ಪ್ರಯಾಗ್‌ರಾಜ್‌ನಲ್ಲಿ 30 ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ದಟ್ಟಣೆ: ನೂರಾರು ಜನ ಪರದಾಟ
ಲಕ್ನೋ ಜನವರಿ 31: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಆರಂಭವಾಗಿ 19 ದಿನಗಳು ಪೂರ್ಣಗೊಂಡಿವೆ. ಇಂದಿಗೂ ಕೂಡ ವಿಶ್ವದಾದ್ಯಂತ ಲಕ್ಷಾಂತರ ಭಕ್ತರು ಕುಂಭ ಮೇಳಕ್ಕೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ನಡುವೆ ಯುಪಿ ಸರ್ಕಾರಕ್ಕೆ ಮಹಾ ಕುಂಭ ಮೇಳಕ್ಕೆ ಬರುವ ಭಕ್ತರ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ಹೌದು... ಪ್ರಯಾಗ್‌ರಾಜ್‌ಗೆ ಹೋಗಲು ಹಾಗೂ ಹೊರ ಬರಲು ವಾಹನ ಸವಾರರಿಗೆ ಕಷ್ಟವಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಮಹಾ ಕುಂಭದಿಂದ ಹೊರಬರುವಾಗ ನೂರಾರು ಜನರು ಗುರುವಾರ (ಜನವರಿ 30, 2025) ತುರ್ತು ಸಹಾಯವನ್ನು ಕೋರುವ ಸ್ಥಿತಿ ಎದುರಾದ ದೂರುಗಳು ಕೇಳಿ ಬಂದಿವೆ. ಕಳೆದ ದಿನ ಮಾರ್ಗ ಮಧ್ಯೆ ಸಿಲುಕಿದ ವಾಹನಗಳು 30 ಗಂಟೆಗಳಿಗೂ ಹೆಚ್ಚು ಕಾಲ ವಾಹನ ದಟ್ಟಣೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಇದರಲ್ಲಿ ಮಕ್ಕಳು ಮತ್ತು ವೃದ್ಧರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆಂದು ಹೇಳಲಾಗುತ್ತಿದೆ.

ಪ್ರಯಾಗ್‌ರಾಜ್ ಜಿಲ್ಲಾಡಳಿತ ರಸ್ತೆಯುದ್ದಕ್ಕೂ ವಾಹನಗಳು ಬ್ಲಾಕ್ ಆಗಿದ್ದರೂ ಸಂಚಾರ ಸುಗಮವಾಗಿದೆ ಎಂದು ಹೇಳಿಕೊಂಡಿದೆ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ವಾಹನಗಳು ಪ್ರಯಾಗ್‌ರಾಜ್‌ನಿಂದ ಹೊರಬರಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಮಹಾ ಕುಂಭದಿಂದ ಇಬ್ರಾಹಿಂಪುರಿಯ ಸವಾಯಿ ದೇವಸ್ಥಾನದ ಪಾರ್ಕಿಂಗ್ ಮೂಲಕ ಕಾನ್ಪುರ ಅಥವಾ ಹತ್ತಿರದ ಹೆದ್ದಾರಿಯನ್ನು ತಲುಪಲು ಪ್ರಯತ್ನಿಸುವಾಗ ಪ್ರಯಾಣಿಕರು ಕೊಟಾರಿ ಗ್ರಾಮದಲ್ಲಿ ಸಿಲುಕಿಕೊಂಡಿದ್ದರು. ಇದರಿಂದಾಗಿ 30 ಗಂಟೆಗಳಿಗೂ ಹೆಚ್ಚು ಕಾಲ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ.
ಮುಂಬೈ ಮೂಲದ ಉದ್ಯಮಿ 46 ವರ್ಷದ ಮಾಯಾಂಕ್ ಮರ್ದಾ ಅವರು ಈ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಕೊಂಡು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ತಾಳ್ಮೆ ಕಳೆದುಕೊಂಡು ದಯವಿಟ್ಟು ಈ ಟ್ರಾಫಿಕ್ ಜಾಮ್‌ನಿಂದ ಹೊರಬರಲು ನಮಗೆ ಸಹಾಯ ಮಾಡಿ. ನಮ್ಮಲ್ಲಿ ಸಾವಿರಾರು ಜನರು ಸಿಲುಕಿಕೊಂಡಿದ್ದಾರೆ ಎಂದು ತುರ್ತು ಸಹಾಯವಾಣಿಗೆ ಕರೆ ಮಾಡಿ ಮನವಿ ಮಾಡಿದ್ದರು.
ವಾಹನ ದಟ್ಟಣೆ- ಸವಾರರ ಪರದಾಟ
ಈ ಬಗ್ಗೆ ಮಾತನಾಡಿದ ಮಾಯಾಂಕ್ ಮರ್ದಾ, "ನಾವು ಜನವರಿ 29 ಸಂಜೆ 4 ಗಂಟೆಗೆ ಪ್ರಯಾಗರಾಜ್‌ನಿಂದ ಹೊರಟೆವು. ದೆಹಲಿ ತಲುಪಲು ನಾವು ಕಾನ್ಪುರ ಹೆದ್ದಾರಿಯನ್ನು ತಲುಪಲು ಪ್ರಯತ್ನಿಸುತ್ತಿದ್ದೇವು. ಆದರೆ ಜನವರಿ 30ರಂದು ಕೂಡ ನಾವು ಪ್ರಯಾಗರಾಜ್ ಜಿಲ್ಲೆಯ ಕೊಟಾರಿ ಗ್ರಾಮದಿಂದ ಹೊರಬರಲು ಆಗಿಲ್ಲ. ನಿರ್ಗಮನ ಬಯಸುವ ಎಲ್ಲಾ ಬಸ್‌ಗಳು ಮತ್ತು ಕಾರುಗಳನ್ನು ಮೊದಲು ಅನುಮತಿಸಬೇಕು, ಆದ್ದರಿಂದ ಜನರು ನಂತರ ಒಳಗೆ ಪ್ರವೇಶಿಸಬಹುದು. ಇದರಿಂದ ಸಾಕಷ್ಟು ತೊಂದರೆ ಆಗಿದೆ" ಎಂದು ಅವರು ಹೇಳಿಕೊಂಡಿದ್ದಾರೆ.

ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಗುರುಗ್ರಾಮ್ ಮೂಲದ ಅನುಪಮಾ ಟಿಕೂ ಕೂಡ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ನಾವು ಪ್ರಯಾಣಿಸುವ ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿ ಗಂಟೆಗಟ್ಟಲೆ ನಿಂತಾಗ ಸುತ್ತಮುತ್ತಲಿನ ಎಲ್ಲರೂ ಕೋಪಗೊಳ್ಳಲು ಪ್ರಾರಂಭಿಸಿದ್ದರು ಎಂದು ಅವರು ಹೇಳಿದರು.
"ಅಲ್ಲಿ ಇಂಟರ್ನೆಟ್ ಇಲ್ಲ. ಅದು ಹಸಿರು ಪರದೆಯ ಪ್ರದೇಶ. ನಾನು ನನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದೆ. ನಾವು 150 ಕ್ಕೂ ಹೆಚ್ಚು ಜನರ ಗುಂಪು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡೆವು. ದೇಶದ ವಿವಿಧ ಭಾಗಗಳಿಂದ ಬಂದ ಜನರು ಇದ್ದರು. ಜನವರಿ 27 ರಂದು ರಾತ್ರಿ ನಾವು ಮನೆಯಿಂದ ಹೊರಟು 28 ರಂದು ಪ್ರಯಾಗರಾಜ್ ತಲುಪಿದ್ದೆವು. ಬುಧವಾರ ನಾವು ಪಾರ್ಕಿಂಗ್ ಸ್ಥಳವನ್ನು ತಲುಪಲು 12 ಕಿಲೋಮೀಟರ್‌ಗಳಿಗಿಂತ ಹೆಚ್ಚು ನಡೆದಿದ್ದೇವೆ. ಜನರು ಬೀದಿಗಳಲ್ಲಿ ಮಲಗಿರುವುದು ಕಂಡು ಬಂತು. ಗ್ರಾಮಸ್ಥರು ದಯೆಯಿಂದ ವರ್ತಿಸಿದ್ದರಿಂದ ಆಹಾರದ ಸಮಸ್ಯೆ ಆಗಿಲ್ಲ. ಆದರೆ ನಮ್ಮೊಂದಿಗೆ ವೃದ್ಧರಿದ್ದರು. ಸಾವಿರಾರು ಬಸ್‌ಗಳು ಸಿಲುಕಿಕೊಂಡಿದ್ದವು. ನಮಗೆ ರಸ್ತೆ ಮೇಲೆ ಬಸ್‌ಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದವು. ನಮಗೆ ಮುಖ್ಯ ರಸ್ತೆ ಕಾಣಿಸಲೇ ಇಲ್ಲ. ನಾವು ಹಳ್ಳಿಯ ರಸ್ತೆಯಲ್ಲಿಂದ, ಹೆದ್ದಾರಿಗೆ ಬರಲು ಹತ್ತು ಗಂಟೆಗೂ ಹೆಚ್ಚು ಕಾಲ ಕಾದಿದ್ದೇವೆ'' ಎಂದು ಅವರು ಹೇಳಿದರು.
ನಿಧಾನಗತಿಯ ಸಂಚಾರ:-
ಎಲ್ಲಾ ಹೆದ್ದಾರಿಗಳಲ್ಲಿ ಮತ್ತು ಒಳಗಿನ ರಸ್ತೆಗಳಲ್ಲಿಯೂ ಸಹ ಸಂಚಾರ ನಿಧಾನಗೊಂಡಿದೆ ಎಂದು ಪ್ರಯಾಗರಾಜ್ ಡಿಐಜಿ ಅಜಯ್ ಪಾಲ್ ಅವರು ತಿಳಿಸಿದ್ದಾರೆ. "ಜನರು ಗಂಟೆಗಟ್ಟಲೆ ಸ್ಥಳಗಳಲ್ಲಿ ಸಿಲುಕಿಕೊಂಡ ಬಗ್ಗೆ ಹಲವಾರು ದೂರುಗಳನ್ನು ನಾವು ಪರಿಶೀಲಿಸಿದ್ದೇವೆ. ಕುಂಭಮೇಳದಿಂದಾಗಿ ನಗರದಲ್ಲಿ ಭಾರೀ ವಾಹನ ದಟ್ಟಣೆಯಿಂದಾಗಿ ವಾಹನಗಳು ಒಂದೆರಡು ಗಂಟೆಗಳ ಕಾಲ ಮಾತ್ರ ನಿಂತಿರುವುದು ಕಂಡುಬಂದಿದೆ" ಎಂದು ಅವರು ಹೇಳಿದ್ದಾರೆ. ಸಹಾಯದ ಅಗತ್ಯವಿರುವ ಯಾರಿಗಾದರೂ ಮಾಹಿತಿಯನ್ನು ಹಂಚಿಕೊಳ್ಳಲು ಅವರು ತಿಳಿಸಿದ್ದಾರೆ. ಪೊಲೀಸರು ಸಹಾಯವನ್ನು ಒದಗಿಸುತ್ತಾರೆ ಎಂದು ಅವರು ಭರವಸೆ ನೀಡಿದ್ದಾರೆ.












Click it and Unblock the Notifications