Priyanka Gandhi: ಇಂದಿರಾ ಗಾಂಧಿ ಪ್ರತಿನಿಧಿಸಿದ್ದ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ಕಣಕ್ಕೆ ಎಂಟ್ರಿ!
ಲಕ್ನೋ, ಮಾರ್ಚ್ 06: ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಧ್ವನಿಯಾಗಿ ನಿಂತಿರುವ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಉತ್ತರ ಪ್ರದೇಶದ ಭದ್ರಕೋಟೆಯಾದ ರಾಯ್ ಬರೇಲಿಯಿಂದ ಚುನಾವಣಾ ಕಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ದೇಶದಲ್ಲಿ ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಹೊಸ ಸುದ್ದಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಕತ್ ಖುಷಿ ನೀಡಿದೆ.
ಉತ್ತರ ಪ್ರದೇಶದ ಕಾಂಗ್ರೆಸ್ ಭದ್ರಕೋಟೆಯಾದ ರಾಯ್ ಬರೇಲಿ ಕ್ಷೇತ್ರವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೂರು ಬಾರಿ ಗೆದ್ದಿದ್ದಾರೆ. ಇದೇ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಬುಧವಾರ ಮಧ್ಯಾಹ್ನ ಎನ್‌ಡಿಟಿವಿ ಸುದ್ದಿ ಮಾಡಿದೆ.

ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಪ್ರವೇಶ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವುದು ಅವರ ತಾಯಿ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಬಿಟ್ಟಿರುವ ಕ್ಷೇತ್ರದಿಂದ. ಸೋನಿಯಾ ಗಾಂಧಿ ಅವರು 2019 ಸೇರಿದಂತೆ ಈ ಹಿಂದೆ ಐದು ಬಾರಿ ಗೆದ್ದಿರುವ ರಾಯ್ ಬರೇಲಿಯಿಂದ ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದರು. ಯುಪಿ ಲೋಕಸಭಾ ಸ್ಥಾನವನ್ನು ಗೆದ್ದ ಏಕೈಕ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ.
ಸೋನಿಯಾ ಗಾಂಧಿ ಅವರು ಕಳೆದ ತಿಂಗಳು ಲೋಕಸಭೆಯಿಂದ ರಾಜ್ಯಸಭೆಗೆ ತೆರಳಿದ್ದಾರೆ. ಅವರು ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯ ಮೊದಲು ಪಕ್ಷದ ನಾಯಕತ್ವದ ಬದಲಾವಣೆಯನ್ನು ಸೂಚಿಸುವ ಉದ್ದೇಶದಿಂದ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಸೋನಿಯಾ ಗಾಂಧಿಯವರು ರಾಯ್ಬರೇಲಿಯಿಂದ ಹಿಂದೆ ಸರಿದ ಬಳಿಕ ಪ್ರಿಯಾಂಕಾ ಗಾಂಧಿ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹರಡಿದ್ದವು. ಪ್ರಿಯಾಂಕಾ ಗಾಂಧಿಯಲ್ಲಿ ತನ್ನ ಅಜ್ಜಿ ಇಂದಿರಾ ಗಾಂಧಿ ಅವರ ಹೋಲಿಕೆಯಿದ್ದು, ಅವರು ಗೆದ್ದ ಕ್ಷೇತ್ರದಿಂದಲೇ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.
ಈ ವಾರ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಘೋಷಿಸುವಂತೆ ಅನೇಕ ಪೋಸ್ಟರ್‌ಗಳು ಸಹ ಕಾಣಿಸಿಕೊಂಡಿದ್ದವು. 'ರಾಯಬರೇಲಿ ಕರೆಯುತ್ತಿದೆ... ಪ್ರಿಯಾಂಕಾ ಗಾಂಧಿ ಜಿ, ದಯವಿಟ್ಟು ಬನ್ನಿ' ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ಜನರ ಒತ್ತಾಯಕ್ಕೆ ಕಾಂಗ್ರೆಸ್ ಸ್ಪಂದಿಸಿದ್ದು, ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕೆ ಇಳಿಸುತ್ತಿದೆ.
ಬಿಜೆಪಿ ಇನ್ನೂ ತನ್ನ ರಾಯ್ಬರೇಲಿ ಅಭ್ಯರ್ಥಿಯನ್ನು ಘೋಷಿಸಿಲ್ಲ. 2019 ರಲ್ಲಿ ಪಕ್ಷವು ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಕಣಕ್ಕಿಳಿಸಿತು. ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ 1.8 ಲಕ್ಷಕ್ಕೂ ಹೆಚ್ಚು ಮತಗಳಿಂದ ದಿನೇಶ್ ಪ್ರತಾಪ್ ಸಿಂಗ್ ಸೋಲು ಕಂಡಿದ್ದರು. ಈ ಬಾರಿ ಹೆಚ್ಚು ಪ್ಲ್ಯಾನ್ ಮಾಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ಇನ್ನು, ಉತ್ತರ ಪ್ರದೇಶದ ಮತ್ತೊಂದು ಕಾಂಗ್ರೆಸ್ ಭದ್ರಕೋಟೆ ಎನ್ನಲಾಗುತ್ತಿದ್ದ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರು 2019 ರಲ್ಲಿ ಭಾರತೀಯ ಜನತಾ ಪಕ್ಷದ ಸ್ಮೃತಿ ಇರಾನಿ ಸೋಲಿಸಿ ದೊಡ್ಡ ಆಘಾತ ನೀಡಿದ್ದರು. ಈ ಬಾರಿಯೂ ಅಮೇಥಿಯಿಂದ ಸ್ಮೃತಿ ಇರಾನಿ ಕಣಕ್ಕೆ ಇಳಿಯುತ್ತಿದ್ದಾರೆ. ರಾಹುಲ್ ಗಾಂಧಿ ಕೇರಳದ ವಯನಾಡ್ ಮತ್ತು ಅಮೇಥಿ ನಡುವೆ ಆಯ್ಕೆ ಮಾಡಿಕೊಳ್ಳಲಿದ್ದಾರೆ.












Click it and Unblock the Notifications