ಚೆನ್ನೈ: ರೈಲು ಹಳಿಗಳ ಮೇಲೆ ಯುವತಿಯನ್ನು ತಳ್ಳಿ ಓಡಿಹೋದ ಯುವಕ, ಯುವತಿ ಸಾವು
ಚೆನ್ನೈ, ಅ. 13: ಚಲಿಸುತ್ತಿದ್ದ ರೈಲಿಗೆ ಯುವತಿಯನ್ನು ಆರೋಪಿಯೊಬ್ಬ ತಳ್ಳಿದ್ದು, ಆಕೆ ಅಲ್ಲಿಯೇ ನಜ್ಜುಗುಜ್ಜಾಗಿ ಸಾವನ್ನಪ್ಪಿರುವ ಭೀಕರ ಘಟನೆ ತಮಿಳುನಾಡಿನ ಚೆನ್ನೈನ ಸೇಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮೃತ ಯುವತಿಯನ್ನು 20 ವರ್ಷದ ಕಾಲೇಜು ವಿದ್ಯಾರ್ಥಿನಿ ಎಸ್ ಸತ್ಯ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಸತೀಶ್ (23) ಎಂದು ಗುರುತಿಸಲಾಗಿದೆ.
ಮೃತ ಯುವತಿ ಸತ್ಯ (20) ಚೆನ್ನೈನ ಆರಂಬಾಕ್ಕಂ ಪ್ರದೇಶದವರು. ಖಾಸಗಿ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷ ಓದುತ್ತಿದ್ದರು. ಆರೋಪಿ ಸತೀಶ್ ಕೂಡ ಅದೇ ಪ್ರದೇಶದವರು. ಆತ ಸತ್ಯರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಗುರುವಾರ ಸತ್ಯ ಕಾಲೇಜಿಗೆ ಹೋಗಲು ರೈಲು ನಿಲ್ದಾಣಕ್ಕೆ ಬಂದಿದ್ದ ವೇಳೆ ಅಲ್ಲಿಗೆ ಬಂದ ಸತೀಶ್ ಸತ್ಯ ಜೊತೆ ವಾಗ್ವಾದ ನಡೆಸಿದ್ದಾನೆ.

ವಾಗ್ವಾದದ ಬಳಿಕ ರೈಲು ಪ್ಲಾಟ್‌ಫಾರ್ಮ್‌ಗೆ ಬಂದ ಸತೀಶ್ ಹಠಾತ್ತನೆ ಸತ್ಯ ಅವರನ್ನು ಟ್ರ್ಯಾಕ್‌ಗೆ ತಳ್ಳಿ ಓಡಿ ಹೋಗಿದ್ದಾನೆ. ಹಳಿ ಮೇಲೆ ಬಿದ್ದ ಸತ್ಯ ರೈಲಿಗೆ ನಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೊಲೀಸರು ಸತ್ಯ ಅವರ ಮೃತದೇಹವನ್ನು ಹಳಿಯಿಂದ ಹೊರತೆಗೆದು, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದ್ದು, ಪರಾರಿಯಾಗಿರುವ ಸತೀಶ್‌ಗಾಗಿ ರೈಲ್ವೇ ಪೊಲೀಸರ ಪರವಾಗಿ 4 ವಿಶೇಷ ಪಡೆಗಳು ಹಾಗೂ ಪರಂಗಿಮಲೈ ಜಿಲ್ಲಾಧಿಕಾರಿ ನೇತೃತ್ವದಲ್ಲಿ 3 ವಿಶೇಷ ಪಡೆಗಳು ತೀವ್ರ ಶೋಧ ನಡೆಸುತ್ತಿವೆ.

ಆರೋಪಿ ಸತೀಶ್ 6 ವರ್ಷಗಳಿಂದ ಸತ್ಯರನ್ನು ಪ್ರೀತಿಸುತ್ತಿದ್ದು, ಸತೀಶ್‌ನ ನಡೆಗಳು ಇಷ್ಟವಾಗದ ಕಾರಣ ಸತ್ಯ ಆತನಿಂದ ದೂರವಾಗಿದ್ದರು. ಹೀಗಾಗಿ ಕೊಲೆ ನಡೆದಿದೆ ಎಂದು ವರದಿಯಾಗಿದೆ. ಇನ್ನು, ಹತ್ಯೆಗೀಡಾದ ವಿದ್ಯಾರ್ಥಿನಿ ಸತ್ಯ ಅವರ ತಾಯಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ ಎಂದೂ ಹೇಳಲಾಗಿದೆ.












Click it and Unblock the Notifications