Government Employee: ಸರ್ಕಾರಿ ನೌಕರರಿಗೆ ನ.20ಕ್ಕೆ ವೇತನ ಸಹಿತ ರಜೆ
ಮುಂಬೈ, ನವೆಂಬರ್ 07: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ಕ್ಕೆ 16 ದಿನ ಬಾಕಿ ಇದೆ. ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ನವೆಂಬರ್ 23ರ ಶನಿವಾರ ಪ್ರಕಟವಾಗಲಿದೆ. ರಾಜ್ಯದ ಚುನಾವಣೆ ಕಣ ಅಂತಿಮವಾಗಿದ್ದು, 4,140 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ನವೆಂಬರ್ 20ರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ನೀಡಿ ಆದೇಶವನ್ನು ಹೊರಡಿಸಲಾಗಿದೆ.

ಈಗಾಗಲೇ ಮುಂಬೈ ಮಹಾನಗರ ಪಾಲಿಕೆ ತನ್ನ ನೌಕರರು ಮಾತ್ರವಲ್ಲ ಪಾಲಿಕೆ ವ್ಯಾಪ್ತಿಯಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಿ ಆದೇಶವನ್ನು ಹೊರಡಿಸಿದೆ. ನಗರದಲ್ಲಿ ಮತದಾನ ಪ್ರಮಾಣ ಅಧಿಕವಾಗಲು ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಲಾಗಿದೆ.
ವೇತನ ಸಹಿತ ರಜೆ: ನವೆಂಬರ್ 20ರಂದು ಸರ್ಕಾರಿ, ಖಾಸಗಿ ಸೇರಿದಂತೆ ಎಲ್ಲಾ ವಲಯಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ನೌಕರರಿಗೆ ವೇತನ ಸಹಿತ ರಜೆ ಮಂಜೂರು ಮಾಡಲಾಗಿದೆ. ಯಾವ ಅಧಿಕಾರಿ/ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆಯೋ? ಅವರಿಗೆ ಇದು ಅನ್ವಯವಾಗುವುದಿಲ್ಲ.
ಕಾರ್ಖಾನೆಗಳು, ಖಾಸಗಿ ಕಂಪನಿಗಳು, ಇತರ ವಾಣಿಜ್ಯ ಸಂಸ್ಥೆಗಳು, ಸೇವೆ ನೀಡುವ ವಿವಿಧ ಕಂಪನಿಗಳು ಸಹ ರಜೆ ನೀಡುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಮತದಾನಕ್ಕೆ ಅನುಕೂಲ ಮಾಡಿಕೊಡಲು ವೇತನ ಸಹಿತ ಕಡ್ಡಾಯ ರಜೆಯನ್ನು ನೀಡಬೇಕಿದೆ.
ನವೆಂಬರ್ 20ರಂದು ಮತದಾನಕ್ಕೆ ರಜೆ ನೀಡದ ಸಂಸ್ಥೆ, ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ರಜೆ ಇಲ್ಲದ ಕಾರಣ ಯಾವುದೇ ಉದ್ಯೋಗಿ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಎಲ್ಲಾ ಉದ್ಯೋಗಿಗಳು ಕಡ್ಡಾಯವಾಗಿ ಮತದಾನ ಮಾಡಬೇಕು. ರಾಜ್ಯ ಸರ್ಕಾರ ಮತದಾನದ ದಿನ ರಾಜ್ಯದಲ್ಲಿ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಿದೆ ಎಂದು ಮುಂಬೈ ಮಹಾನಗರ ಪಾಲಿಕೆ ತನ್ನ ಆದೇಶದಲ್ಲಿ ತಿಳಿಸಿದೆ. ತುರ್ತುಸೇವೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಉದ್ಯೋಗಿಗಳಿಗೆ 4 ಗಂಟೆ ಬಿಡುವನ್ನು ಮತದಾನಕ್ಕಾಗಿ ನೀಡಲಾಗುತ್ತದೆ.
ಮಹಾರಾಷ್ಟ್ರ ವಿಧಾನಸಭೆಯ ಪ್ರಸ್ತುತ ಅವಧಿ ನವೆಂಬರ್ 26ಕ್ಕೆ ಮುಕ್ತಾಯವಾಗಲಿದೆ. ಅದಕ್ಕೂ ಮೊದಲು ಚುನಾವಣೆ ನಡೆಯಬೇಕಿದೆ. ನವೆಂಬರ್ 20ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ನವೆಂಬರ್ 25ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ರಾಜ್ಯದಲ್ಲಿ ಸದ್ಯ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟ ಅಧಿಕಾರದಲ್ಲಿದೆ. ಈ ಬಾರಿಯ ಚುನಾವಣೆಯನ್ನು ಸಹ ಈ ಪಕ್ಷಗಳು ಮೈತ್ರಿ ಮಾಡಿಕೊಂಡು ಒಗ್ಗಟ್ಟಾಗಿ ಎದುರಿಸುತ್ತಿವೆ.
ರಾಜ್ಯದ ವಿರೋಧ ಪಕ್ಷಗಳು ಮಹಾವಿಕಾಸ್ ಅಘಾಡಿ ಮೈತ್ರಿಕೂಟ ರಚನೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳಿವೆ.












Click it and Unblock the Notifications