Salman Khan: ಶೂಟೌಟ್ ಬಳಿಕ ಸಲ್ಮಾನ್ ಖಾನ್‌ಗೆ ಬಿಗಿ ಭದ್ರತೆಯ ಭರವಸೆ ನೀಡಿದ ಮುಖ್ಯಮಂತ್ರಿ
ಬೆಂಗಳೂರು, ಏಪ್ರಿಲ್. 14: ಭಾನುವಾರ ಬೆಳಗ್ಗೆಯೇ ಬಾಲಿವುಡ್ ಭಾಯ್‌ಜಾನ್ ಮನೆ ಮೇಲೆ ಗುಂಡಿನ ದಾಳಿ ನಡೆದ ಸುದ್ದಿಯಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಅಲ್ಲಿರುವ ಅವರ ನಿವಾಸದ ಹೊರಗೆ ಇಬ್ಬರು ಆರೋಪಿಗಳು ಹಲವಾರು ಸುತ್ತು ಗುಂಡು ಹಾರಿಸಿದ್ದಾರೆ.
ಘಟನೆ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಮಾತನಾಡಿದ್ದಾರೆ. ಯೋಗಕ್ಷೇಮ ವಿಚಾರಿಸಿದ ಅವರು ಬಿಗಿ ಭದ್ರತೆ ನೀಡುವ ಭರವಸೆ ನೀಡಿದ್ದಾರೆ. ಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಏಕನಾಥ್ ಶಿಂಧೆ, "ಇದೊಂದು ದುರದೃಷ್ಟಕರ ಘಟನೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಕಾನೂನನ್ನು ಕೈಗೆ ತೆಗೆದುಕೊಳ್ಳುವವರನ್ನು ಯಾರನ್ನು ಬಿಡುವುದಿಲ್ಲ" ಎಂದು ಹೇಳಿದ್ದಾರೆ.

ನಟ ಸಲ್ಮಾನ್ ಖಾನ್ ಕುಟುಂಬದ ಭದ್ರತೆಯನ್ನು ಹೆಚ್ಚಿಸಲು ಈಗಾಗಲೇ ಮುಂಬೈ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿರುವ ಅವರು, ಸರ್ಕಾರ ನಿಮ್ಮೊಂದಿಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಸಲ್ಮಾನ್ ಖಾನ್‌ಗೆ ಭರವಸೆ ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ.
"ಸಲ್ಮಾನ್ ಖಾನ್ ಮತ್ತು ಅವರ ಇಡೀ ಕುಟುಂಬದ ಭದ್ರತೆಯನ್ನು ನೋಡಿಕೊಳ್ಳಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಮುಂಬೈ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ. ನಾನು ಸಲ್ಮಾನ್ ಖಾನ್ ಅವರೊಂದಿಗೂ ಮಾತನಾಡಿದ್ದೇನೆ. ಸರ್ಕಾರವು ಅವರೊಂದಿಗಿದೆ ಮತ್ತು ಅವರು ಚಿಂತಿಸಬೇಕಾಗಿಲ್ಲ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.
ನಟ ಸಲ್ಮಾನ್ ಖಾನ್ ಅವರ ಭದ್ರತಾ ಸಿಬ್ಬಂದಿಯ ಹೇಳಿಕೆಯ ಆಧಾರದ ಮೇಲೆ ಮೆಟ್ರೋಪಾಲಿಟನ್ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆದರೂ ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ. ಮುಂಬೈನ ಡಿಸಿಪಿ ರಾಜ್ ತಿಲಕ್ ರೌಷನ್ ಎಎನ್‌ಐಗೆ ತಿಳಿಸಿದ್ದಾರೆ.

"ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. 3 ಸುತ್ತಿನ ಗುಂಡಿನ ದಾಳಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಇನ್ನು, ಘಟನೆ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಸೂಕ್ತ ವಿವರಗಳು ಬಂದ ನಂತರ ಹಂಚಿಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಆದರೆ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಪ್ರತಿಪಕ್ಷಗಳು ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಇಂತಹ ಘಟನೆ ನಡೆದಾಗಲೂ ಕೂಡ ರಾಜ್ಯದ ಗೃಹ ಸಚಿವರು ಎಲ್ಲಿದ್ದಾರೆ. ಅವರು 24 ಗಂಟೆಗಳ ಕಾಲ ಚುನಾವಣಾ ಮೋಡ್‌ನಲ್ಲಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೃಹ ಸಚಿವರು ಎಲ್ಲಿದ್ದಾರೆ..? 24 ಗಂಟೆ ಚುನಾವಣಾ ಮೋಡ್‌ನಲ್ಲಿದ್ದಾರೆ. ಕೆಲವೊಮ್ಮೆ ದೆಹಲಿಯಲ್ಲಿ, ಚುನಾವಣಾ ಪ್ರಚಾರ ಸಭೆಯಲ್ಲಿ, ಕೆಲವೊಮ್ಮೆ ಎದುರಾಳಿಯನ್ನು ಮಟ್ಟ ಹಾಕುವ ಷಡ್ಯಂತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಯಾರು ನೋಡಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ಗಳು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಹಲವಾರು ಬೆದರಿಕೆಗಳನ್ನು ಹಾಕಿದ್ದಾರೆ. ಇದರ ಬೆನ್ನಲ್ಲೇ ಶೂಟಿಂಗ್ ಘಟನೆ ನಡೆದಿದೆ. ನವೆಂಬರ್ 2022 ರಿಂದ ಸಲ್ಮಾನ್ ಖಾನ್ ಅವರ ಭದ್ರತಾ ಮಟ್ಟವನ್ನು ವೈ-ಪ್ಲಸ್‌ಗೆ ಏರಿಸಲಾಗಿದೆ. ನಟನಿಗೆ ವೈಯಕ್ತಿಕ ಬಂದೂಕು ಮತ್ತು ಹೆಚ್ಚಿನ ರಕ್ಷಣೆಗಾಗಿ ಹೊಸ ಶಸ್ತ್ರಸಜ್ಜಿತ ವಾಹನವನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.












Click it and Unblock the Notifications