Maldives-Lakshadweep: ಭಾರತ ಸರ್ಕಾರದಿಂದ ಲಕ್ಷದ್ವೀಪದಲ್ಲಿ ಹೊಸ ಏರ್‌ಪೋರ್ಟ್, ಮಾಲ್ಡೀವ್ಸ್‌ಗೆ ಗುನ್ನಾ?
ನವದೆಹಲಿ, ಜನವರಿ 10: ಭಾರತದ ಮೇಲಿನ ಟೀಕೆಗಳಿಂದ ಮಾಲ್ಡೀವ್ಸ್ ಪರಿತಪಿಸುವ ವಾತಾವರಣ ನಿರ್ಮಾಣವಾಗಿದೆ. ಇದೆಲ್ಲ ಬೆಳವಣಿಗೆ ಮಧ್ಯೆ ಭಾರತ ಸರ್ಕಾರವು ಲಕ್ಷ ದ್ವೀಪದ ಬೆಳವಣಿಗೆ ಕುರಿತು ಯೋಜನೆ ರೂಪಿಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಹೌದು, ಮಾಲ್ಡೀವ್ಸ್‌ಗೆ ಪರ್ಯಾಯ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಬೇಕು ಎಂಬ ಕೂಗು, ಅಭಿಯಾನಗಳ ಮಧ್ಯೆ ಲಕ್ಷದ್ವೀಪದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಯೋಚನೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೂಪಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ, ಲಕ್ಷ ದ್ವೀಪದಲ್ಲಿ ವಿಮಾನ ನಿಲ್ದಾಣದಲ್ಲಿ ಕೇವಲ ನಾಗರಿಕ ವಿಮಾನಗಳು ಮಾತ್ರವಲ್ಲದೇ, ಯುದ್ಧ ವಿಮಾನ ಹಾಗೂ ಇತರ ಸೇನಾ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಲಿದೆ. ಅಂದರೆ ಎಲ್ಲ ರೀತಿಯ ವಿಮಾನಗಳು ಇಳಿಯಬಲ್ಲ ಜಂಟಿ ಏರ್‌ಫಿಲ್ಡ್ ಸಿದ್ಧಪಡಿಸುವ ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಮೂಲಕ ಮಾಲ್ಡವ್ಸ್‌ಗೆ ಮತ್ತೊಂದು ಆಘಾತ ನೀಡದಂತಾಗಿದೆ.
ಸರ್ಕಾರದ ಯೋಚನೆ ಮತ್ತೆ ಸದ್ದು
ಲಕ್ಷದ್ವೀಪದಲ್ಲಿ ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಇಂದು ನೆನ್ನೆಯದಲ್ಲ. ಇದು ಹಲವು ವರ್ಷಗಳ ಹಿಂದೆಯೇ ಚಿಂತನೆ ನಡೆಸಿದ ಪ್ಲಾನ್ ಆಗಿದೆ. ಆದರೆ ಅದನ್ನು ರಕ್ಷಣಾ ಬಳಕೆಗೂ ಲಭ್ಯವಾಗುವಂಥ ಕಲ್ಪನೆ ಮೇಲೆ ನಿರ್ಮಿಸಬೇಕು ಎಂಬ ಅಂಶಗಳನ್ನು ಇತ್ತೀಚೆಗೆ ಪ್ರಸ್ತಾಪಿಸಲಾಗಿತ್ತು.

ಅಂದಿನಿಂದ ಈ ಯೋಜನೆ ಜಾರಿಗೊಳಿಸುವ ವಿಚಾರಗಳು ಆಗಾಗ ಮುನ್ನೆಲೆಗೆ ಬರುತ್ತಿದೆ. ಆದರೆ ಇದೀಗ ಮಾಲ್ಡೀವ್ಸ್ ಭಾರತದ ಮೇಲೆ ಮಾಡಿದ ಆರೋಪಗಳಿಗೆ ತಿರುಗೇಟು ರೂಪದಲ್ಲಿ ಕೇಂದ್ರ ಸರ್ಕಾರದ ಯೋಜನೆ ಮತ್ತೆ ಸದ್ದು ಮಾಡುತ್ತಿದೆ. ಸದ್ಯ ಯೋಜನೆಯನ್ನು ಜಾರಿಗೊಳಿಸುವ ಪ್ರಕ್ರಿಯೆಗಳು ಸಕ್ರಿಯವಾಗಿವೆ ಎನ್ನಲಾಗಿದೆ.
ಹೊಸ ವಿಮಾನ ನಿಲ್ದಾಣದಿಂದ ನಿಗಾ ಸಾಧ್ಯ
ಈ ಲಕ್ಷದ್ವೀಪದಲ್ಲಿ ವಾಯುನೆಲೆ, ಮಿಲಿಟರಿ ಏರ್‌ಫಿಲ್ಡ್‌ಗಳು ಸ್ಥಾಪನೆಯಾದರೆ ಅದು ಭಾರತಕ್ಕೆ ಬಲವಾದ ಸಾಮರ್ಥ್ಯ ತಂದು ಕೊಡಲಿದೆ. ಏಕೆಂದರೆ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದ ಪ್ರದೇಶದ ಮೇಲೆ ಕಣ್ಣಿಡಲು ನೆಲೆಯಾಗಿ ಬಳಸಬಹುದು.
ಇದು ಇತ್ತೀಚೆಗೆ ಸರಕುಗಳ ಮೇಲೆ ಡೋನ್ ದಾಳಿ, ಹಡಗು ಹೈಜಾಕ್ ಸೇರಿದಂತೆ ಹಲವು ಚಟುವಟಿಕೆಗಳು ಅರಬ್ಬಿ ಸಮುದ್ರದಲ್ಲಿ ನಡೆಯುತ್ತಿವೆ. ಹೀಗಾಗಿ ಇಂಥವುಗಳ ಮೇಲೆ ನಿಗಾ ಇಡಲು ಲಕ್ಷದ್ವೀಪದಲ್ಲಿ ಏರ್‌ಫಿಲ್ಡ್ ನಿರ್ಮಾಣ ಅಗತ್ಯವಿದೆ ಎಂದು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಸ್ತುತ ಲಕ್ಷದ್ವೀಪದ ವ್ಯಾಪ್ತಿಯ ಆಗತ್ತಿ ಭೂಪ್ರದೇಶದಲ್ಲಿ ಕೇವಲ ಒಂದು ಏರ್‌ಸ್ಟ್ರಿಪ್ ಇದೆ. ಇಲ್ಲಿಗೆ ತೆರಳಬೇಕಾದರೆ ಈ ವಿಮಾನ ನಿಲ್ದಾಣಕ್ಕೆ ಇಳಿಯಬೇಕಾಗುತ್ತದೆ.
ಲಕ್ಷದ್ವೀಪದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣವಾದರೆ ಪ್ರವಾಸೋದ್ಯಮ ಜತೆಗೆ ಭಾರತೀಯ ಮಿಲಿಟಿರಿಗೂ ಅನುಕೂಲವಾಗಲಿದೆ. ಹೆಚ್ಚು ಹೆಚ್ಚು ಜನರನ್ನು ಸೆಳೆಯಲು ಸಾಧ್ಯವಾಗುತ್ತದೆ.












Click it and Unblock the Notifications