ಮಧ್ಯಪ್ರದೇಶ ಅಖಾಡಕ್ಕೆ ಪ್ರಿಯಾಂಕಾ ಎಂಟ್ರಿ: ಗ್ಯಾರಂಟಿ ಘೋಷಣೆ, ಬಿಜೆಪಿ ವಿರುದ್ಧ ಭಯಂಕರ ಭ್ರಷ್ಟಾಚಾರದ ಆರೋಪ
ಜಬಲ್ಪುರ್, ಜೂನ್ 12: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಮಧ್ಯಪ್ರದೇಶದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದರು. ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಂತೆ ಬೇಗನೇ ಪ್ರಚಾರ ಕಾರ್ಯವನ್ನು ಕಾಂಗ್ರೆಸ್ ಆರಂಭಿಸಿದೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು ಅಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಮತ್ತು ಉದ್ಯೋಗಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ವ್ಯಾಪಂ ಮತ್ತು ಪಡಿತರ ವಿತರಣೆಯಲ್ಲಿನ ಭ್ರಷ್ಟಾಚಾರವನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ 220 ತಿಂಗಳ ಆಡಳಿತದಲ್ಲಿ 225 ವಂಚನೆಗಳು ನಡೆದಿವೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಕೇವಲ 21 ಸರ್ಕಾರಿ ನೌಕರಿಗಳನ್ನು ಬಿಜೆಪಿ ಸರ್ಕಾರ ನೀಡಿರುವುದು ಕಂಡುಬಂದಿದೆ. ಈ ಅಂಕಿ ಅಂಶವನ್ನು ನನ್ನ ಗಮನಕ್ಕೆ ತಂದಾಗ ನನ್ನ ಕಚೇರಿಯಿಂದ ಮೂರು ಬಾರಿ ಪರಿಶೀಲನೆ ನಡೆಸಲಾಗಿದೆ. ಇದು ಸತ್ಯವಾಗಿದೆ ಎಂದು ಅವರು ತಿಳಿಸಿದರು.

ಮೇ 28 ರಂದು ಉಜ್ಜಯಿನಿಯ ಮಹಾಕಾಲ್ ಲೋಕ ಕಾರಿಡಾರ್‌ನಲ್ಲಿ ಆರು ವಿಗ್ರಹಗಳನ್ನು ಹಾನಿಗೊಂಡಿವೆ. ಚೌಹಾಣ್ ಸರ್ಕಾರವು ದೇವರನ್ನೂ ಸಹ ಉಳಿಸಲಿಲ್ಲ ಎಂದು ಪ್ರಿಯಾಂಕಾ ಹರಿಹಾಯ್ದರು. ಈ ಮಹಾಕಾಲ್ ಲೋಕ ಕಾರಿಡಾರ್‌ನ ಮೊದಲ ಹಂತವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
ಹೆಸರಾಂತ ಮಹಾಕಾಳೇಶ್ವರ ದೇವಸ್ಥಾನದಲ್ಲಿ 900 ಮೀಟರ್ ಕಾರಿಡಾರ್ ಅನ್ನು 856 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 351 ಕೋಟಿ ರೂಪಾಯಿ ಖರ್ಚಾಗಿದೆ.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಮೀಕ್ಷೆಯನ್ನು ಲೇವಡಿ ಮಾಡಿದ ಪ್ರಿಯಾಂಕಾ ಗಾಂಧಿ, 'ನಾವು ಸಾಕಷ್ಟು ಡಬಲ್ ಮತ್ತು ಟ್ರಿಪಲ್ ಎಂಜಿನ್ ಸರ್ಕಾರಗಳನ್ನು ನೋಡಿದ್ದೇವೆ. ಆದರೆ ಹಿಮಾಚಲ ಮತ್ತು ಕರ್ನಾಟಕದ ಜನರು ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಿದ್ದಾರೆ' ಎಂದು ಹೇಳಿದರು.
ಇದೇ ವೇಳೆ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ವ್ಯಂಗ್ಯವಾಡಿದ ಪ್ರಿಯಾಂಕಾ, ಮಧ್ಯಪ್ರದೇಶದ ಕೆಲವು ನಾಯಕರು ಅಧಿಕಾರಕ್ಕಾಗಿ ಪಕ್ಷದ ಸಿದ್ಧಾಂತವನ್ನು ತ್ಯಜಿಸಿದ್ದಾರೆ ಎಂದು ತಿಳಿಸಿದರು.
ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಶಾಸಕರು ಮಾರ್ಚ್ 2020 ರಲ್ಲಿ ಕಾಂಗ್ರೆಸ್ ತೊರೆದರು. ಕಮಲ್ ನಾಥ್ ಸರ್ಕಾರವನ್ನು ಉರುಳಿಸಿದರು. ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಮರಳಲು ಸಹಾಯ ಮಾಡಿದರು.












Click it and Unblock the Notifications