Maharashtra Election 2024: ಮಹಾರಾಷ್ಟ್ರ ಸಿಎಂ ಆಯ್ಕೆ, ಸಿಎಲ್‌ಪಿ ಸಭೆಗೆ ವೀಕ್ಷಕರ ನೇಮಕ
ಮುಂಬೈ, ಡಿಸೆಂಬರ್ 02: ಮಹಾರಾಷ್ಟ್ರದ ಮುಖ್ಯಮಂತ್ರಿ ಆಯ್ಕೆ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. 2024ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟ ಹೊಸ ಸರ್ಕಾರ ರಚನೆ ಮಾಡಲಿದೆ. ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. 'ಮಹಾಯತಿ' ಮೈತ್ರಿಕೂಟ 230 ಶಾಸಕರ ಬಲ ಹೊಂದಿದೆ. ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬುದು ಕುತೂಹಲ.
ಸೋಮವಾರ ಬಿಜೆಪಿ ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವೀಕ್ಷಕರನ್ನು ನೇಮಕ ಮಾಡಿದೆ. ಬಿಜೆಪಿ ಈಗಾಗಲೇ ಡಿಸೆಂಬರ್ 5ರಂದು ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಘೋಷಣೆ ಮಾಡಿದೆ. ಶಾಸಕರ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ.

ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ನೇಮಕಗೊಂಡಿದ್ದಾರೆ. ಮಂಗಳವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು? ಎಂಬುದು ತಿಳಿಯಲಿದೆ.
ನವೆಂಬರ್ 20ರಂದು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 132 ಸೀಟುಗಳನ್ನು ಬಿಜೆಪಿ ಗೆದ್ದಿದೆ. ಮಹಾಯತಿ ಮೈತ್ರಿಕೂಟ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟಿದೆ. 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳನ್ನು ಹೊಂದಿದ್ದು, ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತವಿದೆ.
ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ: 'ಮಹಾಯತಿ' ಮೈತ್ರಿಕೂಟದ ಅಂಗಪಕ್ಷವಾದ ಶಿವಸೇನೆ (ಏಕನಾಥ್ ಶಿಂಧೆ ಬಣ) ಉಪ ಮುಖ್ಯಮಂತ್ರಿ ಹುದ್ದೆ, ಗೃಹ ಖಾತೆಗೆ ಬೇಡಿಕೆ ಇಟ್ಟಿದೆ ಎಂಬ ಸುದ್ದಿ ಇತ್ತು. ಆದರೆ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ, ಸಂಸದ ಶ್ರೀಕಾಂತ್ ಶಿಂಧೆ ತಾವು ರಾಜ್ಯದಲ್ಲಿ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 23ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಆದರೆ ಸ್ಪಷ್ಟ ಬಹುಮತ ಇದ್ದರೂ ಸಹ 9 ದಿನಗಳು ಕಳೆದರೂ ಹೊಸ ಸರ್ಕಾರ ರಚನೆಯಾಗಿಲ್ಲ. ವಿಧಾನಸಭೆ ಅವಧಿಯೂ ಮುಗಿದಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹ ರಾಜೀನಾಮೆ ನೀಡಿದ್ದಾರೆ. ಹೊಸ ಮುಖ್ಯಮಂತ್ರಿ ಆಯ್ಕೆ ಆಗುವ ತನಕ ಹಂಗಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯಲು ಅವರಿಗೆ ರಾಜ್ಯಪಾಲರು ಸೂಚಿಸಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್ಎಸ್ ದೇವೇಂದ್ರ ಫಡ್ನವೀಸ್ ಅವರು ಮುಂದಿನ ಮುಖ್ಯಮಂತ್ರಿ ಆಗಲು ಒಪ್ಪಿಗೆ ನೀಡಿದೆ. ಬೇರೆ ನಾಯಕರ ಹೆಸರು ಕೇಳಿ ಬರುತ್ತಿಲ್ಲ. ಆದ್ದರಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.
ಮಹಾಯತಿ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಶಿವಸೇನೆ, ಎನ್‌ಸಿಪಿ ಬಿಜೆಪಿ ಆಯ್ಕೆ ಮಾಡುವ ಶಾಸಕಾಂಗ ಪಕ್ಷದ ನಾಯಕನಿಗೆ ಬೆಂಬಲ ಎಂದು ಘೋಷಣೆ ಮಾಡಿದೆ. ಆದರೆ ಖಾತೆಗಳ ಹಂಚಿಕೆಯಲ್ಲಿ ಈ ಪಕ್ಷಗಳ ತೀರ್ಮಾನ ಏನು? ಎಂಬುದು ಇನ್ನೂ ಸಹ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications