Manipur: ಮಣಿಪುರದಲ್ಲಿ ಪ್ರತ್ಯೇಕ ಹುದ್ದೆಗಾಗಿ ಶುರುವಾಯ್ತು ಫೈಟಿಂಗ್!
ಯಾವ ಘಳಿಗೆಯಲ್ಲಿ ಮಣಿಪುರ ಹಿಂಸಾಚಾರದ ಕೂಪಕ್ಕೆ ಬಿತ್ತೋ ಗೊತ್ತಿಲ್ಲ, ಅಲ್ಲಿ ತೀವ್ರ ಪರದಾಟ ಮುಂದುವರಿದಿದೆ. ಕಂಡ ಕಂಡ ಮನೆಗಳಿಗೆಲ್ಲ ಬೆಂಕಿ ಹಚ್ಚುತ್ತಾ, ಕೈಗೆ ಸಿಕ್ಕವರ ಮೇಲೆ ಹಲ್ಲೆ ಮಾಡುತ್ತಾ ಅಕ್ಷರಶಃ ನರಕವಾಗಿ ಬದಲಾಗಿದೆ ಮಣಿಪುರ. ಈ ಸಂದರ್ಭದಲ್ಲಿ ಮಣಿಪುರದ ಪ್ರಮುಖ ಜನಾಂಗ ಕುಕಿ ಬುಡಕಟ್ಟು ಜನ ತಿರುಗಿಬಿದ್ದು, ತಮಗೆ ಪ್ರತ್ಯೇಕವಾದ ಹುದ್ದೆಗಳನ್ನ ಸೃಷ್ಟಿಸಿ ಅಂತಾ ಡಿಮ್ಯಾಂಡ್ ಇಟ್ಟಿದ್ದಾರೆ.
ಅಂದಹಾಗೆ ಹಿಂಸಾಚಾರದ ಬೆಂಕಿಗೆ ಸಿಲುಕಿದ ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯ ವಾಸಿಸುವ 5 ಗುಡ್ಡಗಾಡು ಜಿಲ್ಲೆಗಳಿಗೆ ಪ್ರತ್ಯೇಕವಾದ ಮುಖ್ಯಕಾರ್ಯದರ್ಶಿ, ಡಿಜಿಪಿ ಸೇರಿ ಇತರ ಹುದ್ದೆ ಸೃಷ್ಟಿಸುವಂತೆ ಕುಕಿ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರನ್ನ ಒತ್ತಾಯಿಸಿದ್ದಾರೆ. ಇನ್ನು ಕುಕಿ ಸಮುದಾಯದವರಿಗೆ ಪರಿಹಾರ ನೀಡಲು ಮತ್ತು ಪುನರ್ವಸತಿ ಕಲ್ಪಿಸಲು, ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ₹500 ಕೋಟಿ ಬಿಡುಗಡೆ ಮಾಡಬೇಕೆಂದು 7 ಬಿಜೆಪಿ ಶಾಸಕರು ಸೇರಿ ಒಟ್ಟು 10 ಕುಕಿ ಶಾಸಕರು ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರತ್ಯೇಕ ಆಡಳಿತಕ್ಕೆ ಫೈಟ್ ಶುರು?
ಮಣಿಪುರ ಹೊತ್ತಿ ಉರಿಯುತ್ತಿರುವ ಹಿನ್ನೆಲೆ ಆತಂಕ ಶುರುವಾಗಿದೆ. ಅದ್ರಲ್ಲೂ ಮೈತೇಯಿ ಸಮುದಾಯ ಪ್ರಾಬಲ್ಯವಿರುವ ಮಣಿಪುರ ರಾಜಧಾನಿ ಇಂಫಾಲ್‌ನಲ್ಲೇ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಕಚೇರಿ ಇದೆ. ಹೀಗಾಗಿ ಅಲ್ಲಿಗೆ ತೆರಳಲು ಕುಕಿ ಜನರು ಭಯಪಡುತ್ತಿದ್ದಾರೆ. ಈ ಕಾರಣ ಪ್ರತ್ಯೇಕ ಹುದ್ದೆಗಳನ್ನ ಸೃಷ್ಟಿಸುವುದು ಅಗತ್ಯ ಎಂದು ಶಾಸಕರು ಆಗ್ರಹಿಸಿದ್ದಾರೆ. ಅಲ್ದೆ ಕುಕಿ ಸಮುದಾಯದ ಐಎಎಸ್ ಐಪಿಎಸ್ ಮತ್ತು ಇತರ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಇಂಫಾಲ್‌ಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದೂ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ
ಒಂದು ಕಡೆ ಮಣಿಪುರದಲ್ಲಿ ಫೈಟಿಂಗ್ ನಡೆಯುವಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಇದರ ಹೋರಾಟದ ಕಿಚ್ಚು ತಲುಪಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಖಂಡಿಸಿ ಹಾಗೂ ಕುಕಿ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ಆಡಳಿತ ನೀಡಬೇಕೆಂದು ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆದಿದೆ. ಹಾಗೇ ಕೇಂದ್ರ ಸರ್ಕಾರ ಪ್ರತ್ಯೇಕ ಆಡಳಿತಕ್ಕಾಗಿ ಅನುಮತಿ ನೀಡಿದರೆ ಕುಕಿ ಸಮುದಾಯ ಶಾಂತಿಯುತವಾಗಿ ಬದುಕಲು ಸಾಧ್ಯವೆಂದು ಇಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹೇಳಿದ್ದಾರೆ.
ಮನೆ ಕಳೆದುಕೊಂಡವರಿಗೆ ಹೊಸ ಮನೆ
ಮಣಿಪುರದಲ್ಲಿ ಹಿಂಸಾಚಾರ ಕಾರಣ ಮನೆ ಕಳೆದು ಕಳೆದುಕೊಂಡು ಪರದಾಡುತ್ತಿರುವ ಜನರಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ. ಮೇ 3ರಂದು ಮಣಿಪುರದಲ್ಲಿ ಶುರುವಾದ ಹಿಂಸಾಚಾರದಲ್ಲಿ 180 ಕ್ಕೂ ಹೆಚ್ಚು ಜನ ಮೃತಪಟ್ಟು, 3000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜೊತೆಗೇ 60 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದು, ಆಸ್ತಿ ನಷ್ಟಕ್ಕೆ ಲೆಕ್ಕ ಸಿಗುತ್ತಿಲ್ಲ. ಈ ಸ್ಥಿತಿಯಲ್ಲಿ ಮಣಿಪುರ ಸರ್ಕಾರ 3000 ಸಿದ್ಧಪಡಿಸಿದ ಮನೆಗಳನ್ನ ಜನರಿಗೆ ಹಂಚಿಕೆ ಮಾಡಲು ಸಿದ್ಧತೆಯನ್ನ ನಡೆಸುತ್ತಿದೆ.

ಮಣಿಪುರದಲ್ಲಿ ಸ್ಥಿತಿ ಹೇಗಿದೆ ಎಂದರೆ ಎಲ್ಲಿ ಬೇಕಾದರೂ ಬೆಂಕಿ ಬೀಳಬಹುದು. ಹೀಗೆ ಉದ್ರಿಕ್ತರ ಗುಂಪು ಕಂಡ ಕಂಡ ಜಾಗದಲ್ಲಿ ಬೆಂಕಿ ಹಚ್ಚಿ ಸಂಭ್ರಮಿಸುತ್ತಿದೆ. ಈ ಸಂದರ್ಭದಲ್ಲೇ ಸ್ಥಳೀಯ ಸರ್ಕಾರ ನೆರವಿನ ಹಸ್ತ ಚಾಚಿದೆ. ಹೀಗಾಗಿ ಭಯದಲ್ಲೇ ಬದುಕುತ್ತಿರುವ ಸಂತ್ರಸ್ತರು ಸೂರು ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ. ಇದರ ಜೊತೆಗೆ ಈಗ ಪ್ರತ್ಯೇಕ ಆಡಳಿತದ ಮನವಿ ಕೂಡ ಕೇಳಿಬಂದಿದೆ. ಆದರೆ ಈ ಮನವಿಗೆ ಕೇಂದ್ರ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ? ಅನ್ನೋದನ್ನ ಕಾದು ನೋಡಬೇಕು.
ಒಟ್ನಲ್ಲಿ ಮಣಿಪುರ ಹಿಂಸಾಚಾರ ಜಗತ್ತಿನಾದ್ಯಂತ ಸದ್ದು ಮಾಡುವಾಗ ಪ್ರತ್ಯೇಕ ಆಡಳಿತದ ಮನವಿ ಕೇಳಿಬಂದಿದೆ. ಹೀಗಾಗಿ ಮಣಿಪುರದಲ್ಲಿ ಮತ್ತೊಂದು ತಲೆನೋವು ಶುರುವಾಗುವ ಭೀತಿ ಕೂಡ ಆವರಿಸಿದೆ. ಈಗಾಗಲೇ ವಿಪಕ್ಷಗಳು ಇದೇ ಮಣಿಪುರ ವಿಚಾರದಲ್ಲಿ ಕೇಂದ್ರದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿವೆ. ಹೀಗಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಯಾವ ನಿಲುವು ಕೈಗೊಳ್ಳುತ್ತೆ? ಅನ್ನೋದನ್ನ ಕಾದು ನೋಡಬೇಕು.











Click it and Unblock the Notifications