ಲೋಕಸಭೆ ಚುನಾವಣೆ ಮೈತ್ರಿ: ಮೌನ ಮುರಿದ ಮಾಯಾವತಿ!
ನವದೆಹಲಿ, ಫೆಬ್ರವರಿ 19; ಲೋಕಸಭೆ ಚುನಾವಣೆಗೆ ತಯಾರಿ ಆರಂಭವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಎದುರಿಸಲು ಕಾಂಗ್ರೆಸ್ ನೇತೃತ್ವದಲ್ಲಿ 'ಇಂಡಿಯಾ' ಮೈತ್ರಿಕೂಟ ರಚನೆಯಾಗಿದೆ. ಯಾವ-ಯಾವ ಪಕ್ಷ ಮೈತ್ರಿಕೂಟ ಸೇರಲಿವೆ? ಎಂಬುದು ಪ್ರಶ್ನೆ.
ಸೋಮವಾರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಪಕ್ಷದ ಮುಖ್ಯಸ್ಥೆ ಮಾಯಾವತಿ ಸ್ಪಷ್ಟನೆ ನೀಡಿದರು. ಈ ಮೂಲಕ ಬಿಎಸ್‌ಪಿ ಪಕ್ಷ 'ಇಂಡಿಯಾ' ಮೈತ್ರಿಕೂಟ ಸೇರಲಿದೆ ಎಂಬ ಸುದ್ದಿಗಳಿಗೆ ತೆರೆ ಬಿದ್ದಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, "ವದಂತಿಗಳ ಬಗ್ಗೆ ಎಚ್ಚರವಾಗಿರಿ. ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಲೋಕಸಭೆ ಚುನಾವಣೆಯನ್ನು ಎದುರಿಸಲಿದೆ" ಎಂದು ಹೇಳಿದರು. ಈ ಮೂಲಕ ಯಾವುದೇ ಮೈತ್ರಿಕೂಟ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಪಷ್ಟನೆ ಏಕೆ?; ಲೋಕಸಭೆ ಚುನಾವಣೆ ಸಮಯದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಸೇರಲಿದೆ ಎಂಬ ವರದಿಗಳು ಹಬ್ಬಿದ್ದವು. ಅಲ್ಲದೇ ಬಿಎಸ್‌ಪಿಯ ಕೆಲವು ನಾಯಕರು ಸಹ ಮೈತ್ರಿಕೂಟಕ್ಕೆ ಪಕ್ಷ ಸೇರಿಸಲು ಪ್ರಯತ್ನ ನಡೆಸಿದ್ದರು. ಆದ್ದರಿಂದ ಸ್ಪಷ್ಟನೆ ನೀಡಲಾಗಿದೆ.
"ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರೂ ಸಹ ಮೈತ್ರಿ ಕುರಿತು ದಿನದಿಂದ ದಿನಕ್ಕೆ ವದಂತಿಗಳು ಹಬ್ಬುತ್ತಿವೆ. ಇದು ಬಿಎಸ್‌ಪಿ ಇಲ್ಲದೇ ಕೆಲವು ಪಕ್ಷಗಳು ಮುನ್ನಡೆ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ" ಎಂದು ಮಾಯಾವತಿ ಹೇಳಿದ್ದಾರೆ.
"ಸಮಾಜದ ಹಿತಾಸಕ್ತಿಗಮನದಲ್ಲಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಏಕಪಕ್ಷೀಯವಾಗಿ ಸ್ಪರ್ಧಿಸಲು ಬಿಎಸ್‌ಪಿ ನಿರ್ಧರಿಸಿದೆ. ವದಂತಿಗಳಿಗೆ ಕಿವಿಗೊಡುವ ಮುನ್ನ ಎಚ್ಚರ" ಎಂದು ಮಾಯಾವತಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. 2019ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು. ಬಿಎಸ್‌ಪಿ 10 ಮತ್ತು ಎಸ್‌ಪಿ 5 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು.
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮಾತನಾಡಿ, "ಹಲವು ಸಣ್ಣಪುಟ್ಟ ಪಕ್ಷಗಳು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸೇರುತ್ತಿವೆ. ಬಿಎಸ್‌ಪಿ ಜೊತೆಯೂ ಮಾತುಕತೆ ನಡೆಯುತ್ತಿದೆ. ಫೆಬ್ರವರಿ ಅಂತ್ಯದಲ್ಲಿ ಸೀಟು ಹಂಚಿಕೆ ಅಂತಿಮಗೊಂಡು ಪಕ್ಷವು ಮೈತ್ರಿಕೂಟ ಸೇರಲಿದೆ" ಎಂದು ಹೇಳಿದ್ದರು.
ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ, ದೆಹಲಿ ಮತ್ತು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಘೋಷಣೆ ಮಾಡಿದ್ದವು. ಈಗ ಮಾಯಾವತಿ ಮೈತ್ರಿಕೂಟ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ, 2023ರ ಡಿಸೆಂಬರ್‌ನಲ್ಲಿ ಮಹತ್ವದ ಸಭೆಯ ಬಳಿಕ ಮಾಯಾವತಿ ಆಕಾಶ್ ಆನಂದ್ ತಮ್ಮ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದರು. ಮಾಯಾವತಿ ಸಂಬಂಧಿಯೂ ಆಗಿರುವ ಆಕಾಶ್ ಆನಂದ್ ಮಾಯಾವತಿ ಬಳಿಕ ಬಿಎಸ್‌ಪಿ ಪಕ್ಷವನ್ನು ಮುನ್ನಡೆಸಲಿದ್ದಾರೆ.












Click it and Unblock the Notifications