ಅಕ್ಕನ ಅಸ್ಥಿಪಂಜರದೊಂದಿಗೆ 6 ತಿಂಗಳು ಜೀವಿಸಿದ್ದ ಟೆಕ್ಕಿ ಆತ್ಮಹತ್ಯೆ
ಆರು ತಿಂಗಳುಗಳ ಕಾಲ ತನ್ನ ಅಕ್ಕನ ಅಸ್ಥಿಪಂಜರದೊಂದಿಗಿದ್ದ ಆತನ ವಿಚಿತ್ರ ವ್ಯಕ್ತಿತ್ವ 2015ರಲ್ಲಿ ಬಹಿರಂಗಗೊಂಡಿತ್ತು. ಆಗಿನಿಂದ ಹುಚ್ಚಾಸ್ಪತ್ರೆಯಲ್ಲಿ ಹಾಗೂ ಧರ್ಮಾರ್ಥ ಸೇವಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದ.
ಕೋಲ್ಕತಾ, ಫೆಬ್ರವರಿ 21: ತನ್ನ ಸೋದರಿಯ ಅಸ್ಥಿಪಂಜರದೊಂದಿಗೆ ಸುಮಾರು ಆರು ತಿಂಗಳುಗಳ ಕಾಲ ಜೀವಿಸಿದ್ದ ಪಾರ್ಥ ಡೇ (45 ವರ್ಷ) ಎಂಬ ವ್ಯಕ್ತಿಯು ಇಲ್ಲಿನ ಖಿಡ್ಡೆರ್ ಪುರ ಪ್ರಾಂತ್ಯದ ರಾಬಿನ್ಸನ್ ರಸ್ತೆಯ ತನ್ನ ವಸತಿ ಸಮುಚ್ಛಯದ ನಿವಾಸದಲ್ಲಿ ಮಂಗಳವಾರ ಶವವಾಗಿ ದೊರೆತಿದ್ದಾರೆ. ಅಂದಹಾಗೆ, ಡೇ ಅವರು ಬಿ ಟೆಕ್ ಇಂಜಿನಿಯರ್ (ಐಟಿ) ಪದವೀಧರನಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಬಾತ್ ರೂಮಿನಲ್ಲಿ ಆತನ ಸುಟ್ಟ ದೇಹ ಪತ್ತೆಯಾಗಿದ್ದು, ಶವದ ಪಕ್ಕದಲ್ಲೇ ಪೆಟ್ರೋಲ್ ತುಂಬಿದ ಬಾಟಲಿ ಹಾಗೂ ಬೆಂಕಿಪೊಟ್ಟಣ ಇರುವುದರಿಂದ ಆತನೇ ಎಣ್ಣೆ ಸುರಿದುಕೊಂಡು ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಆತನ ಮನೆಯಿಂದ ದಟ್ಟವಾದ ಹೊಗೆ ಹೊರಬರುತ್ತಿದ್ದು ಬೆಂಕಿಯ ಕೆನ್ನಾಲಿಗೆಗಳು ಬಚ್ಚಲು ಮನೆಯ ಕಿಟಕಿಯಿಂದ ಕಾಣುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಫೋನ್ ಮುಖೇನ ಮಾಹಿತಿ ನೀಡಿದ್ದರು. ತಕ್ಷಣವೇ ಮನೆಗೆ ಹಾಜರಾದ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿ ನೋಡುವಷ್ಟರಲ್ಲಿ ಡೇ ಸಾವಿಗೀಡಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಅಕ್ಕನ ಶವದೊಂದಿಗೆ ಜೀವಿಸಿದ್ದ!
2015ರಲ್ಲಿ ಪಾರ್ಥ ಡೇ ಭಾರೀ ಸುದ್ದಿಯಾಗಿದ್ದ. ದುರ್ವಿಧಿಯೆಂದರೆ, ಆತನ ತಂದೆ ಅರಬಿಂದ ಡೇ ಕೂಡ ಇದೇ ರೀತಿ ಬಾತ್ ರೂಮಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ವಿಷಯ ತಿಳಿದಿದ್ದ ಪೊಲೀಸರು ಮನೆಯೊಳಕ್ಕೆ ಬಂದಿದ್ದಾಗ ಶಾಕ್ ಕಾದಿತ್ತು.
ಬಾತ್ ರೂಮಿನಲ್ಲಿ ಪಾರ್ಥನ ತಂದೆಯ ಶವ ಬಿದ್ದಿದ್ದರೆ, ಇತ್ತ ತನ್ನ ಬೆಡ್ ರೂಮಿನಲ್ಲಿ ಇದ್ಯಾವುದರ ಅರಿವೇ ಇಲ್ಲದ ಪಾರ್ಥ ತನ್ನ ಅಕ್ಕ ದೇಬಜಾನಿ ಡೇ ಅವರ ವಸ್ತ್ರಾಲಂಕಾರ ಮಾಡಿದ ಅಸ್ಥಿಪಂಜರದ ಜತೆ ಕುಳಿತಿದ್ದ. ಇದನ್ನ ನೋಡಿದ ಪೊಲೀಸರು ದಿಗ್ಭ್ರಮೆಗೊಳಗಾಗಿದ್ದರು.
ವಿಚಾರಿಸಲಾಗಿ, ತಾನು ತನ್ನ ಅಕ್ಕನ ಅಸ್ಥಿಪಂಜರದೊಂದಿಗೆ ಕಳೆದ ಆರು ತಿಂಗಳಿಂದ ಜೀವನ ನಡೆಸುತ್ತಿರುವುದಾಗಿ ತಿಳಿಸಿದ್ದ. ತನ್ನ ಅಕ್ಕನ ಸಾವಿನ ಬಗ್ಗೆ ವಿವರಿಸಿದ್ದ ಆತ, ತನ್ನ ಎರಡು ಪ್ರೀತಿಯ ನಾಯಿಗಳು ಸತ್ತಿದ್ದ ಹಿನ್ನೆಲೆಯಲ್ಲಿ ಊಟ ಬಿಟ್ಟು ಆತನ ಅಕ್ಕ ಅಸುನೀಗಿದ್ದಾಗಿ ತಿಳಿಸಿದ್ದ.
ಆಗ, ಮನೆಯನ್ನು ಶೋಧಿಸಿದ್ದ ಪೊಲೀಸರಿಗೆ ಎರಡು ನಾಯಿಗಳ ಅಸ್ಥಿಪಂಜರಗಳೂ ಪತ್ತೆಯಾಗಿದ್ದವು!
ಆದರೆ, ಇಲ್ಲೂ ಒಂದು ಟ್ವಿಸ್ಟ್ ಇದೆ. ಒಂದೇ ಮನೆಯಲ್ಲಿ ಈ ಕುಟುಂಬ ಇದ್ದರೂ ಮಗಳು ಸತ್ತಿರುವ ವಿಚಾರ ಅರಬಿಂದ ಡೇ ಅವರಿಗೆ ತಿಂಗಳಾನುಗೊಟ್ಟಲೇ ಗೊತ್ತಿರಲಿಲ್ಲ. ಅದೊಂದು ದಿನ ಪಾರ್ಥನನ್ನು ಒತ್ತಾಯ ಮಾಡಿ ಕೇಳಿದಾಗ, ಪಾರ್ಥ , ಅಕ್ಕ ತೀರಿಕೊಂಡಿದ್ದ ವಿಚಾರವನ್ನು ಅರಬಿಂದ ಡೇ ಅವರಿಗೆ ತಿಳಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
2015ರ ಪ್ರಕರಣದ ಪತ್ತೆಯಾದ ನಂತರ ಪೊಲೀಸರು ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆದ ನಂತರ ಆತನನ್ನು ಧರ್ಮಾರ್ಥ ಸೇವಾ ಸಂಸ್ಥೆಯೊಂದರಲ್ಲಿ ಬಿಡಲಾಗಿತ್ತು. ಇತ್ತೀಚೆಗಷ್ಟೇ ಆತ ತನ್ನ ಮನೆಗೆ ಮರಳಿದ್ದ ಎನ್ನಲಾಗಿದೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮನಃಶಾಸ್ತ್ರಜ್ಞರು, ತೀವ್ರ ಮಾನಸಿಕ ಖಿನ್ನತೆಯಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.












Click it and Unblock the Notifications