ಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಪ್ರಮುಖ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಕ್ಷೇತ್ರ?
ನವದೆಹಲಿ, ಜನವರಿ 24: ಲೋಕಸಭೆ ಚುನಾವಣೆ 2019ರ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಿ ವೋಟರ್ ನಡೆಸಿದ್ದು, ಎಬಿಪಿ ಸುದ್ದಿ ವಾಹಿನಿ ಈ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸುತ್ತಿದೆ.
ಒಟ್ಟು 22,309 ಸಮೀಕ್ಷೆ ಮಾದರಿಗಳನ್ನು ಬಳಸಿಕೊಳ್ಳಲಾಗಿದ್ದು, 2018ರ ಡಿಸೆಂಬರ್‌ನಿಂದ ಜನವರಿ ಮೂರನೇ ವಾರದವರೆಗೆ ಸಮೀಕ್ಷೆ ನಡೆಸಲಾಗಿದೆ. ಎಲ್ಲ ರಾಜ್ಯಗಳಲ್ಲಿನ ಎಲ್ಲ 543 ಲೋಕಸಭೆ ಕ್ಷೇತ್ರಗಳಲ್ಲಿಯೂ ಸಮೀಕ್ಷೆ ನಡೆಸಲಾಗಿದೆ.
ದೇಶದಲ್ಲಿ ಕಳೆದ 24 ವರ್ಷಗಳಲ್ಲಿಯೇ ನಡೆದ ಅತಿ ದೊಡ್ಡ ಹಾಗೂ ನಿಖರ ಸ್ವತಂತ್ರ ಚುನಾವಣಾ ಪೂರ್ವ ಮಾದರಿ ಸಮೀಕ್ಷೆಯಾಗಿದೆ ಎಂದು ಸಿ ವೋಟರ್ ಹೇಳಿಕೊಂಡಿದೆ.
ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಕೆಲವು ಪ್ರಮುಖ ರಾಜ್ಯಗಳ ಫಲಿತಾಂಶ ಇಲ್ಲಿದೆ.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ
ಬಿಹಾರದಲ್ಲಿ 40 ಸೀಟುಗಳಲ್ಲಿ 35 ಸೀಟುಗಳಲ್ಲಿ ಎನ್‌ಡಿಎ ಮೈತ್ರಿಕೂಟ ಜಯಗಳಿಸಲಿದೆ. ಇನ್ನು ಉಳಿದ ಐದು ಕ್ಷೇತ್ರಗಳು ಯುಪಿಎ ಪಾಲಾಗಲಿದೆ.

ಮಹಾರಾಷ್ಟ್ರದಲ್ಲಿ ಯುಪಿಎ ದರ್ಬಾರು
ಮಹಾರಾಷ್ಟ್ರದಲ್ಲಿ 48 ಲೋಕಸಭೆ ಕ್ಷೇತ್ರಗಳಲ್ಲಿ 20 ಸೀಟುಗಳು ಮಾತ್ರ ಎನ್‌ಡಿಯ ಮೈತ್ರಿಕೂಟಕ್ಕೆ ಲಭಿಸಲಿವೆ. ಇನ್ನು ಉಳಿದ 28 ಸೀಟುಗಳು ಯುಪಿಎ ಮೈತ್ರಿಕೂಟದ ಪಾಲಾಗಲಿವೆ.

ಗುಜರಾತ್‌ನಲ್ಲಿ ಬಿಜೆಪಿ ಪಾರುಪತ್ಯ
ಗುಜರಾತ್‌ನಲ್ಲಿ ಒಟ್ಟು 26 ಲೋಕಸಭೆ ಕ್ಷೇತ್ರಗಳಿದ್ದು, ಬಿಜೆಪಿ ತನ್ನ ಪಾರುಪತ್ಯ ಮುಂದುವರಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿ 24 ಸೀಟುಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಳ್ಳಲಿದೆ. ಇನ್ನು ಕೇವಲ ಎರಡು ಸೀಟುಗಳು ಕಾಂಗ್ರೆಸ್‌ಗೆ ದಕ್ಕಲಿವೆ.

ಎಡರಂಗದ ನಾಡಿನಲ್ಲಿ
ಎಡರಂಗದ ಪ್ರಭಾವವಳಿಯುಳ್ಳ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಸ್ಪರ್ಧೆ ನೀಡುವ ನಿರೀಕ್ಷೆಯಿದೆ. 42 ಲೋಕಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬರೋಬ್ಬರಿ 34 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ. ಅಲ್ಲಿ ಅಸ್ತಿತ್ವ ಪಡೆಯಲು ಹವಣಿಸುತ್ತಿರುವ ಬಿಜೆಪಿ ಏಳು ಸೀಟುಗಳಲ್ಲಿ ಗೆಲ್ಲಲಿದೆ. ಇನ್ನು ಯುಪಿಎ ಕೇವಲ ಒಂದು ಕ್ಷೇತ್ರದ ಗೆಲುವಿಗೆ ಸಮಾಧಾನಪಟ್ಟುಕೊಳ್ಳಲಿದೆ.

ಒಡಿಶಾದಲ್ಲಿ ಎನ್‌ಡಿಎ ಜೋರು
ಒಡಿಶಾದಲ್ಲಿನ 21 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಇನ್ನು ಉಳಿದ 9 ಕ್ಷೇತ್ರಗಳು ಇತರೆ ಪಕ್ಷಗಳ ಪಾಲಾಗಲಿವೆ. ಯುಪಿಎ ಇಲ್ಲಿ ಖಾತೆ ತೆರೆಯುವುದರಲ್ಲಿ ವಿಫಲವಾಗಲಿದೆ.

ಮಧ್ಯಪ್ರದೇಶದಲ್ಲಿ ಕಮಲದ್ದೇ ಕಾರುಬಾರು
ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರೂ, ಮಧ್ಯಪ್ರದೇಶದಲ್ಲಿ ಮತದಾರರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕೈ ಹಿಡಿಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 29 ಲೋಕಸಭೆ ಕ್ಷೇತ್ರಗಳ ಪೈಕಿ ಎನ್‌ಡಿಎ ಇಲ್ಲಿ 23ರಲ್ಲಿ ಗೆಲ್ಲಲಿದೆ. ಇನ್ನು 9 ಕ್ಷೇತ್ರಗಳು ಇತರೆ ಪಕ್ಷಗಳಿಗೆ ಒಲಿಯಲಿವೆ. ಯುಪಿಎ ಸಾಧನೆ ಇಲ್ಲಿ ಶೂನ್ಯ.

ತಮಿಳುನಾಡಿನಲ್ಲಿ ಯುಪಿಎ ಹವಾ
ನೆರೆಯ ತಮಿಳುನಾಡಿನಲ್ಲಿ ಯುಪಿಎ ಮಹಾಮೈತ್ರಿಕೂಟದ್ದೇ ಹವಾ. ಇಲ್ಲಿ 39 ಲೋಕಸಭಾ ಕ್ಷೇತ್ರಗಳಿದ್ದು, ಬಿಜೆಪಿ ಖಾತೆಯನ್ನೇ ತೆರೆಯುವುದಿಲ್ಲ. ಎಲ್ಲ 39 ಕ್ಷೇತ್ರಗಳೂ ಮಹಾ ಮೈತ್ರಿಕೂಟದ ಪಾಲಾಗಲಿವೆ.

ಕೇರಳದಲ್ಲಿಯೂ ಯುಪಿಎ ಪ್ರಾಬಲ್ಯ
ಎಡ ಸಿದ್ಧಾಂತದ ಪ್ರಭಾವವುಳ್ಳ ಕೇರಳದಲ್ಲಿ ಶಬರಿಮಲೆ ವಿವಾದ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ. ಆದರೆ, ಅದರಿಂದ ಬಿಜೆಪಿಗೆ ಅಷ್ಟೇನೂ ನೆರವಾಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.
20 ಲೋಕಸಭೆ ಕ್ಷೇತ್ರಗಳಲ್ಲಿ ಒಂದರಲ್ಲಿಯೂ ಬಿಜೆಪಿ ಗೆಲುವು ಕಾಣಲಾರದು. 16 ಸ್ಥಾನಗಳು ಯುಪಿಎ ಮೈತ್ರಿಕೂಟಕ್ಕೆ ದೊರಕಲಿವೆ. ಇನ್ನು ನಾಲ್ಕು ಕ್ಷೇತ್ರಗಳನ್ನು ಎಲ್‌ಡಿಎಫ್ ಪಡೆದುಕೊಳ್ಳಲಿದೆ.












Click it and Unblock the Notifications