Maharashtra Assembly Election 2024: ಚುನಾವಣಾ ಆಯೋಗದಿಂದ ಮಹತ್ವದ ಅಪ್ಡೇಟ್ಸ್
ಮಹಾರಾಷ್ಟ್ರ ಚುನಾವಣೆ ಇನ್ನು ಕೆಲವೇ ದಿನಗಳಲ್ಲಿ ನಡೆಯಬೇಕಿದೆ. ಆದರೆ ಚುನಾವಣೆ ದಿನಾಂಕ ಇಲ್ಲಿಯವರೆಗೆ ಪ್ರಕಟವಾಗಿಲ್ಲ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗದೆ ಇರುವುದು ಏಕೆ, ಯಾವಾಗ ಚುನಾವಣೆ ನಡೆಯಲಿದೆ ಎನ್ನುವುದು ಸೇರಿದಂತೆ ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಬಗ್ಗೆ ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥರಾದ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಸೆಪ್ಟೆಂಬರ್ 26ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದು, ಈ ವೇಳೆ ವಿವಿಧ ಇಲಾಖೆಗಳೊಂದಿಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದೆ. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಬದ್ಧವಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಜಿಲ್ಲಾಡಳಿತ, ಪೊಲೀಸ್ ಸೂಪರಿಡೆಂಟೆಂಟ್ ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಮಹಾರಾಷ್ಟ್ರ ಚುನಾವಣೆಯನ್ನು ಕಾಲಮಿತಿಯಲ್ಲಿ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಚುನಾವಣೆ ವಿಳಂಬಕ್ಕೆ ಇದೇ ಕಾರಣ
ಮಹಾರಾಷ್ಟ್ರದಲ್ಲಿ ಚುನಾವಣೆ ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎನ್ನುವುದರ ಬಗ್ಗೆ ಭಾರತೀಯ ಚುನಾವಣಾ ಆಯೋಗವು ಮಾಹಿತಿ ನೀಡಿದೆ. ಕಳೆದ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿರಲಿಲ್ಲ. ಹೀಗಾಗಿ, ನಾವು ಹರಿಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲು ಸಾಧ್ಯವಾಗಿತ್ತು. ಆದರೆ, ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಇದೆ. ಅಲ್ಲದೇ ಈ ವರ್ಷಾಂತ್ಯ ಹಾಗೂ ಮುಂದಿನ ವರ್ಷದ ಪ್ರಾರಂಭದಲ್ಲಿ ಪ್ರಮುಖ ರಾಜ್ಯಗಳಲ್ಲಿ (ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ ಹಾಗೂ ದೆಹಲಿ) ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಬೇಕಾದ ಹಿನ್ನೆಲೆಯಲ್ಲಿ ಈ ವಿಳಂಬವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ನಿಯೋಜಿಸಲಾಗಿದೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಚುನಾವಣಾ ದಿನಾಂಕ ನಿಗದಿ ಮಾಡುವುದು ವಿಳಂಬವಾಗಿದೆ.
ಅಲ್ಲದೇ, ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಾಗಿದ್ದು, ಕೆಲವು ಭಾಗದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಮತ್ತೊಂದು ಪ್ರಮುಖ ಅಂಶವೆಂದರೆ ಮಹಾರಾಷ್ಟ್ರದಲ್ಲಿ ಈಗ ಸರಣಿ ಹಬ್ಬಗಳು ಇವೆ. ಈ ಎಲ್ಲಾ ಕಾರಣಗಳಿಂದ ಮಹಾರಾಷ್ಟ್ರ ಚುನಾವಣೆ ದಿನಾಂಕ ಘೋಷಣೆ ಮಾಡುವುದು ವಿಳಂಬವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗವು ಮಾಹಿತಿ ನೀಡಿದೆ. ಇನ್ನು ಈಚೆಗೆ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಚುನಾವಣೆಯ ದಿನಾಂಕವನ್ನು ಘೋಷಿಸಿತ್ತು. ಆದರೆ, ಮಹಾರಾಷ್ಟ್ರ ಚುನಾವಣಾ ದಿನಾಂಕವನ್ನು ನಿಗದಿ ಮಾಡಿರಲಿಲ್ಲ. ಮಹಾರಾಷ್ಟ್ರದ ವಿಧಾನಸಭೆಯ ಅವಧಿಯು ನವೆಂಬರ್ 3ಕ್ಕೆ ಮುಕ್ತಾಯವಾಗಲಿದ್ದರೆ, ಹರಿಯಾಣದ ವಿಧಾನಸಭೆಯ ಅವಧಿಯು ನವೆಂಬರ್ 26ಕ್ಕೆ ಮುಕ್ತಾಯವಾಗಲಿದೆ.
ಮಹಾರಾಷ್ಟ್ರ ಚುನಾವಣೆಯು ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಬಾರಿ ಈ ರಾಜ್ಯದಲ್ಲಿ ಬಿಜೆಪಿ ಮೈತ್ರಿ ಪಕ್ಷಗಳು ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷಗಳ ನಡುವೆ ಸೆಣಸಾಟ ಇದೆ. ಈ ರಾಜ್ಯದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಿವೆ. ಪಕ್ಷಗಳು ಎರಡಾಗಿ ವಿಭಜನೆಯಾಗಿವೆ. ಇದಕ್ಕೆಲ್ಲ ಮತದಾರರು ಹೇಗೆ ಉತ್ತರಿಸಲಿದ್ದಾರೆ ಎನ್ನುವ ಕುತೂಹಲ ಎದುರಾಗಿದೆ.












Click it and Unblock the Notifications