Maharashtra Election 2024: ಸ್ಪಷ್ಟ ಸಂದೇಶ ಕೊಟ್ಟ ದೇವೇಂದ್ರ ಫಡ್ನವೀಸ್, ಸಿಟ್ಟಾಗ್ತಾರಾ ಏಕನಾಥ್ ಶಿಂಧೆ?
ಮುಂಬೈ, ಡಿಸೆಂಬರ್ 09: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ 2024ರ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ 'ಮಹಾಯತಿ' ಮೈತ್ರಿಕೂಟದ ಹೊಸ ಸರ್ಕಾರ ರಚನೆಯಾಗಿದೆ. ಆದರೆ ಇನ್ನೂ ಸಹ ಖಾತೆ ಹಂಚಿಕೆಯಾಗಿಲ್ಲ. ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ, ಅಜಿತ್ ಪವಾರ್‌ಗೆ ಖಾತೆ ಹಂಚಿಕೆ ಮಾಡಬೇಕು. ಸಚಿವ ಸಂಪುಟವೂ ವಿಸ್ತರಣೆಯಾಗಬೇಕು. ಆದರೆ ಕೆಲವು ಖಾತೆಗಳ ಹಂಚಿಕೆಗೆ ಆಗುತ್ತಿರುವ ಹಗ್ಗಜಗ್ಗಾಟದ ಕಾರಣ ಖಾತೆ ಹಂಚಿಕೆ ಕಗ್ಗಂಟಾಗಿ ಕುಳಿತಿದೆ. ಮಹಾಯತಿ ಮೈತ್ರಿಕೂಟದ ನಾಯಕರು ಒಟ್ಟಾಗಿ ಕುಳಿತು ಈ ಕುರಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಬೇಕಿದೆ.
ದೇವೇಂದ್ರ ಫಡ್ನವೀಸ್ ಡಿಸೆಂಬರ್ 5ರ ಗುರುವಾರ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಏಕನಾಥ್ ಶಿಂಧೆ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳಾಗಿ ಸಂಪುಟ ಸೇರಿದ್ದಾರೆ. ಆದರೆ ಇನ್ನೂ ಖಾತೆಗಳನ್ನು ಇಬ್ಬರೂ ನಾಯಕರಿಗೆ ನೀಡಿಲ್ಲ.

ಶಿಂಧೆ ಬೇಡಿಕೆಗೆ ಬಗ್ಗದ ಬಿಜೆಪಿ: ಮಹಾಯತಿ ಸರ್ಕಾರ ರಚನೆ ಪ್ರಕ್ರಿಯೆ ಪ್ರಾರಂಭದಿಂದಲೂ 57 ಸೀಟು ಗೆದ್ದಿರುವ ಶಿವಸೇನೆ (ಏಕನಾಥ್ ಶಿಂಧೆ ಬಣ) ಹಲವು ಬೇಡಿಕೆಗಳನ್ನು ಮುಂದಿಡುತ್ತಿದೆ. ಈಗ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗೃಹ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ದೆಹಲಿ ನಾಯಕರು ಈ ಕುರಿತು ಸ್ಪಷ್ಟಪಡಿಸಿದರೂ ಸಹ ಅವರು ಒಪ್ಪಿಗೆ ನೀಡಿಲ್ಲ.
ಈಗ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ಈ ವಿಚಾರದಲ್ಲಿ ಶಿಂಧೆಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಗೃಹ ಖಾತೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಕಂದಾಯ, ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಈ ಮೂರು ಖಾತೆಗಳ ಆಯ್ಕೆಯನ್ನು ನೀಡಿದ್ದಾರೆ.
ಬಿಜೆಪಿ ಈಗಾಗಲೇ ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ಗೆ ಹಣಕಾಸು ಮತ್ತು ಯೋಜನಾ ಖಾತೆಯನ್ನು ನೀಡುವುದಾಗಿ ಭರವಸೆ ಕೊಟ್ಟಿದೆ. ಆದರೆ ಮಹಾಯತಿ ಸರ್ಕಾರ ರಚನೆಗೆ ಬೆಂಬಲ ನೀಡಿದ ಶಿವಸೇನೆ (ಏಕನಾಥ್ ಶಿಂಧೆ) ಬಣಕ್ಕೆ ಖಾತೆ ಹಂಚಿಕೆ ಮಾಡುವುದು ಕಗ್ಗಂಟಾಗುತ್ತಿದೆ.
ಡಿಸೆಂಬರ್ 16ರಂದು ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡಿ, ಖಾತೆ ಹಂಚಿಕೆಯನ್ನು ಮಾಡಬೇಕಿದೆ. ಆದರೆ ಶಿವಸೇನೆ (ಏಕನಾಥ್ ಶಿಂಧೆ ಬಣ) ಶಾಸಕರು ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದವರು ಅವರಿಗೆ ಪ್ರಮುಖ ಖಾತೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಆದರೆ 288 ಸದ್ಯದ ಬಲದ ವಿಧಾನಸಭೆಯಲ್ಲಿ 132 ಸೀಟುಗಳಲ್ಲಿ ಗೆದ್ದಿರುವ ಬಿಜೆಪಿ ಮುಖ್ಯಮಂತ್ರಿ ಹುದ್ದೆ ಮತ್ತು ಗೃಹ ಖಾತೆ ತನಗೆ ಬೇಕು, ಇದು ನಮ್ಮ ಹಕ್ಕು ಎಂದು ವಾದ ಮಂಡಿಸಿದೆ, ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರವಿದೆ. ಗೃಹ ಖಾತೆಯು ಬಿಜೆಪಿ ಬಳಿಯೇ ಇದ್ದು, ಅಮಿತ್ ಶಾ ಸಚಿವರು. ರಾಜ್ಯದಲ್ಲೂ ಅದೇ ಪಕ್ಷದ ಕೈಯಲ್ಲಿ ಗೃಹ ಖಾತೆ ಇದ್ದರೆ ಸಂವಹನಕ್ಕೆ ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.
ಮಹಾಯತಿ ಮೈತ್ರಿಕೂಟ ಪಕ್ಷಗಳಿಗೆ ಸಮಾನ ಗೌರವ ನೀಡುತ್ತೇವೆ ಎಂದು ಬಿಜೆಪಿ ಹೇಳಿದೆ. 132 ಸೀಟು ಗೆದ್ದಿರುವ ಬಿಜೆಪಿಗೆ ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನ ಸಿಗಲಿದೆ. ಬಿಜೆಪಿಯಿಂದ 18-20, ಶಿವಸೇನೆ 12-14 ಮತ್ತು ಎನ್‌ಸಿಪಿಯ 9-11 ಶಾಸಕರು ದೇವೇಂದ್ರ ಫಡ್ನವೀಸ್ ಸಂಪುಟವನ್ನು ಸೇರಲಿದ್ದಾರೆ.
ಮಹಾರಾಷ್ಟ್ರದಲ್ಲಿ ಸಚಿವ ಸಂಪುಟದಲ್ಲಿ ಒಟ್ಟು 43 ಸಚಿವರು ಇರಲು ಅವಕಾಶವಿದೆ. ಈಗ ದೇವೇಂದ್ರ ಫಡ್ನವೀಸ್ 30-35 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಯಾವ ಪಕ್ಷಕ್ಕೆ ಯಾವ ಖಾತೆ? ಎಂಬುದು ಅಂತಿಮಗೊಳ್ಳಬೇಕಿದೆ.
ಬಿಜೆಪಿ ಮುಖ್ಯಮಂತ್ರಿ ಹುದ್ದೆ ಗೃಹ ಖಾತೆಯ ಜೊತೆಗೆ ಇಂಧನ, ಜಲ ಸಂಪನ್ಮೂಲ, ವಸತಿ, ಗ್ರಾಮೀಣಾಭಿವೃದ್ಧಿ, ಇತರೆ ಹಿಂದುಳಿದ ವರ್ಗಗಳ ಕಲ್ಯಾಣ, ಉನ್ನತ ಶಿಕ್ಷಣ, ತಾಂತ್ರಿ ಶಿಕ್ಷಣ ಖಾತೆಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದೆ ಎಂಬ ಮಾಹಿತಿ ಇದೆ.












Click it and Unblock the Notifications