Manipur violence: ಸಂಪಾದಕರ ಒಕ್ಕೂಟದ ಸದಸ್ಯರ ಪರ ನಿಂತ ಸುಪ್ರೀಂ ಕೋರ್ಟ್- ಮಣಿಪುರ ಸರ್ಕಾರಕ್ಕೆ ಹಿನ್ನೆಡೆ
ನವದೆಹಲಿ, ಸೆಪ್ಟೆಂಬರ್ 06: ಭಾರತೀಯ ಸಂಪಾದಕರ ಒಕ್ಕೂಟದ ( ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ) ನಾಲ್ವರು ಸದಸ್ಯರ ವಿರುದ್ಧ ಮಣಿಪುರ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ಈ ಕುರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಒಕ್ಕೂಟದ ನಾಲ್ವರು ಸದಸ್ಯರ ಪರ ನಿಂತಿದೆ. ಈ ಮೂಲಕ ಮಣಿಪುರ ಸರ್ಕಾರ ತೆಗೆದುಕೊಂಡಿರುವ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಹರಿಹಾಯ್ದಿದೆ.
ಸೋಮವಾರದ ವರೆಗೆ ಯಾರನ್ನೂ ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನೂ ನ್ಯಾಯಾಲಯ ಕೇಳಿದೆ. ಇದೀಗ ಸೆಪ್ಟೆಂಬರ್ 11ರಂದು ( ಸೋಮವಾರ ) ಪ್ರಕರಣದ ವಿಚಾರಣೆ ನಡೆಯಲಿದೆ.

ಮಣಿಪುರದಲ್ಲಿ ನಡೆದ ಹಿಂಸಾಚಾರದ ಘಟನೆಗಳ ಕುರಿತು ಸ್ಥಳೀಯ ಪತ್ರಕರ್ತರು 'ಪಕ್ಷಪಾತ' ವರದಿ ಮಾಡಿದ್ದಾರೆ ಎಂದು ಸಂಪಾದಕರ ಒಕ್ಕೂಟ ಆರೋಪಿಸಿದೆ. ಈ ಕುರಿತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪರವಾಗಿ ನಾಲ್ವರು ಪತ್ರಕರ್ತರು ಸತ್ಯಶೋಧನಾ ವರದಿಯನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಣಿಪುರ ಸರ್ಕಾರ ಈ ನಾಲ್ವರು ಪತ್ರಕರ್ತರ ಮೇಲೆ ಎಫ್‌ಐಆರ್ ದಾಖಲಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಇಂದು ( ಬುಧವಾರ ) ತುರ್ತು ವಿಚಾರಣೆ ನಡೆಸಿದೆ.
ಹಿರಿಯ ಪತ್ರಕರ್ತರು 4 ದಿನಗಳ ಕಾಲ ಮಣಿಪುರಕ್ಕೆ ಭೇಟಿ ನೀಡಿದ್ದರು. ಹಿಂಸಾಚಾರದಿಂದ ನಲುಗಿದ ರಾಜ್ಯಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಯ ಕುರಿತು ವರದಿ ಮಾಡಿದ್ದರು. ಮಣಿಪುರದ ಸ್ಥಳೀಯ ಪತ್ರಕರ್ತರ ಪಕ್ಷಪಾತದ ವರದಿಯ ಕುರಿತು ವರದಿಯಲ್ಲಿ ಉಲ್ಲೇಖವಾಗಿತ್ತು. ಮಣಿಪುರದಲ್ಲಿ ಗಿಲ್ಡ್ ಸದಸ್ಯರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಈ ಕುರಿತು ಮಾತನಾಡಿರುವ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜ್ಯದಲ್ಲಿ ಘರ್ಷಣೆಯನ್ನು ಪ್ರಚೋದಿಸಲು ಪತ್ರಕರ್ತರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರಕರ್ತರ ವಿರುದ್ಧದ ದೂರಿನ ಆಧಾರದ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಗಿಲ್ಡ್‌ನ ನಾಲ್ವರು ಸದಸ್ಯರ ವಿರುದ್ಧ ಮಾನನಷ್ಟದ ಆರೋಪವನ್ನು ಹೊರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ.
ಮಣಿಪುರದಲ್ಲಿ ಮೇ ತಿಂಗಳಿಂದ ಗಲಭೆಗಳು ಆರಂಭವಾಗಿದೆ. ಕುಕಿ ಹಾಗೂ ಮೈತೇಯಿ ಸಮದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ 180 ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.












Click it and Unblock the Notifications