Manipur violence: ಮಣಿಪುರದಲ್ಲಿ ಮನೆಗಳಿಗೆ ಬೆಂಕಿ, ಕದ್ದ ರೈಫಲ್‌ಗಳಿಂದ ಗುಂಡಿಕ್ಕಿ ಮೂವರ ಹತ್ಯೆ- ಸರ್ವನಾಶದತ್ತ ಈಶಾನ್ಯ ರಾಜ್ಯ
ಇಂಫಾಲ, ಆಗಸ್ಟ್ 05: ಕಲಹ ಪೀಡಿತ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಹೊಸದಾಗಿ ಹಿಂಸಾಚಾರ ಭುಗಿಲೆದ್ದಿದೆ. ಮೈತೇಯಿ ಸಮುದಾಯದ ಮೂವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಕುಕಿಗಳಿಗೆ ಸೇರಿದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಹತ್ಯೆಯಾದವರು ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಪ್ರದೇಶದವರು ಎಂದು ಗೊತ್ತಾಗಿದೆ.
ಬಿಷ್ಣುಪುರದಲ್ಲಿ ಭದ್ರತಾ ಪಡೆಗಳು ರಚಿಸಿದ ಎರಡು ಕಿಲೋಮೀಟರ್ ಉದ್ದದ ಬಫರ್ ವಲಯವನ್ನು ದುಷ್ಕರ್ಮಿಗಳು ದಾಟಿ ಹೋಗಿದ್ದಾರೆ. ಆ ನಂತರ ಕ್ವಾಕ್ಟಾ ಪ್ರದೇಶಕ್ಕೆ ಪ್ರವೇಶಿಸಿದ ಕೆಲವು ದುಷ್ಕರ್ಮಿಗಳು ಮೈತೇಯಿ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಇಂಡಿಯಾ ಟುಡೇ ವರದಿ ಮಾಡಿದೆ.

ಬಿಷ್ಣುಪುರ ಜಿಲ್ಲೆಯಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರಂಭದಲ್ಲಿ, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗಲಿಲ್ಲ. ಆದರೆ, ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ತಂದೆ ಹಾಗೂ ಮಗ ಸಾವಿಗೀಡಾಗಿದ್ದಾರೆ.
ಗುರುವಾರ ಜಿಲ್ಲೆಯಲ್ಲಿ ನಡೆದ ಭದ್ರತಾ ಪಡೆಗಳು ಮತ್ತು ಸ್ಥಳೀಯರ ನಡುವಿನ ಘರ್ಷಣೆಯಲ್ಲಿ 17 ಜನರು ಗಾಯಗೊಂಡಿದ್ದರು. ಇದಾದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.

ಹಿಂಸಾಚಾರ ಭುಗಿಲೆದ್ದ ನಂತರ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಪ್ರದೇಶಗಳಲ್ಲಿ ಮತ್ತೆ ಕರ್ಫ್ಯೂ ಹೇರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ, ಬಿಷ್ಣುಪುರದ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನಾಕಾರರ ಮೇಲೆ ಸಶಸ್ತ್ರ ಪಡೆಗಳು ಅಶ್ರುವಾಯು ಸಿಡಿಸಿದ್ದಾರೆ.
ಮೇ 3 ರಿಂದ ಮಣಿಪುರವು ಜನಾಂಗೀಯ ಹಿಂಸಾಚಾರದಲ್ಲಿ ನಲುಗುತ್ತಿದೆ. ಮಣಿಪುರ ಹೈಕೋರ್ಟ್ ಆದೇಶದ ( ಮೀಸಲಾತಿ ವಿಚಾರವಾಗಿ ) ವಿರುದ್ಧ ಬುಡಕಟ್ಟು ಸಮುದಾಯದ ಜನರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದು ಮೈತೇಯಿ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು ಮೂರು ತಿಂಗಳ ಹಿಂದೆ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಅಂದಿನಿಂದ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಾತನಾಡಬೇಕೆಂದು ವಿರೋಧ ಪಕ್ಷಗಳು ಪಟ್ಟುಹಿಡಿದಿವೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾಗಿವೆ. ಮಣಿಪುರದಲ್ಲಿನ ಹಿಂಸಾಚಾರಕ್ಕೆ ಆಡಳಿತರೂಢ ಬಿಜೆಪಿಯೇ ಕಾರಣವೆಂದು ವಿರೋಧ ಪಕ್ಷಗಳು ಆರೋಪಿಸಿವೆ.












Click it and Unblock the Notifications