ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದೆ ಅವಮಾನಿಸಲಾಗುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, ಆಗಸ್ಟ್. 02: ವಿರೋಧ ಪಕ್ಷದ ನಾಯಕನಾಗಿದ್ದರೂ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದೆ ಅವಮಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ. ವಿಜಯ್ ಚೌಕ್‌ನಲ್ಲಿ ವಿಪಕ್ಷಗಳ ಹಿರಿಯ ನಾಯಕರ ಜೊತೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳನ್ನು ಹೆದರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಹೋರಾಟವನ್ನು ಮುಂದುವರೆಸುತ್ತಿದ್ದು, 'ಭಾರತ'ವು ಹೆದರುವುದಿಲ್ಲ ಮತ್ತು ಓಡಿಹೋಗಲು 'ಭಾರತ'ವನ್ನು ರಚಿಸಲಾಗಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಎಲ್ಲರನ್ನೂ ಸಮಾನವಾಗಿ ನಡೆಸಿಕೊಂಡಿದೆ ಎಂಬ ಸರ್ಕಾರದ ಹೇಳಿಕೆಗೆ ತಿರುಗೇಟು ನೀಡಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ತನಗೆ ಮಾತನಾಡಲು ಸಹ ಅವಕಾಶ ನೀಡಲಿಲ್ಲ ಮತ್ತು 10 ಸೆಕೆಂಡುಗಳಲ್ಲಿ ಮೈಕ್ ಆಫ್ ಮಾಡಲಾಗಿದೆ. ಇದು ತನಗೆ ಮಾಡಿದ ಅವಮಾನ. ಇದು ಪ್ರಜಾಪ್ರಭುತ್ವವೇ..? ಇದು ಸರ್ವಾಧಿಕಾರ ಮತ್ತು ಇದು ಹಿಟ್ಲರ್ ಶಾಹಿ ಆಡಳಿತ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ನವದೆಹಲಿಯಲ್ಲಿ ಮಾಧ್ಯಮಗಳ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಖಲೆ ಸಂಖ್ಯೆಯ 65 ರಾಜ್ಯಸಭಾ ಸಂಸದರು ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಸುವಂತೆ ಕೋರಿದ್ದಾರೆ ಎಂದು ಮಲ್ಲಿಕಾರ್ಜನ ಖರ್ಗೆ ತಿಳಿಸಿದ್ದಾರೆ. "ಇದು ಸಾಮಾನ್ಯ ಘಟನೆಯಲ್ಲದ ಕಾರಣ ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚಿಸಲು ಅನೇಕ ಸದಸ್ಯರು ಕೋರಿದ್ದು ಇದೇ ಮೊದಲು. ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಜನರನ್ನು ಕೊಲ್ಲಲಾಗುತ್ತಿದೆ. ಇಷ್ಟಾದರೂ ಸರಕಾರ ಚರ್ಚೆಗೆ ಸಿದ್ಧವಿಲ್ಲ" ಎಂದು ಆರೋಪಿಸಿದ್ದಾರೆ.

ಇನ್ನು, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಮಣಿಪುರ ವಿಷಯದ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸಮಯ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ರಾಷ್ಟ್ರಪತಿಗಳು ಇನ್ನೂ ಸಮಯ ನೀಡಿಲ್ಲ ಎಂದು ಮಾಹಿತಿ ನೀಡಿವೆ. ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಮಗ್ರ ಚರ್ಚೆಗೆ ಆಗ್ರಹಿಸಿ ಸಂಸತ್ತಿನಲ್ಲಿ ಪ್ರಧಾನಿಯವರ ಹೇಳಿಕೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಿದೆ. ಅನೇಕ ಜನರು ಪ್ರಾಣ ಕಳೆದುಕೊಂಡಿದ್ದು, ಈ ವಿಷಯದಲ್ಲಿ ರಾಷ್ಟ್ರಪತಿಗಳ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. 21 ವಿರೋಧ ಪಕ್ಷದ ಸಂಸದರ ನಿಯೋಗವು ಜನಾಂಗೀಯ ಕಲಹ ಪೀಡಿತ ರಾಜ್ಯಕ್ಕೆ ಭೇಟಿ ನೀಡಿತ್ತು. ಅಲ್ಲಿನ ಪರಿಸ್ಥಿತಿಯ ಬಗ್ಗೆ ಭಾರತ ಮೈತ್ರಿಕೂಟದ ನಾಯಕರಿಗೆ ತಿಳಿಸಿದೆ. ನಿಯೋಗವು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಎರಡೂ ಬೆಟ್ಟಗಳು ಮತ್ತು ಕಣಿವೆಗಳಲ್ಲಿನ ಪರಿಹಾರ ಶಿಬಿರಗಳಲ್ಲಿ ಜನರನ್ನು ಭೇಟಿ ಮಾಡಿ ಮಾಹಿತಿ ಪಡೆದಿದೆ.












Click it and Unblock the Notifications