Madhya Pradesh; ಬಿಜೆಪಿ ಲಾಡ್ಲಿ ಬೆಹ್ನಾ V/S ಕಾಂಗ್ರೆಸ್ ಗ್ಯಾರಂಟಿ!
ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ವಿಧಾನಸಭಾ ಚುನಾವಣೆ 2023ರಲ್ಲಿ ಬಿಜೆಪಿ ಭಾರೀ ಮುನ್ನಡೆ ಪಡೆದುಕೊಂಡಿದೆ. 2024ರ ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ ನಡೆದಿರುವ ಈ ಚುನಾವಣೆ ಫಲಿತಾಂಶ ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಭಾನುವಾರ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಮತದಾನ ನಡೆದಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116. 1.21ರ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬಿಜೆಪಿ 162 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ರಾಜ್ಯದ ಮಾಜಿ ಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಚಿಂದ್ವಾರಾ ಕ್ಷೇತ್ರದಲ್ಲಿ ಮುನ್ನಡೆ ಪಡೆದಿದ್ದಾರೆ. ಬಿಜೆಪಿಯ ನಾಯಕ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ 77,688 ಮತಗಳನ್ನು ಪಡೆಯುವ ಮೂಲಕ ಬುಧ್ನಿ ಕ್ಷೇತ್ರದಲ್ಲಿ 56,124 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಲಾಡ್ಲಿ ಬೆಹ್ನಾ V/S ಕಾಂಗ್ರೆಸ್ ಗ್ಯಾರಂಟಿ; ಮಧ್ಯಪ್ರದೇಶ ರಾಜ್ಯದ ಈ ಬಾರಿಯ ಚುನಾವಣೆಯನ್ನು ಬಿಜೆಪಿಯ ಲಾಡ್ಲಿ ಬೆಹ್ನಾ V/S ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಎಂದು ವಿಶ್ಲೇಷಿಸಲಾಗುತ್ತಿದೆ. ಕರ್ನಾಟಕದ ಮಾದರಿಯಲ್ಲಿ ಹಲವು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದರೂ ಸಹ ಅದು ಮತವಾಗಿ ಪರಿವರ್ತನೆಯಾಗಿಲ್ಲ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ.
ಚುನಾವಣಾ ದಿನಾಂಕ ಘೋಷಣೆಯಾದ ತಕ್ಷಣವೇ ಮಾತನಾಡಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ರಾಜ್ಯದಲ್ಲಿ ಬಿಜೆಪಿ 5ನೇ ಬಾರಿಗೆ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿತ್ತು.
ರಾಜ್ಯದ ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಇದರಲ್ಲಿ 'ಲಾಡ್ಲಿ ಬೆಹ್ನಾ' ಯೋಜನೆಯೂ ಒಂದು. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಸರ್ಕಾರ ಈ ಯೋಜನೆ ಘೋಷಣೆ ಮಾಡಿತು. ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 1,250 ರೂ. ಆರ್ಥಿಕ ಸಹಾಯ ನೀಡಲಾಗುತ್ತದೆ.
ಈ ಯೋಜನೆ ಮೇಲೆ ಬಿಜೆಪಿಗೆ ಭಾರೀ ನಂಬಿಕೆ ಇತ್ತು. ಲಾಡ್ಲಿ ಬೆಹ್ನಾ ಯೋಜನೆ ಫಲಾನುಭವಿಗಳಾದ ಸಹೋದರಿಯರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು. 2003, 2008, 2013 ಮತ್ತು 2020ರಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದ ಬಿಜೆಪಿ 2023ರಲ್ಲಿಯೂ ಸರ್ಕಾರ ರಚನೆ ಮಾಡುವತ್ತ ಹೆಜ್ಜೆ ಹಾಕಿದೆ.
ಕಾಂಗ್ರೆಸ್ ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ 1,500 ಆರ್ಥಿಕ ಸಹಾಯ. 25 ಲಕ್ಷದ ತನಕ ಆರೋಗ್ಯ ವಿಮೆ, 2 ಲಕ್ಷದ ತನಕ ರೈತರ ಕೃಷಿ ಸಾಲ ಮನ್ನಾ, ಕ್ವಿಂಟಾಲ್‌ಗೆ 2,500 ರೂ. ದರದಲ್ಲಿ ಭತ್ತ ಖರೀದಿ. ಪ್ರತಿ ಮನೆಗೆ 100 ಯೂನಿಟ್ ಉಚಿತ ವಿದ್ಯುತ್ ಮುಂತಾದ ಭರವಸೆಗಳನ್ನು ನೀಡಿತ್ತು.
"ಬಿಜೆಪಿ ಸರ್ಕಾರ ರಚನೆ ಬಗ್ಗೆ ಯಾವುದೇ ಸಂದೇಹವಿಲ್ಲ. ಲಾಡ್ಲಿ ಬೆಹ್ನಾ ಯೋಜನೆಯ ಫಲಾನುಭವಿಗಳು ಬಿಜೆಪಿಯ ಗೆಲುವಿಗೆ ಇದ್ದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮಾಡಿರುವ ಕೆಲಸಗಳಿಗೆ ಜನರು ಅಶೀರ್ವಾದ ಮಾಡಲಿದ್ದಾರೆ" ಎಂದು ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದರು. ಫಲಿತಾಂಶ ನೋಡಿದರೆ ಅದು ಸತ್ಯ ಎಂಬುದು ತಿಳಿಯುತ್ತಿದೆ.
ಕಾಂಗ್ರೆಸ್ ನೀಡಿದ್ದ 500 ರೂ.ಗೆ ಸಿಲಿಂಡರ್, ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಉಚಿತ, ನಿರುದ್ಯೋಗಿ ಯುವಕರಿಗೆ 1,500 ರೂ.ನಿಂದ 3 ಸಾವಿರ ರೂ. ತನಕ ಭತ್ಯೆ, ಮಹಿಳೆಯರಿಗೆ ಉದ್ಯಮ ನಡೆಸಲು ಸಾಲ ಮುಂತಾದ ಗ್ಯಾರಂಟಿ ಯೋಜನೆಗಳು ಕರ್ನಾಟಕದಂತೆ ಪಕ್ಷಕ್ಕೆ ಗೆಲುವು ತಂದು ಕೊಡಲಿಲ್ಲ.












Click it and Unblock the Notifications