ಲಾಕ್ ಡೌನ್ 5.0; ವಿನಾಯಿತಿ ಇದ್ದರೂ ಇವುಗಳ ಪಾಲನೆ ಕಡ್ಡಾಯ
ನವದೆಹಲಿ, ಮೇ 30 : ಕೇಂದ್ರ ಗೃಹ ಇಲಾಖೆ 5ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಜೂನ್ 1ರಿಂದ 30ರ ತನಕ ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲು ಐದನೇ ಹಂತದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ. ಕೆಲವು ವಿನಾಯಿತಿಗಳನ್ನು ಲಾಕ್ ಡೌನ್‌ನಲ್ಲಿ ಘೋಷಣೆ ಮಾಡಲಾಗಿದೆ.
Recommended Video
ಶುಕ್ರವಾರ ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮೇ 31ರಂದು 4ನೇ ಹಂತದ ಲಾಕ್ ಡೌನ್ ಮುಗಿಯಲಿದೆ. 5ನೇ ಹಂತದ ಲಾಕ್ ಡೌನ್‌ನಲ್ಲಿ ಹಲವು ವಿನಾಯಿತಿಗಳನ್ನು ಘೋಷಣೆ ಮಾಡಲಾಗಿದೆ.
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವ ಪ್ರದೇಶಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ. ಇಡೀ ದೇಶದಲ್ಲಿ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಅಂತರರಾಜ್ಯ ಪ್ರವಾಸಕ್ಕೆ ಪಾಸುಗಳ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ರಾಜ್ಯಗಳು ಬಯಸಿದರೆ ನಿರ್ಬಂಧ ಹೇರಬಹುದು. ಆಯಾ ರಾಜ್ಯಗಳ ಮಾರ್ಗಸೂಚಿಯಲ್ಲಿ ಈ ಕುರಿತು ಘೋಷಣೆ ಮಾಡಬೇಕು.

ಮಾಸ್ಕ್ ಬಳಕೆ ಕಡ್ಡಾಯ
* ಲಾಕ್ ಡೌನ್ 5ನೇ ಹಂತದಲ್ಲಿಯೂ ಸಾರ್ವಜನಿಕ ಸ್ಥಳದಲ್ಲಿ, ಕಚೇರಿಯಲ್ಲಿ ಜನರು ಮಾಸ್ಕ್ ಧರಿಸುವುದು ಕಡ್ಡಾಯ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚಾರ ನಡೆಸುವಾಗಲೂ ಮಾಸ್ಕ್ ಧರಿಸಬೇಕು.
* ಸಾರ್ವಜನಿಕ ಸ್ಥಳ ಸೇರಿದಂತೆ ಎಲ್ಲಾ ಕಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಅಂಗಡಿಗಳ ಮಾಲೀಕರು ಜನರು ಅಂತರ ಕಾಪಾಡಿಕೊಳ್ಳುವ ಕುರಿತು ಗಮನಹರಿಸಬೇಕು.

ಅಂತ್ಯ ಸಂಸ್ಕಾರ, ವಿವಾಹ
* ಹೆಚ್ಚು ಜನರು ಸೇರುವಂತಹ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.
* ವಿವಾಹ ಸಮಾರಂಭಗಳಿಗೆ 50, ಅಂತ್ಯ ಸಂಸ್ಕಾರಕ್ಕೆ 20 ಜನರು ಮಾತ್ರ ಸೇರಬೇಕು.
* ಧಾರ್ಮಿಕ ಕಾರ್ಯಕ್ರಮ/ಮನೋರಂಜನೆ/ರಾಜಕೀಯ ಜಾಥಾ ಮುಂತಾದವುಗಳಿಗೆ ಅವಕಾಶವಿಲ್ಲ.

ಯಾವುದಕ್ಕೆ ನಿಷೇಧ
* ಜನರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ
* ಸಾರ್ವಜನಿಕ ಸ್ಥಳದಲ್ಲಿ ಮದ್ಯ, ಪಾನ್ ಮಸಾಲ, ಗುಟ್ಕಾ, ತಂಬಾಕು ಉತ್ಪನ್ನ ಸೇವಿಸುವಂತಿಲ್ಲ.
* ಬಸ್, ರೈಲು, ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು.

ಕೆಲವು ಷರತ್ತುಗಳು ಅನ್ವಯ
* ಮನೆಯಿಂದಲೇ ಕೆಲಸ ಮಾಡಬೇಕು. ಕಚೇರಿಯಿಂದ ಸೀಮಿತ ಸಿಬ್ಬಂದಿ ಕೆಲಸ ಮಾಡುವ ಕುರಿತು ಉದ್ಯಮಗಳು ತೀರ್ಮಾನ ಕೈಗೊಳ್ಳಬಹುದು.
* ಕಚೇರಿ, ಅಂಗಡಿ, ವಾಣಿಜ್ಯ ಚಟುವಟಿಕೆ ನಡೆಸುವಾಗ ನಿಗದಿಪಡಿಸಿದ ಸಮಯವನ್ನು ಪಾಲನೆ ಮಾಡಬೇಕು.
* ಕಚೇರಿ, ನಿಲ್ದಾಣಗಳಲ್ಲಿ ಸ್ಯಾನಿಟೈಸೇಷನ್ ಕಡ್ಡಾಯ.












Click it and Unblock the Notifications