ಮದುರೈ ಮೀನಾಕ್ಷಿ ದೇಗುಲ ದೇಶದಲ್ಲೇ ಅತ್ಯಂತ ಸ್ವಚ್ಛ ಸಾಂಪ್ರದಾಯಿಕ ಸ್ಥಳ
ತಮಿಳುನಾಡು ರಾಜ್ಯದ ಮದುರೈನಲ್ಲಿರುವ ಮೀನಾಕ್ಷಿ ಸುಂದರೇಶ್ವರ ದೇವಾಲಯವು ದೇಶದಲ್ಲೇ ಅತಿ ಸ್ವಚ್ಛ ಸಾಂಪ್ರದಾಯಿಕ ಸ್ಥಳವಾಗಿ ಆಯ್ಕೆಯಾಗಿದೆ. ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮದಡಿಯಲ್ಲಿ ದೇವಾಲಯವು ಈ ಶ್ರೇಯಕ್ಕೆ ಪಾತ್ರವಾಗಿದೆ.
ದೇಶದ ಒಟ್ಟು ಹತ್ತು ಸ್ಥಳಗಳು ಈ ವಿಭಾಗದಲ್ಲಿ ಆಯ್ಕೆಯಾಗಿದ್ದವು. ಅದರಲ್ಲಿ ತಾಜ್ ಮಹಲ್, ಅಜ್ಮೇರ್ ಷರೀಫ್ ದರ್ಗಾ, ಸ್ವರ್ಣಮಂದಿರ, ತಿರುಪತಿ ತಿರುಮಲ ದೇವಸ್ಥಾನ ಮತ್ತು ವೈಷ್ಣೋದೇವಿ ದೇವಾಲಯ ಕೂಡ ಇದ್ದವು. ಮದುರೈನ ಸ್ಥಳೀಯ ಸಂಸ್ಥೆ, ಜನರು ಇಡೀ ದೇಗುಲವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅರವತ್ತು ಮಂದಿ ನೌಕರರು ಮತ್ತು ಮುನ್ನೂರು ಸ್ವಯಂಸೇವಕರು ದೇವಾಲಯ ಸ್ವಚ್ಛತೆಗಾಗಿ ಶ್ರಮಿಸುತ್ತಾರೆ. ದೇವಾಲಯ ಸ್ವಚ್ಛತಾ ಅಭಿಯಾನಕ್ಕೆ ಟಿವಿಎಸ್ ಮತ್ತಿತರ ಕಂಪೆನಿಗಳು ಹಾಗೂ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕಳಿಸುತ್ತಾರೆ ಎಂದು ಜಂಟಿ ಆಯುಕ್ತ ಎನ್. ನಟರಾಜನ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ದೇವಾಲಯ ಸ್ವಚ್ಛತಾ ಕಾರ್ಯಕ್ಕೆ ಬಳಸುವ ಸಲಕರಣೆಗಳು ಕೂಡ ಅತ್ಯಾಧುನಿಕವಾಗಿವೆ. ದೇವಾಲಯದ ಸುತ್ತ ಕಸದ ಬುಟ್ಟಿಗಳನ್ನು ಇಡಲಾಗಿದೆ, ಇ ಶೌಚಾಲಯಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ. ದೇವಾಲಯದ ಸುತ್ತಮುತ್ತಲ ಆವರಣದಲ್ಲಿ ಉಗುಳಿದರೆ ಐವತ್ತು ರುಪಾಯಿ ದಂಡ ವಿಧಿಸುವ ನಿಯಮ ಕೂಡ ಸೆಪ್ಟೆಂಬರ್ ಮೂವತ್ತರಿಂದ ಜಾರಿಗೆ ತರಲಾಗಿದೆ.
ಉಗುಳಿದವರ ಬಗ್ಗೆ ಮಾಹಿತಿ ನೀಡುವವರಿಗೆ ಎರಡು ಲಾಡು ಕೂಡ ನೀಡಲಾಗುತ್ತದೆ.












Click it and Unblock the Notifications