Manipur violence: ಚುರಾಚಂದ್‌ಪುರದಲ್ಲಿ ಕರ್ಫ್ಯೂ ಸಡಿಲಿಕೆ
ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಮಣಿಪುರದ ಚುರಾಚಂದ್‌ಪುರದಲ್ಲಿಂದು ಕರ್ಫ್ಯೂ ಅನ್ನು ಭಾಗಶಃ ತೆಗೆದುಹಾಕಲಾಗಿದೆ. ಇದಕ್ಕೂ ಮುನ್ನ ಶನಿವಾರವೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಎರಡು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಹಂಚಿಕೊಂಡ ಅಧಿಸೂಚನೆಯಲ್ಲಿ ರಾಜ್ಯದ ಹಿಂಸಾಚಾರ ಪೀಡಿತ ಚುರಾಚಂದ್‌ಪುರ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಮೂರು ಗಂಟೆಗಳ ಕಾಲ ಕರ್ಫ್ಯೂ ಭಾಗಶಃ ಸಡಿಲಿಸಲಾಗುವುದು, ಔಷಧಗಳು ಮತ್ತು ಆಹಾರ ಸೇರಿದಂತೆ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ. CrPC ಯ ಸೆಕ್ಷನ್ 144 ರ ಅಡಿಯಲ್ಲಿ ವಿಧಿಸಲಾದ ಕರ್ಫ್ಯೂ ಅನ್ನು ಬೆಳಿಗ್ಗೆ 7 ರಿಂದ 10 ರವರೆಗೆ ತೆಗೆದುಹಾಕಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಶನಿವಾರ ರಾತ್ರಿ ಟ್ವೀಟ್ ಮಾಡಿ, ಅಧಿಸೂಚನೆಯ ಪ್ರತಿಯನ್ನು ಹಂಚಿಕೊಂಡಿದ್ದಾರೆ, "ಚುರಚಂದ್‌ಪುರ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುತ್ತಿದೆ. ರಾಜ್ಯ ಸರ್ಕಾರ ಮತ್ತು ವಿವಿಧ ಮಧ್ಯಸ್ಥಗಾರರ ನಡುವೆ ಮಾತುಕತೆ ನಡೆದ ನಂತರ, ಕರ್ಫ್ಯೂ ಅನ್ನು ಸಡಿಲಗೊಳಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಪ್ರತಿಯಲ್ಲಿ ಹಂಚಿಕೊಂಡಿರುವ ವಿವರಗಳ ಪ್ರಕಾರ ಭಾಗಶಃ ಕರ್ಫ್ಯೂ ಸಡಿಲಿಸಲಾಗುವುದು" ಎಂದು ತಿಳಿಸಿದ್ದಾರೆ.
ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ
ಕೆಲ ದಿನಗಳಿಂದ ಮಣಿಪುರದ ಹಲವೆಡೆ ಆದಿವಾಸಿಗಳು ಮತ್ತು ಬಹುಸಂಖ್ಯಾತ ಮೇಟಿ ಸಮುದಾಯದ ಸದಸ್ಯರ ನಡುವೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿವೆ. ಇದರಿಂದಾಗಿ ಈವರೆಗೆ 54 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಅಧಿಕಾರಿಗಳು ಮೇ 3 ರಂದು ಕರ್ಫ್ಯೂ ವಿಧಿಸಿದರು. ಹಿಂಸಾತ್ಮಕ ಸ್ಥಳಗಳಿಂದ ಇದುವರೆಗೆ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

ಚುರಚಂದಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಶರತ್ ಚಂದ್ರ ಅರೋಜು ಹೊರಡಿಸಿದ ಅಧಿಸೂಚನೆಯಲ್ಲಿ, "ಪ್ರಚಲಿತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ನಂತರದ ಸಡಿಲಿಕೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಸೂಚಿಸಲಾಗುವುದು" ಎಂದು ಬರೆಯಲಾಗಿದೆ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೇಟಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ರಾಜ್ಯದ ಹತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಲಾಗಿತ್ತು. ನಂತರ ಘರ್ಷಣೆಗಳು ಸಂಭವಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅರೆಸೈನಿಕ ಸಿಬ್ಬಂದಿ ನಿಯೋಜನೆ
ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೇಟಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರು ನಾಗಾಗಳು ಮತ್ತು ಕುಕಿಗಳು ಎಂಬ ಹೆಸರನ್ನು ಹೊಂದಿದ್ದಾರೆ. ಈ ಜನಸಂಖ್ಯೆ 40 ಪ್ರತಿಶತವನ್ನು ಹೊಂದಿದ್ದು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಇಂಪಾಲ ಕಣಿವೆಯಲ್ಲಿ ವಾಸಿಸುವ ಮೇಟಿ ಮತ್ತು ಬೆಟ್ಟದ ಜಿಲ್ಲೆಗಳ ನಿವಾಸಿಗಳಾದ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಬುಧವಾರದಿಂದ ಘರ್ಷಣೆ ನಡೆಯುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯ ಹಾಗೂ ಅಸ್ಸಾಂ ರೈಫಲ್ಸ್‍ನ ಸುಮಾರು 10,000 ಸೈನಿಕರನ್ನು ನಿಯೋಜಿಸಲಾಗಿದೆ. 1,000 ಕೇಂದ್ರೀಯ ಅರೆಸೈನಿಕ ಸಿಬ್ಬಂದಿ ನಿಯೋಜಿಸಲಾಗಿದೆ. ಗಲಭೆಯನ್ನು ನಿಯಂತ್ರಿಸಲು ರೈಲುಗಳನ್ನು ರದ್ದುಗೊಳಿಸಲಾಗಿದೆ ರೈಲ್ವೆ ಇಲಾಖೆ ತಿಳಿಸಿದೆ.
ಹಿಂಸಾಚಾರಕ್ಕೆ ಕಾರಣವೇನು?
ಮೇಟಿ ಸಮುದಾಯ ಎಸ್‍ಟಿ ಸ್ಥಾನಮಾನದ ಬೇಡಿಕೆಯ ಕುರಿತು ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಟೊಬರ್ಂಗ್‍ನಲ್ಲಿ ನಡೆದ ಮೆರವಣಿಗೆಯಲ್ಲಿ ಶಸ್ತ್ರಸಜ್ಜಿತ ಜನಸಮೂಹವು ಮೇಟಿ ಸಮುದಾಯದ ಜನರ ಮೇಲೆ ದಾಳಿ ಮಾಡಿದೆ. ಇದು ಕಣಿವೆ ಜಿಲ್ಲೆಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು. ಇದು ರಾಜ್ಯದಾದ್ಯಂತ ವ್ಯಾಪಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications