ಮಧ್ಯಪ್ರದೇಶ ಚುನಾವಣೆ; ಕಾಂಗ್ರೆಸ್‌ಗೆ ಬಂಡಾಯದ ಬಿಸಿ!
ಭೋಪಾಲ್, ನವೆಂಬರ್ 08: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಎದುರಾಳಿಗಳು.
230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದ ವಿಧಾನಸಭೆಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ರಾಜ್ಯದಲ್ಲಿ ಹಾಲಿ ಬಿಜೆಪಿ ಸರ್ಕಾರವಿದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಆದರೆ ಕಮಲ್ ನಾಥ್ ನೇತೃತ್ವದ ರಾಜ್ಯ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಬಂಡಾಯದ ಬಿಸಿ ತಟ್ಟಿದೆ.
39 ನಾಯಕರು ಉಚ್ಛಾಟನೆ; ಮಧ್ಯಪ್ರದೇಶ ಕಾಂಗ್ರೆಸ್ 39 ಅಭ್ಯರ್ಥಿಗಳನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ. ನವೆಂಬರ್ 17ರಂದು ನಡೆಯುವ ಚುನಾವಣೆಗೆ ಈ ಅಭ್ಯರ್ಥಿಗಳು ಬಂಡಾಯದ ಬಾವುಟ ಹಾರಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ಮಾಡಿದ್ದರು.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಕಮಲ್ ನಾಥ್ ಸೂಚನೆಯಂತೆ 39 ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ರಾಜೀವ್ ಸಿಂಗ್ ಹೇಳಿದ್ದಾರೆ.
ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ 39 ನಾಯಕರು ಪಕ್ಷೇತರ ಅಭ್ಯರ್ಥಿಯಾಗಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎದುರಾಳಿಯಾಗಿದ್ದರು.
ಉಚ್ಛಾಟನೆಗೊಂಡ ನಾಯಕರಲ್ಲಿ ಮಾಜಿ ಶಾಸಕರು, ಪಕ್ಷದ ವಕ್ತಾರರಾಗಿದ್ದ ನಾಯಕರು ಸಹ ಸೇರಿದ್ದಾರೆ. ಈ ಉಚ್ಛಾಟನೆ ಪಕ್ಷದ ಮೇಲೆ ಚುನಾವಣೆಯಲ್ಲಿ ಹೇಗೆ ಪ್ರಭಾವ ಬೀರಲಿದೆ? ಎಂದು ಕಾದು ನೋಡಬೇಕಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರ ಹಿಡಿಯಲೇಬೇಕು ಎಂದು ತಂತ್ರವನ್ನು ರೂಪಿಸಿ ಚುನಾವಣಾ ಪ್ರಚಾರವನ್ನು ಕೈಗೊಂಡಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಪಡೆದಿತ್ತು. ಬಳಿಕ ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದರು. ಆದರೆ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಆಗ ಅವರ ಬೆಂಬಲಿಗ ಶಾಸಕರು ಕಾಂಗ್ರೆಸ್ ತೊರೆದರು. ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತು.
ಬಳಿಕ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಈ ಬಾರಿ ಜ್ಯೋತಿರಾಧಿತ್ಯ ಸಿಂಧಿಯಾ ಇಲ್ಲದೇ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಎದುರಿಸುತ್ತಿದೆ. ಕಮಲ್ ನಾಥ್, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ರಾಜ್ಯದಲ್ಲಿದ್ದಾರೆ.
ಮಧ್ಯಪ್ರದೇಶ ಚುನಾವಣೆ ಬಗ್ಗೆ ದಿಗ್ವಿಜಯ್ ಸಿಂಗ್ ಮಾತನಾಡಿದ್ದಾರೆ, "ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಲಿದೆ. ರಾಜ್ಯದ ಜನರು ಸಹ ಪಕ್ಷದ ಪರವಾಗಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷದಲ್ಲಿ ಇಲ್ಲದಿರುವುದು ಚುನಾವಣೆಯಲ್ಲಿ ಪ್ರಭಾವ ಬೀರುವುದಿಲ್ಲ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
"2020ರ ಉಪ ಚುನಾವಣೆ ಫಲತಾಂಶ, ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ಪರವಾಗಿ ಜನರು ಇದ್ದಾರೆ ಎಂಬುದು ತಿಳಿಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಪಕ್ಷಕ್ಕೆ ಜನರು ಬೆಂಬಲ ಕೊಡಲಿದ್ದಾರೆ" ಎಂದರು.
"2018ರ ಚುನಾವಣೆ ಬಳಿಕ 15 ವರ್ಷದ ಬಳಿಕ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಿತ್ತು. ಈಗ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಸಹಕಾರಿಯಾಗಲಿದೆ ಎಂದು ನಾನು ಮಾತ್ರವಲ್ಲ ಮಾಧ್ಯಮಗಳು ಸಹ ಹೇಳುತ್ತಿವೆ" ಎಂದು ದಿಗ್ವಿಜಯ್ ಸಿಂಗ್ ಹೇಳಿದರು.












Click it and Unblock the Notifications