Vande Bharat; ಕೆಲವು ವಂದೇ ಭಾರತ್ ರೈಲುಗಳ ದರ ಕಡಿತ?
ನವದೆಹಲಿ, ಜುಲೈ 06; ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ. ಹಲವು ರಾಜ್ಯಗಳು ವಿವಿಧ ಮಾರ್ಗದಲ್ಲಿ ಈ ರೈಲುಗಳನ್ನು ಓಡಿಸಬೇಕು ಎಂದು ಬೇಡಿಕೆ ಇಟ್ಟಿವೆ. ಜೂನ್ ಅಂತ್ಯದಲ್ಲಿ ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ದೂರದ ನಗರಗಳನ್ನು ಮತ್ತು ಒಂದೇ ರಾಜ್ಯದ ಕಡಿಮೆ ಅಂತರದ ನಡುವಿನ ನಗರಗಳನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕಿಸುತ್ತಿದೆ. ಕೆಲವು ರೈಲುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಕೆಲವು ರೈಲುಗಳು ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಇದಕ್ಕೆ ರೈಲಿನ ದರವೇ ಕಾರಣ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.

ಆದ್ದರಿಂದ ಕೆಲವು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ದರಗಳನ್ನು ಕಡಿತಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ. ದರಗಳು ಕಡಿಮೆಯಾದರೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಬಹುದು ಎಂಬುದು ಇಲಾಖೆಯ ತಂತ್ರವಾಗಿದೆ. ಇದಕ್ಕಾಗಿ ಯಾವ ಯಾವ ಮಾರ್ಗದ ರೈಲುಗಳಿಗೆ ಪ್ರಯಾಣಿಕರ ಕೊರತೆ ಇದೆ ಎಂದು ಪಟ್ಟಿ ತಯಾರು ಮಾಡಲಾಗಿದೆ.
ಕರ್ನಾಟಕದಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಮಾತ್ರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಇದೆ. ರೈಲ್ವೆ ಇಲಾಖೆ ಪಟ್ಟಿ ಮಾಡಿರುವ ಮಾರ್ಗದಲ್ಲಿ ರಾಜ್ಯದ ಎರಡು ಮಾರ್ಗ ಸಹ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಸಂಚಾರ ನಡೆಸುವ ವಂದೇ ಭಾರತ್ ರೈಲಿನ ದರದಲ್ಲಿ ಯಾವುದೇ ಕಡಿತವಾಗುವುದಿಲ್ಲ.
ಯಾವ-ಯಾವ ಮಾರ್ಗಗಳು?; ಕಡಿಮೆ ಅಂತರದ ನಗರಗಳನ್ನು ಸಂಪರ್ಕಿಸುವ ವಂದೇ ಭಾರತ್ ರೈಲುಗಳು ಮಾತ್ರ ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಶತಾಬ್ದಿ, ಇತರ ರೈಲುಗಳ ದರಗಳು ಕಡಿಮೆ ಇದೆ. ಆದ್ದರಿಂದ ಜನರು ಆ ರೈಲುಗಳಲ್ಲಿ ಸಂಚಾರ ನಡೆಸುತ್ತಿದ್ದು, ವಂದೇ ಭಾರತ್‌ಗೆ ಪ್ರಯಾಣಿಕರ ಕೊರತೆ ಉಂಟಾಗಿದೆ.
ಭಾರತೀಯ ರೈಲ್ವೆಯ ಅಧಿಕಾರಿಗಳು ಪಿಟಿಐಗೆ ನೀಡಿರುವ ಮಾಹಿತಿ ಪ್ರಕಾರ ಇಂದೋರ್-ಭೊಪಾಲ್, ಭೋಪಾಲ್-ಜಬಾಲ್‌ಪುರ್, ನಾಗ್ಪುರ-ಬಿಲಾಸ್‌ಪುರ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳ ದರಗಳಲ್ಲಿ ಕಡಿತವಾಗಲಿದೆ.
ಭೋಪಾಲ್-ಜಬಾಲ್‌ಪುರ್ ರೈಲಿನಲ್ಲಿ ಶೇ 29ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ. ಇಂದೋರ್-ಭೋಪಾಲ್ ರೈಲಿನಲ್ಲಿ ಶೇ 21ರಷ್ಟು ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಈ ರೈಲುಗಳಲ್ಲಿ ಎಸಿ ಚೇರ್ ಕಾರ್‌ಗಳ ಪ್ರಯಾಣ ದರ 950 ರೂ. ಮತ್ತು ಎಕ್ಸಿಕ್ಯುಟಿಚ್ ಚೇರ್ ಕಾರ್ ಪ್ರಯಾಣ ದರ 1,525 ರೂ. ಇದೆ. ಈ ದರವನ್ನು ಕಡಿಮೆ ಮಾಡಿ ಹೆಚ್ಚು ಜನರನ್ನು ಸೆಳೆಯಲು ಇಲಾಖೆ ಮುಂದಾಗಿದೆ.
ನಾಗ್ಪುರ-ಬಿಲಾಸ್‌ಪುರ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶೇ 55ರಷ್ಟು ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಈ ರೈಲು ಕೇವಲ 5 ಗಂಟೆ 30 ನಿಮಿಷದಲ್ಲಿ ಸಂಚಾರ ನಡೆಸುತ್ತದೆ. ಒಂದು ವೇಳೆ ದರ ಕಡಿತಗೊಳಿಸಿದರೆ ಇನ್ನಷ್ಟು ಜನರು ಈ ರೈಲಿನಲ್ಲಿ ಪ್ರಯಾಣ ಮಾಡಲಿದ್ದಾರೆ ಎಂಬುದು ರೈಲ್ವೆ ಇಲಾಖೆ ಲೆಕ್ಕಾಚಾರವಾಗಿದೆ.
ಸದ್ಯ ನಾಗ್ಪುರ-ಬಿಲಾಸ್‌ಪುರ್ ನಡುವಿನ ರೈಲಿನ ಎಕ್ಸಿಕ್ಯುಟಿವ್ ಕ್ಲಾಸ್ ಪ್ರಯಾಣ ದರ 2045 ರೂ.ಗಳು. ಎಸಿ ಚೇರ್ ಕಾರ್‌ನಲ್ಲಿ 1075 ರೂ. ಇದೆ. ಈ ವರ್ಷದ ಮೇ ತಿಂಗಳಿನಲ್ಲಿ ಆರಂಭಿಸಿದ ಈ ರೈಲು ಸೇವೆಯ ತೇಜಸ್ ಎಕ್ಸ್‌ಪ್ರೆಸ್ ರೈಲಿನ ಸಂಪೂರ್ಣ ಪ್ರಯಾಣಿಕರನ್ನು ಸೆಳೆಯಲು ವಿಫಲವಾಗಿದೆ.
ಭೋಪಾಲ್-ಜಬಾಲ್‌ಪುರ್ ನಡುವಿ ವಂದೇ ಭಾರತ್ ರೈಲಿನಲ್ಲಿ ಶೇ 32ರಷ್ಟು ಜನರು ಸಂಚಾರ ನಡೆಸುತ್ತಿದ್ದಾರೆ. ಆದರೆ ಜಬಾಲ್‌ಪುರ-ಭೋಪಾಲ್ ರೈಲಿನಲ್ಲಿ ಶೇ 36ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಆದ್ದರಿಂದ ದರವನ್ನು ಕಡಿಮೆ ಮಾಡಿದರೆ ಇನ್ನೂ ಹೆಚ್ಚು ಜನರನ್ನು ಸೆಳೆಯಬಹುದು ಎಂದು ಇಲಾಖೆ ಚಿಂತನೆ ನಡೆಸಿದೆ.
ಪ್ರಸ್ತುತ ಭಾರತೀಯ ರೈಲ್ವೆ ದೇಶದಲ್ಲಿ 46 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಈ ವರ್ಷದ ಆಗಸ್ಟ್ 15ರ ವೇಳೆಗೆ 75 ರೈಲುಗಳನ್ನು ಓಡಿಸುವುದಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆದರೆ ಬೋಗಿಗಳ ಕೊರತೆಯ ಕಾರಣ ಇದು ಸಾಧ್ಯವಾಗುವುದಿಲ್ಲ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅತಿ ಹೆಚ್ಚು ಎಂದರೆ ಶೇ 183ರಷ್ಟು ಪ್ರಯಾಣಿಕರು ಕಾಸರಗೋಡು-ತ್ರಿವೆಂಡ್ರಮ್ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಅದೇ ತ್ರಿವೆಂಡ್ರಮ್-ಕಾಸರಗೋಡು ರೈಲಿನಲ್ಲಿ ಶೇ 176ರಷ್ಟು ಜನರು ಸಂಚಾರ ನಡೆಸುತ್ತಾರೆ. ಗಾಂಧಿ ನಗರ-ಮುಂಬೈ ರೈಲಿನಲ್ಲಿ ಶೇ 134ರಷ್ಟು ಪ್ರಯಾಣಿಕರ ಓಡಾಡ ನಡೆಸುತ್ತಿದ್ದಾರೆ.












Click it and Unblock the Notifications