ಅಬ್ಬಬ್ಬಾ... ಲೋಕಸಭಾ ಚುನಾವಣೆಯಲ್ಲಿ ಈವರೆಗೂ ಸಿಕ್ಕಿರೋದು ನೂರಲ್ಲ.. ಸಾವಿರಾರು ಕೋಟಿ..!
ನವದೆಹಲಿ, ಮೇ. 19: ಪ್ರಸಕ್ತ ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿಯೇ ನೂರಾರು ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಅಂತಹದರಲ್ಲಿ ದೇಶಾದ್ಯಂತ ಎಷ್ಟು ಸಾವಿರ ಕೋಟಿ ಹಣ ವಶವಾಗಿರಬಹುದು ಎಂಬ ಕುತೂಹಲ ಜನರಲ್ಲಿ ಇದ್ದೆ ಇದೆ. ಇದಕ್ಕೆ ಭಾರತೀಯ ಚುನಾವಣಾ ಆಯೋಗ ಉತ್ತರ ನೀಡಿದೆ.
ಕೇಂದ್ರ ಏಜೆನ್ಸಿಗಳು ಇದುವರೆಗೆ 8,889.74 ಕೋಟಿ ವಶಪಡಿಸಿಕೊಂಡಿವೆ ಎಂದು ಭಾರತೀಯ ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಚುನಾವಣಾ ಆಯೋಗದ ಪ್ರಕಾರ, 3,958.85 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶವಾಗಿದೆ. ಭಯೋತ್ಪಾದನಾ ನಿಗ್ರಹ ದಳ ಗುಜರಾತ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಮೂರು ಬಾರಿ 892 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಏಪ್ರಿಲ್ ನಲ್ಲಿ ನೋಯ್ಡಾ ಪೊಲೀಸರು ರೂ.150 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು.

"ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಹಣಬಲ ಮತ್ತು ಜನರನ್ನು ವಶಪಡಿಸಿಕೊಳ್ಳಲು ಡ್ರಗ್ಸ್ ನೀಡುವವರ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿತ್ತು. ಹೀಗಾಗಿ ಆಯೋಗದ ಬೆಂಬಲ ಮತ್ತು ಸಂಘಟಿತ ದಾಳಿಯಿಂದಾಗಿ ಕೇಂದ್ರ ಏಜೆನ್ಸಿಗಳು ಬರೋಬ್ಬರಿ 8,889 ಕೋಟಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿವೆ" ಎಂದು ಆಯೋಗ ತಿಳಿಸಿದೆ.
ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳು ಸೇರಿದಂತೆ 3,958.85 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, 2,006.56 ಕೋಟಿ ರೂಪಾಯಿ ಮೌಲ್ಯದ ಉಚಿತ ಮತ್ತು ಇತರ ವಸ್ತುಗಳು (22%), 1,260.33 ಕೋಟಿ ರೂಪಾಯಿ ಮೌಲ್ಯದ ಅಮೂಲ್ಯ ಲೋಹಗಳು (14%), 849.15 ಕೋಟಿ ರೂಪಾಯಿ ಮೌಲ್ಯದ ನಗದು (9.6%), ಮತ್ತು 814.85 ಕೋಟಿ ಮೌಲ್ಯದ 53.97 ಮಿಲಿಯನ್ ಲೀಟರ್ ಮದ್ಯ (9%) ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
"ಡ್ರಗ್ಸ್, ಮದ್ಯ, ಬೆಲೆಬಾಳುವ ಲೋಹಗಳು, ಉಚಿತ ವಸ್ತುಗಳು, ನಗದು ವಶಪಡಿಸಿಕೊಳ್ಳುವಿಕೆಯು ವಿವಿಧ ಹಂತಗಳಲ್ಲಿ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವು ನೇರವಾಗಿ ಜನರ ಕಡೆಗೆ ಹರಿಯುತ್ತದೆ ಮತ್ತು ಇತರವು ಕಡಿಮೆ ಮಟ್ಟದಲ್ಲಿ ಜನರ ಮೇಲೆ ಪ್ರಭಆವ ಬೀರುತ್ತದೆ. ಇದರಿಂದಾಗಿ, ರಾಜಕೀಯ ಪ್ರಚಾರಗಳಿಗೆ ಅಕ್ರಮ ಚಟುವಟಿಕೆಗಳಿಂದ ಆದಾಯ ಸಿಗುತ್ತದೆ. ಇದು ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ಇಸಿಐ ಹೇಳಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಸಾಗಣೆ ವಲಯಗಳಾಗಿದ್ದವು ಈಗ ಬಳಕೆಯ ಪ್ರದೇಶಗಳಾಗುತ್ತಿವೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಗುಜರಾತಿನಲ್ಲಿ ರೂ.1,461.73 ಕೋಟಿ ಮೌಲ್ಯದ ಹಣ ಮತ್ತು ಡ್ರಗ್ಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ 1,187,80 ಮೌಲ್ಯದ ಡ್ರಗ್ಸ್ ಸೇರಿದೆ. ರಾಜಸ್ಥಾನದಲ್ಲಿ 1,133.82 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಇನ್ನು, ಕರ್ನಾಟಕದಲ್ಲಿ 175.36 ಕೋಟಿ ಮೌಲ್ಯದ 14.73 ಮಿಲಿಯನ್ ಲೀಟರ್ ಮದ್ಯ ವಶಪಡಿಸಿಕೊಳ್ಳುವುದರೊಂದಿಗೆ ಕರ್ನಾಟಕವು ಅತಿ ಹೆಚ್ಚು ಮದ್ಯ ವಶಪಡಿಸಿಕೊಂಡ ರಾಜ್ಯಗಳಲ್ಲಿ ಅಗ್ರ ಸ್ಥಾನದಲ್ಲಿದೆ. ತೆಲಂಗಾಣದಲ್ಲಿ ಅತಿ ಹೆಚ್ಚು ನಗದು ಅಂದರೆ 114.41 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದು, ದೆಹಲಿಯಲ್ಲಿ 195.01 ಕೋಟಿ ಮೌಲ್ಯದ ಲೋಹಗಳನ್ನು ವಶಪಡಿಸಲಾಗಿದೆ. ರಾಜಸ್ಥಾನದಲ್ಲಿ 756.77 ಕೋಟಿ ರೂಪಾಯಿಯ ಅತಿ ಹೆಚ್ಚು ಉಚಿತ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.












Click it and Unblock the Notifications