ಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಬಿಜೆಪಿಗೆ 233 ಸೀಟು, ಲೋಕಸಭೆ ಅತಂತ್ರ
ನವದೆಹಲಿ, ಜನವರಿ 24: ಈ ಬಾರಿಯ ಲೋಕಸಭೆ ಚುನಾವಣಾ ಫಲಿತಾಂಶ ಅತಂತ್ರವಾಗಲಿದ್ದು, ಯಾವ ಕ್ಷೇತ್ರಕ್ಕೂ ನಿಚ್ಚಳ ಬಹುಮತ ಸಿಗುವುದಿಲ್ಲ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ತಿಳಿಸಿದೆ.
ಲೋಕಸಭೆ ಚುನಾವಣೆ 2019ರ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಿ ವೋಟರ್ ನಡೆಸಿದ್ದು, ಎಬಿಪಿ ಸುದ್ದಿ ವಾಹಿನಿ ಈ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
ಒಟ್ಟು 22,309 ಸಮೀಕ್ಷೆ ಮಾದರಿಗಳನ್ನು ಬಳಸಿಕೊಳ್ಳಲಾಗಿದ್ದು, 2018ರ ಡಿಸೆಂಬರ್‌ನಿಂದ ಜನವರಿ ಮೂರನೇ ವಾರದವರೆಗೆ ಸಮೀಕ್ಷೆ ನಡೆಸಲಾಗಿದೆ. ಎಲ್ಲ ರಾಜ್ಯಗಳಲ್ಲಿನ ಎಲ್ಲ 543 ಲೋಕಸಭೆ ಕ್ಷೇತ್ರಗಳಲ್ಲಿಯೂ ಸಮೀಕ್ಷೆ ನಡೆಸಲಾಗಿದೆ.

ದೇಶದಲ್ಲಿ ಕಳೆದ 24 ವರ್ಷಗಳಲ್ಲಿಯೇ ನಡೆದ ಅತಿ ದೊಡ್ಡ ಹಾಗೂ ನಿಖರ ಸ್ವತಂತ್ರ ಚುನಾವಣಾ ಪೂರ್ವ ಮಾದರಿ ಸಮೀಕ್ಷೆಯಾಗಿದೆ ಎಂದು ಸಿ ವೋಟರ್ ಹೇಳಿಕೊಂಡಿದೆ.
ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಒಟ್ಟಾರೆ ಫಲಿತಾಂಶ ಇಲ್ಲಿದೆ.
ಒಟ್ಟು 543 ಲೋಕಸಭೆ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ 272 ಕ್ಷೇತ್ರಗಳಲ್ಲಿ ಜಯಗಳಿಸಬೇಕು. ಆದರೆ, ಯಾವ ಮೈತ್ರಿಕೂಟವೂ ಸ್ಪಷ್ಟ ಬಹುಮತ ಪಡೆದುಕೊಳ್ಳುವುದಿಲ್ಲ ಎನ್ನುತ್ತದೆ ಸಮೀಕ್ಷೆ.
ಎನ್‌ಡಿಎ ಮೈತ್ರಿಕೂಟದ ಶಕ್ತಿ 233ಕ್ಕೆ ಕುಸಿಯಲಿದೆ. ಯುಪಿಎ 167 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆಯಲಿದೆ. ಉಳಿದ 143 ಸ್ಥಾನಗಳಲ್ಲಿ ಇತರೆ ಪಕ್ಷಗಳು ಗೆಲುವು ಕಾಣಲಿದೆ. ಹೀಗಾಗಿ ಸರ್ಕಾರ ರಚನೆಯಲ್ಲಿ ಇತರೆ ಪಕ್ಷಗಳನ್ನು ಅವಲಂಬಿಸುವುದು ಅನಿವಾರ್ಯ.
ಮೈತ್ರಿ ಪಕ್ಷಗಳನ್ನು ಹೊರತುಪಡಿಸಿ ಬಿಜೆಪಿ 203 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ 109 ಕ್ಷೇತ್ರಗಳನ್ನು ಮಾತ್ರ ಪಡೆದುಕೊಳ್ಳಲಿದೆ. ಇನ್ನು 231 ಕ್ಷೇತ್ರಗಳು ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳ ಪಾಲಾಗಲಿವೆ.












Click it and Unblock the Notifications