ನಿಜಾನಾ ಇದು?! 1 ಕ್ಷೇತ್ರ, 7 ಅಭ್ಯರ್ಥಿಗಳು, 80,000 ಭದ್ರತಾ ಸಿಬ್ಬಂದಿ!
ರಾಯ್ಪುರ, ಏಪ್ರಿಲ್ 11: ಛತ್ತೀಸ್ ಗಢ ರಾಜ್ಯದಲ್ಲಿ ಅತೀ ಹೆಚ್ಚು ನಕ್ಸಲ್ ಪೀಡಿತ ಪ್ರದೇಶವಾದ ಬಾಸ್ಟರ್ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಮತದಾನ ಆರಂಭವಾಗಿದೆ.
ಶಾಂತಿಯುತವಾಗಿ ಮತದಾನವಾಗಬೇಕೆಂಬ ಕಾರಣಕ್ಕೆ ಈ ಒಂದೇ ಒಂದು ಕ್ಷೇತ್ರದಲ್ಲಿ ಒಟ್ಟು 80,000 ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ! ಒಂದೇ ಒಂದು ಕ್ಷೇತ್ರ, ಕೇವಲ ಏಳು ಅಭ್ಯರ್ಥಿಗಳಿಗಾಗಿ ಇಷ್ಟೊಂದು ಭದ್ರತಾ ಸಿಬ್ಬಂದಿಯನ್ನು ನೇಮಿಸುವುದು ಸರಿಯೇ? ಸರ್ಕಾರದ ಹಣವನ್ನು ಪೋಲು ಮಾಡಿದಂತಲ್ಲವೇ ಎಂಬೆಲ್ಲ ಪ್ರಶ್ನೆಗಳು ಹುಟ್ಟುವುದು ಸಹಜ. ಆದರೆ ಮತದಾನಕ್ಕೂ ಎರಡು ದಿನ ಮೊದಲು ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಾಂತೇವಾಡದಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡೆವಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯ್ಯಲಾಗಿತ್ತು. ನಕ್ಸಲರು ಮತದಾನಕ್ಕೆ ಅಡ್ಡಿ ಪಡಿಸುವ ಆತಂಕವಿರುವುದರಿಂದ ಈ ಕ್ಷೆತ್ರದಲ್ಲಿ ಇಷ್ಟೊಂದು ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.
ದೇಶದಾದ್ಯಂತ ಓಟ್ಟು 20 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಛತ್ತೀಸ್ ಗಢದಲ್ಲೂ ಮೊದಲ ಹಂತದ ಮತದಾನ ನಡೆಯುತ್ತಿದೆ.

ಈಗಾಗಲೇ ಛತ್ತೀಸ್ ಗಢದ ನಾರಾಯಣಪುರದಲ್ಲಿ ನಕ್ಸಲರು ಐಇಡಿ (ಸುಧಾರಿತ ಸ್ಫೋಟಕ) ಸ್ಫೋಟಿಸಿದ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.












Click it and Unblock the Notifications