿಯವರ ಅಂತ್ಯಕ್ರಿಯೆ ನೆರವೇರಿಸಿದೆ. ಅಂತ್ಯಕ್ರಿಯೆ ವಿಚಾರ ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಅಂತಿಮ ಸಂಸ್ಕಾರವನ್ನು ಕೇಂದ್ರ ಸರ್ಕಾರ ಸರಿಯಾಗಿ ನಡೆಸಿಕೊಟ್ಟಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರ ಅಗೌರವ ಮತ್ತು ದುರಾಡಳಿತದ ಪ್ರದರ್ಶನ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್ ಗಾಂಧಿಯವರೇ ಮನಮೋಹನ್ ಸಿಂಗ್ ಅವರನ್ನು ಅವಮಾನಿಸಿದ್ದಾರೆ, ಈ ವಿಚಾರ ಇಟ್ಟುಕೊಂಡು ಅಗ್ಗದ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

ಕಾಂಗ್ರೆಸ್ ನಾಯಕ ಪವನ್ ಖೇರಾ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಡಾ. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯು ಅಗೌರವ ಮತ್ತು ದುರಾಡಳಿತವನ್ನು ಪ್ರದರ್ಶಿಸಿದೆ. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಪ್ರಸಾರ ಮಾಡಲು ದೂರದರ್ಶನ ಹೊರತುಪಡಿಸಿ ಉಳಿದ ಸುದ್ದಿ ಸಂಸ್ಥೆಗಳಿಗೆ ಅವಕಾಶ ನೀಡಿಲ್ಲ. ದೂರದರ್ಶನ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಹೆಚ್ಚಾಗಿ ತೋರಿಸಿದರು, ಡಾ. ಮನಮೋಹನ್ ಸಿಂಗ್ ಕುಟಂಬಕ್ಕೇ ಕೇವಲು ಮೂರು ಖುರ್ಚಿಗಳನ್ನು ಮಾತ್ರ ಮುಂದಿನ ಸಾಲಿನಲ್ಲಿ ಇಡಲಾಗಿತ್ತು ಎಂದು ಆರೋಪಿಸಿದರು.
"ಮನಮೋಹನ್ ಸಿಂಗ್ ಅವರ ಪತ್ನಿಗೆ ರಾಷ್ಟ್ರಧ್ವಜವನ್ನು ನೀಡುವ ಸಂದರ್ಭದಲ್ಲಿ ಮತ್ತು ಕುಶಾಲತೋಪು ಗೌರವ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಂತ್ರಿಗಳು ಗೌರವ ನೀಡಲು ಎದ್ದು ನಿಲ್ಲಲಿಲ್ಲ. ಒಂದು ಕಡೆ ಸೈನಿಕರೇ ಇದ್ದ ಕಾರಣ ಕುಟುಂಬಕ್ಕೆ ಚಿತೆಯ ಸುತ್ತಲೂ ನಿಲ್ಲಲೂ ಸರಿಯಾದ ಅವಕಾಶ ಸಿಗಲಿಲ್ಲ. ಅಂತ್ಯಕ್ರಿಯೆ ವೇಳೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡಲಿಲ್ಲ" ಎಂದು ಪವನ್ ಖೇರಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಅವರ ವಾಹನ ಮೆರವಣಿಗೆಯು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಮೆರವಣಿಗೆಗೆ ಕೂಡ ಅಡ್ಡಿ ಮಾಡಿತ್ತು. ಕುಟುಂಬದವರ ಕಾರುಗಳನ್ನು ಕೂಡ ಒಳಗೆ ಬಿಡಲಿಲ್ಲ, ಬಳಿಕ ಕುಟುಂಬ ಸದಸ್ಯರನ್ನು ಪತ್ತೆಹಚ್ಚಿ ಸ್ಥಳಕ್ಕೆ ಕರೆತರಬೇಕಾಯಿರತು ಎಂದು ಹೇಳಿದ್ದಾರೆ.
ತಿರುಗೇಟು ನೀಡಿದ ಬಿಜೆಪಿ
ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕಾಗಿ ನಿಗದಿಪಡಿಸಿದ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಸದೆ ಬಿಜೆಪಿ ಅವರಿಗೆ ಅವಮಾನ ಮಾಡಿದೆ ಎಂದು ರಾಹುಲ್ ಹೇಳಿದ್ದು ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಜೆಪಿ ನಡ್ಡಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಮಾಜಿ ಪ್ರಧಾನಿ ನಿಧನದ ವಿಚಾರದಲ್ಲೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ, ಇಂತಹ ಕೀಳು ರಾಜಕೀಯ ಮಾಡುವ ಕಾಂಗ್ರೆಸ್ ಅನ್ನು ಎಷ್ಟು ಟೀಕಿಸಿದರೂ ಸಾಲದು. ಮನಮೋಹನ್ ಸಿಂಗ್ ಅವರು ಬದುಕಿದ್ದಾಗ ಅವರಿಗೆ ನಿಜವಾದ ಗೌರವ ಕೊಡದ ಕಾಂಗ್ರೆಸ್ ಈಗ ಅವರಿಗೆ ಗೌರವ ನೀಡುವ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಾಗವನ್ನು ಮಂಜೂರು ಮಾಡಿದೆ. ಅವರ ಕುಟುಂಬಕ್ಕೂ ಈ ವಿಚಾರ ತಿಳಿಸಲಾಗಿದೆ ಎಂದು ಕೇಂದ್ರ ಸಚಿವ ಜೆಪಿ ನಡ್ಡಾ ಹೇಳಿದ್ದಾರೆ.












Click it and Unblock the Notifications