Maharashtra Assembly Election 2024: ಏಕನಾಥ್ ಶಿಂಧೆ ಬಣದ ಪಟ್ಟಿಯಲ್ಲಿ ಅಚ್ಚರಿಯ ಅಭ್ಯರ್ಥಿಗಳು
ಮುಂಬೈ, ಅಕ್ಟೋಬರ್ 28: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಅಚ್ಚರಿಯ ಅಭ್ಯರ್ಥಿಗಳಿದ್ದಾರೆ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಘೋಷಣೆಯಾಗಲಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿಕೊಂಡು 'ಮಹಾಯುತಿ' ಮೈತ್ರಿಕೂಟ ರಚನೆ ಮಾಡಿಕೊಂಡು ಚುನಾವಣೆ ಎದುರಿಸಲಿವೆ.
ಈ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) ಬಣದಿಂದ ವರ್ಲಿ ಕ್ಷೇತ್ರಕ್ಕೆ ಮಿಲಿಂದ್ ದಿಯೋರಾ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಈ ಕ್ಷೇತ್ರಕ್ಕೆ ಶಿವಸೇನೆ (ಉದ್ಧವ್ ಠಾಕ್ರೆ ಬಣ)ದಿಂದ ಆದಿತ್ಯ ಠಾಕ್ರೆ ಅಭ್ಯರ್ಥಿಯಾಗಿದ್ದಾರೆ. ಈಗ ಕ್ಷೇತ್ರದ ಚುಣಾವಣೆ ಕುತೂಹಲವನ್ನು ಮೂಡಿಸಿದೆ.

ಪಟ್ಟಿಯಲ್ಲಿ ಸಂಜಯ್ ನಿರುಪಮ್‌ಗೆ ಡಿಂಡೋಶಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಬಿಜೆಪಿಯ ಲೋಕಸಭೆ ಸಂಸದ ನಾರಾಯಣ ರಾಣೆ ಪುತ್ರ ನಿಲೇಶ್ ರಾಣೆಗೆ ಕುಡಾಲ್ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯ ಭವನ್ ಗವಾಲಿಗೆ ರಿಸೋದ್, ಮತ್ತೊಬ್ಬ ಪರಿಷತ್ ಸದಸ್ಯ ಅಂಶಯ್ ಪದ್ವಿಗೆ ಅಕ್ಕಲ್‌ಕುವಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಆದಿತ್ಯ ಠಾಕ್ರೆ v/s ದಿಯೋರಾ: ಏಕನಾಥ ಶಿಂಧೆ ಬಣ ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರಾರನ್ನು ವರ್ಲಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕಾಂಗ್ರೆಸ್ ಬಿಟ್ಟು ಶಿವಸೇನೆ ಸೇರಿದ್ದ ಅವರು ಹಾಲಿ ರಾಜ್ಯಸಭಾ ಸದಸ್ಯರು. ಆದರೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡಲಾಗಿದೆ.
ಮುಂಬೈ ದಕ್ಷಿಣದಿಂದ ಮಿಲಿಂದ್ ದಿಯೋರಾ ಅವರು ಮೂರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ವರ್ಲಿ ಕ್ಷೇತ್ರದ ಉಸ್ತುವಾರಿಯನ್ನು ಸಹ ಅವರಿಗೆ ನೀಡಲಾಗಿತ್ತು. ಈಗ ವರ್ಲಿ ಕ್ಷೇತ್ರದಿಂದ ಅವರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಲಾಗಿದೆ.
ಹಾಲಿ ರಾಜ್ಯಸಭಾ ಸದಸ್ಯರನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣಕ್ಕಿಳಿಸುವ ಮೂಲಕ ಚುನಾವಣೆ ಕಾವನ್ನು ಶಿವಸೇನೆ (ಏಕನಾಥ್ ಶಿಂಧೆ ಬಣ) ಏರಿಸಿದೆ. ಮಿಲಿಂದ್ ದಿಯೋರಾ ವಿರುದ್ಧ ಕ್ಷೇತ್ರದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ)ದಿಂದ ಆದಿತ್ಯ ಠಾಕ್ರೆ ಅಭ್ಯರ್ಥಿ, ಈಗಾಗಲೇ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
2019ರ ಚುನಾವಣೆಯಲ್ಲಿ ಆದಿತ್ಯ ಠಾಕ್ರೆ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸಿದರು. ವರ್ಲಿ ಕ್ಷೇತ್ರದ ಅಭ್ಯರ್ಥಿಯಾದರು. ಎನ್‌ಸಿಪಿಯ ಸುರೇಶ್ ಮಾನೆಯನ್ನು ಸೋಲಿಸಿ ಸುಮಾರು 70,000 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಬಾರಿ ವರ್ಲಿ ಕ್ಷೇತ್ರದಲ್ಲಿ ಮಿಲಿಂದ್ ದಿಯೋರಾ, ಆದಿತ್ಯ ಠಾಕ್ರೆ ಮತ್ತು ಎಎನ್‌ಎಸ್‌ನ ಸಂದೀಪ್ ದೇಶಪಾಂಡೆ ಎದುರಾಳಿಗಳು.
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು 288. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಹಾಲಿ ರಾಜ್ಯದ ಆಡಳಿತ ಪಕ್ಷವೂ ಇದೆ.
ಮಹಾರಾಷ್ಟ್ರದ ವಿರೋಧ ಪಕ್ಷಗಳು ಚುನಾವಣೆ ಎದುರಿಸಲು ಮಹಾವಿಕಾಸ್ ಅಘಾಡಿ ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಇದು. 2019ರ ಚುನಾವಣೆಯಲ್ಲಿ ಒಗ್ಗಟ್ಟಾಗಿದ್ದ ಶಿವಸೇನೆ ಪಕ್ಷ ಈಗ ಎರಡು ಭಾಗವಾಗಿದೆ. ಆದ್ದರಿಂದ ಚುನಾವಣೆ ಫಲಿತಾಂಶವೂ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications