ಮಹಾರಾಷ್ಟ್ರ ಚುನಾವಣೆ: ರಹಸ್ಯ ಸಭೆಯಲ್ಲಿ ಗೌತಮ್ ಅದಾನಿ ಇದ್ದರು ಎಂದ ಅಜಿತ್ ಪವಾರ್!
Maharashtra Election: ಮಹಾರಾಷ್ಟ್ರದಲ್ಲಿ ಚುನಾವಣೆಗೆ ಇನ್ನು ಆರು ದಿನಗಳು ಮಾತ್ರ ಬಾಕಿ ಉಳಿದಿರುವಾಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಹಾರಾಷ್ಟ್ರದಲ್ಲಿ ಇದೇ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಆಡಳಿತ ಪಕ್ಷದಿಂದಲೇ ವಿರೋಧ ಪಕ್ಷಕ್ಕೆ ಭರ್ಜರಿ ಅಸ್ತ್ರವೊಂದು ಸಿಕ್ಕಿದೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಬಣ) ಅಧ್ಯಕ್ಷ ಅಜಿತ್ ಪವಾರ್ ಅವರು ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಕೋಟ್ಯಾಧಿಪತಿ ಹಾಗೂ ಉದ್ಯಮಿ ಗೌತಮ್ ಅದಾನಿ ಅವರು ಮಹಾರಾಷ್ಟ್ರದಲ್ಲಿ ನಡೆದ ಮಹತ್ವದ ಸಭೆಯೊಂದರಲ್ಲಿ ಭಾಗಿಯಾಗಿದ್ದರು ಎನ್ನುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ಕ್ಕೆ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಅಜಿತ್ ಪವಾರ್ ಅವರು ರಹಸ್ಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. 2019ರಲ್ಲಿ ಅಂದಿನ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ನಾಯಕರೊಂದಿಗೆ ಮಹತ್ವದ ಹಾಗೂ ರಹಸ್ಯ ಸಭೆಯೊಂದು ನಡೆದಿತ್ತು.

ಆ ಸಭೆಯಲ್ಲಿ ಕೋಟ್ಯಾಧಿಪತಿ ಹಾಗೂ ಉದ್ಯಮಿ ಗೌತಮ್ ಅದಾನಿ ಇದ್ದರು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಹಿರಂಗಪಸಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಕೇಂದ್ರ ಸರ್ಕಾರದಲ್ಲಿ ಅದಾನಿ ಹಾಗೂ ಅದಾನಿ ಸಮೂಹದ ಪ್ರಭಾವ ಇದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸುತ್ತಲ್ಲೇ ಇವೆ. ಇದೀಗ ಆಡಳಿತ ಪಕ್ಷದ ಭಾಗವಾಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ (ಅಜಿತ್ ಪವಾರ್ ಬಣ)ವು ಮಹತ್ವದ ವಿಷಯವೊಂದನ್ನು ಹಂಚಿಕೊಂಡಿದೆ.
ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಜಿತ್ ಪವಾರ್, ಬಿಜೆಪಿಯೊಂದಿಗಿನ 2019ರ ಮೈತ್ರಿ ಸಂದರ್ಭದಲ್ಲಿ ನಡೆದ ವಿಷಯವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅಂದು ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅದಾನಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವರು ಇದ್ದರು.

ಅದು ಹೈ-ಪ್ರೊಫೈಲ್ ಸಭೆಯಾಗಿತ್ತು. ಸಭೆ ಎಲ್ಲಿ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತು. ಅಮಿತ್ ಶಾ ಇದ್ದರು, ಗೌತಮ್ ಅದಾನಿ ಇದ್ದರು. ಪ್ರಫುಲ್ ಪಟೇಲ್, ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಹಾಗೂ ಪವಾರ್ ಸಾಹೇಬ್ (ಶರದ್ ಪವಾರ್) ಇದ್ದರು ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಇದೀಗ ಮಹಾರಾಷ್ಟ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಗೌತಮ್ ಅದಾನಿ ಅವರು ಬಿಜೆಪಿ ಹಾಗೂ ಮಿತ್ರಪಕ್ಷಗಳ ನಡುವೆ ಎದುರಾಗಿದ್ದ ಬಿರುಕನ್ನು ಸರಿಪಡಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹೇಗಾದರೂ ಅಧಿಕಾರಕ್ಕೆ ತರಬೇಕು ಎನ್ನುವ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿದ್ದವು ಎನ್ನುವುದು ಬಹಿರಂಗವಾಗಿದೆ ಎಂದಿದ್ದಾರೆ.
ಇದು ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅದಾನಿ ಅವರು ಬಿಜೆಪಿ ಅಧಿಕೃತ ಸಂಧಾನಕಾರರೇ? ಬಿಜೆಪಿ ಹಾಗೂ ಮಿತ್ರ ಪಕ್ಷಗಳ ನಡುವೆ ಮೈತ್ರಿ ಸರಿಪಡಿಸುವ ಜವಾಬ್ದಾರಿಯನ್ನು ಅವರಿಗೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನೆ ಮೂಡಿದೆ. ಮಹಾರಾಷ್ಟ್ರದಲ್ಲಿ ಏನಾದರೂ ಸರಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉದ್ಯಮಿಯೊಬ್ಬರು ಏಕೆ ಇಷ್ಟು ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಅಜಿತ್ ಪವಾರ್ ಅವರ ಹೇಳಿಕೆಯಿಂದ ಸಮ್ಮಿಶ್ರ (ಮಹಾಯುತಿ) ಸರ್ಕಾರವು ಅಂತರ ಕಾಪಾಡಿಕೊಂಡಿದೆ.












Click it and Unblock the Notifications