ಭಾರತೀಯ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ದುರಹಂಕಾರಿ - ಸುಳ್ಳುಗಾರ: ಮಮತಾ ಬ್ಯಾನರ್ಜಿ
Mamata Banerjee: ಭಾರತೀಯ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ದುರಹಂಕಾರಿ ಮತ್ತು ಸುಳ್ಳುಗಾರ ಎಂದು ಕರೆದಿದ್ದಾರೆ. ಭಾರತದಾದ್ಯಂತ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿದೆ. ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರದ ನಿರ್ಧಾರಗಳನ್ನು ತೀವ್ರವಾಗಿ ಖಂಡಿಸುವುದನ್ನು ಮುಂದುವರಿಸಿರುವ ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇದೀಗ ಭಾರತೀಯ ಚುನಾವಣಾ ಆಯೋಗದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಾಧಿತ / ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಕುಟುಂಬಗಳು ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ದೆಹಲಿಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಭಾರತೀಯ ಚುನಾವಣಾ ಆಯೋಗ ಮುಖ್ಯ ಆಯುಕ್ತರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿರುವ ಮಮತಾ ಬ್ಯಾನರ್ಜಿ ಅವರು, ಭಾರತೀಯ ಚುನಾವಣಾ ಆಯೋಗದ ಸಿಇಸಿ "ದುರಹಂಕಾರಿ ಮತ್ತು ಸುಳ್ಳುಗಾರ" ಎಂದು ಕರೆದಿದ್ದಾರೆ. ಜೊತೆಗೆ ಬಂಗಾ ಭವನ ಆವರಣದ ಹೊರಗೆ ಭಾರೀ ಪೊಲೀಸ್ ನಿಯೋಜನೆ ಮಾಡಿರುವುದನ್ನು ಪ್ರಶ್ನಿಸಿದ್ದಾರೆ.

ಮುಂದುವರಿದು ಮಮತಾ ಬ್ಯಾನರ್ಜಿ ಅವರು, ಈ ಸಂದರ್ಭದಲ್ಲಿ ನನಗೆ ತುಂಬಾ ದುಃಖವಾಗಿದೆ. ನಾನು ಬಹಳ ಸಮಯದಿಂದ ದೆಹಲಿ ರಾಜಕೀಯದಲ್ಲಿದ್ದೇನೆ. ನಾನು 4 ಬಾರಿ ಸಚಿವೆಯಾಗಿದ್ದು, 7 ಬಾರಿ ಸಂಸದಳಾಗಿದ್ದೆ. ಇಷ್ಟೊಂದು ದುರಹಂಕಾರಿ, ಇಷ್ಟೊಂದು ಸುಳ್ಳುಗಾರನಾಗಿರುವ ಚುನಾವಣಾ ಆಯುಕ್ತರನ್ನು ನಾನು ಎಂದಿಗೂ ನೋಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
Mamata Banerjee: 58 ಲಕ್ಷ ಜನರ ಹೆಸರು ಡಿಲೀಟ್
ಇನ್ನು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಬರೋಬ್ಬರಿ 58 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ. ಯಾವುದೇ ಕುರ್ಚಿ ಯಾರಿಗೂ ಶಾಶ್ವತವಲ್ಲ, ನಾನು ನಿಮ್ಮ ಕುರ್ಚಿಯನ್ನು ಗೌರವಿಸುತ್ತೇನೆ ಎಂದು ನಾನು ಮುಖ್ಯ ಚುನಾವಣಾ ಆಯುಕ್ತರಿಗೆ ಹೇಳಿದೆ.
ಒಂದು ದಿನ ನೀವೂ ಹೋಗಬೇಕು. ಬಂಗಾಳವನ್ನು ಏಕೆ ಗುರಿಯಾಗಿಸಿಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ, ಆದರೆ ಭಾರತೀಯ ಚುನಾವಣಾ ಆಯೋಗವು 58 ಲಕ್ಷ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿದೆ. ಅಲ್ಲದೇ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವಕಾಶವನ್ನೂ ಕೊಟ್ಟಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಆಕ್ರೋಶ ಹೊರ ಹಾಕಿದ್ದಾರೆ.
Mamata Banerjee: ಬೆದರಿಕೆ ಹಾಕುತ್ತಿದ್ದಾರೆ
ಕಳೆದ ವಾರವೇ ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭೇಟಿ ಮಾಡಿ ಚರ್ಚೆ ಮಾಡಬೇಕಾಗಿತ್ತು. ಸಿಇಸಿ ಕುಮಾರ್ ಅವರು ಸೋಮವಾರ ಬ್ಯಾನರ್ಜಿಗೆ ಸಭೆಗೆ ಸಮಯ ನೀಡಿದ್ದರು. ಭಾನುವಾರ ರಾಷ್ಟ್ರ ರಾಜಧಾನಿಗೆ ತಲುಪಿದ ಬ್ಯಾನರ್ಜಿ ಅವರೊಂದಿಗೆ ತೃಣಮೂಲ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ವಕೀಲರು ಸಹ ಆಗಿರುವ ಕಲ್ಯಾಣ್ ಬ್ಯಾನರ್ಜಿ ಇದ್ದರು.
ಬಂಗಾಳದ ಜನರು ಚುನಾವಣಾ ಆಯೋಗದೊಂದಿಗೆ ತಮ್ಮ ಸಮಸ್ಯೆಗಳನ್ನು ಎತ್ತಲು ಬಂದಿದ್ದರು, ಆದರೆ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ದೂರಿದ್ದರು.
ಮುಂದುವರಿದು ದೆಹಲಿ ಪೊಲೀಸರು, ಯಾವುದೇ ಪೊಲೀಸ್ ಸಿಬ್ಬಂದಿ ಬಂಗಾ ಭವನಕ್ಕೆ ಪ್ರವೇಶಿಸಿಲ್ಲ ಅಥವಾ ಅಲ್ಲಿನ ಜನರ ಪ್ರವೇಶ, ನಿರ್ಗಮನಕ್ಕೆ ಅಡ್ಡಿಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.












Click it and Unblock the Notifications