Lok sabha elections 2024: ಯಾವುದೇ ಮೈತ್ರಿಯಿಲ್ಲ, ಏಕಾಂಗಿ ಹೋರಾಟ ಎಂದು ಶಾಕ್ ನೀಡಿದ ಮಮತಾ ಬ್ಯಾನರ್ಜಿ!
ಕೋಲ್ಕತ್ತಾ, ಮಾರ್ಚ್ 03: ತೃಣಮೂಲ ಕಾಂಗ್ರೆಸ್ ಮುಂದಿನ ವರ್ಷದ ರಾಷ್ಟ್ರೀಯ ಚುನಾವಣೆಯಲ್ಲಿ "ಜನರ ಬೆಂಬಲದೊಂದಿಗೆ" ಏಕಾಂಗಿಯಾಗಿ ಹೋರಾಡಲಿದೆ ಎಂದು ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಈ ಮೂಲಕ ವಿರೋಧ ಪಕ್ಷಗಳ ಮೈತ್ರಿಗೆ ಈಗಲೇ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಮಾತುಕತೆ ಆರಂಭವಾಗುವ ಮುನ್ನವೆ ಮುರಿದುಬಿದ್ದಿದೆ.
ಗುರುವಾರ ಸಾಗರ್ದಿಘಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು "ಅನೈತಿಕ" ಎಂದು ಕಿಡಿಕಾರಿರುವ ಅವರು, ತೃಣಮೂಲವನ್ನು ಸೋಲಿಸಲು ಕಾಂಗ್ರೆಸ್ ಪಕ್ಷವು ಸಿಪಿಐ(ಎಂ) ಜೊತೆಗೆ ಬಿಜೆಪಿಯೊಂದಿಗೂ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ಅಪವಿತ್ರ ಮೈತ್ರಿ ಮಾಡಿಕೊಂಡರೆ ಬಿಜೆಪಿ ಜೊತೆ ಕಾಂಗ್ರೆಸ್ ಹೇಗೆ ಸೆಣಸುತ್ತದೆ, ಬಿಜೆಪಿ ವಿರುದ್ಧ ಎಡಪಕ್ಷಗಳು ಹೇಗೆ ಹೋರಾಡುತ್ತವೆ.. ಸಿಪಿಎಂ ಮತ್ತು ಕಾಂಗ್ರೆಸ್ ಬಿಜೆಪಿ ವಿರೋಧಿ ಎಂದು ಹೇಗೆ ಹೇಳಿಕೊಳ್ಳುತ್ತಿವೆ? ಎಂದು ಪ್ರಶ್ನಿಸಿದ್ದಾರೆ.

ಬಂಗಾಳದ ಸಾಗರ್ದಿಘಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ತೃಣಮೂಲದಿಂದ ವಿಧಾನಸಭಾ ಸ್ಥಾನವನ್ನು ಗೆದ್ದುಕೊಂಡಿದೆ. ಇದಕ್ಕೆ ಟೀಕೆ ಮಾಡಿರುವ ಮಮತಾ ಬ್ಯಾನರ್ಜಿ ಕಾಂಗ್ರೆಸ್, ಎಡ ಮತ್ತು ಬಿಜೆಪಿ ಎಲ್ಲರೂ ಸಾಗರ್ದಿಘಿಯಲ್ಲಿ ಕೋಮುವಾದದ ಆಟವಾಡಿದ್ದಾರೆ. ವ್ಯತ್ಯಾಸವೆಂದರೆ ಬಿಜೆಪಿ ಇದನ್ನು ಬಹಿರಂಗವಾಗಿ ಆಡಿದೆ, ಆದರೆ ಸಿಪಿಎಂ ಮತ್ತು ಕಾಂಗ್ರೆಸ್ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
"ನಾವು ಸಿಪಿಎಂ ಅಥವಾ ಕಾಂಗ್ರೆಸ್ ಮಾತನ್ನು ಕೇಳಬಾರದು. ಒಮ್ಮೆ ಬಿಜೆಪಿ ಜತೆ ಕೆಲಸ ಮಾಡಿದವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಇದೊಂದು ಪಾಠ. 2024 ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜನರ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತದೆ. ಇತರ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ಜನರ ಬೆಂಬಲದೊಂದಿಗೆ ನಾವು ಏಕಾಂಗಿಯಾಗಿ ಹೋರಾಡುತ್ತೇವೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
2019 ರಲ್ಲಿ, ಮಮತಾ ಬ್ಯಾನರ್ಜಿ ವಿರೋಧ ಪಕ್ಷದ ಮೈತ್ರಿಗೆ ಕಾರಣರಾದ ಪ್ರಮುಖ ಸಂವಾದಕರಲ್ಲಿ ಒಬ್ಬರಾಗಿದ್ದರು. ಆದರೆ ಅದು ಸಂಪೂರ್ಣ ವಿಫಲವಾಗಿ, ಬಿಜೆಪಿ ತನ್ನ ರಾಜ್ಯದಲ್ಲಿ 42 ಸಂಸದೀಯ ಸ್ಥಾನಗಳಲ್ಲಿ 18 ಅನ್ನು ಗೆದ್ದಿತು. ಅಂದಿನಿಂದ, ಮಮತಾ ಬ್ಯಾನರ್ಜಿ ತಮ್ಮ ಬಂಗಾಳದ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ. ಯಾವುದೇ ವಿರೋಧ ಪಕ್ಷಗಳ ಶಕ್ತಿ ಪ್ರದರ್ಶನದಲ್ಲಿ ಅವರ ಭಾಗವಹಿಸುವಿಕೆ ಬಹುತೇಕ ಶೂನ್ಯಕ್ಕೆ ಕ್ಷೀಣಿಸುತ್ತಿದೆ.

ಹೀಗಾಗಿ 2021 ರಲ್ಲಿ, ಪಶ್ಚಿಮ ಬಂಗಾಳದಲ್ಲಿ ಅವರಿಗೆ ಮೂರನೇ ಬಾರಿಗೆ ಭರ್ಜರಿ ವಿಜಯವನ್ನು ತಂದುಕೊಟ್ಟಿತು. ರಾಜ್ಯವನ್ನು ಮೀರಿ ತನ್ನ ರೆಕ್ಕೆಗಳನ್ನು ಹರಡುವ ಉತ್ಸಾಹ ಹೆಚ್ಚಿಸಿತು. ಆದರೆ ರಾಜ್ಯದ ಹೊರಗೆ ಅವರ ಪಕ್ಷ ಸಾಧನೆ ಮಾಡಲಿಲ್ಲ. ಗೋವಾದಲ್ಲಿ ಮತ್ತು ತ್ರಿಪುರಾದಲ್ಲಿ ಖಾತೆ ತೆರೆಯಲು ವಿಫಲವಾಗಿದೆ. ಮೇಘಾಲಯದಲ್ಲಿ ಪಕ್ಷವು ಐದು ಸ್ಥಾನಗಳನ್ನು ಗೆದ್ದುಕೊಂಡಿದೆ.












Click it and Unblock the Notifications