Maha Kumbh Mela: ಮಹಾ ಕುಂಭ ಮೇಳ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿದ ಸ್ಟೀವ್ ಜಾಬ್ಸ್ ಪತ್ನಿ
ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ಆಗಮಿಸಿದ್ದ ಆಪಲ್‌ನ ಸಹ-ಸಂಸ್ಥಾಪಕಿ ಮತ್ತು ಮಾಜಿ ಸಿಇಒ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ತೆರಳಿದ್ದಾರೆ. ತಮ್ಮ ವಾಸ್ತವ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಿಶೇಷ ವಿಮಾನದ ಮೂಲಕ ಪ್ರಯಾಗ್‌ರಾಜ್‌ನಿಂದ ವಾಪಸ್ ಹೋಗಿದ್ದಾರೆ.
ಮಂಗಳವಾರ ನಡೆದ ಮೊದಲ 'ಅಮೃತ ಸ್ನಾನ'ಕ್ಕೆ ಮೊದಲು ಲಾರೆನ್ ಪೊವಿಲ್ ಜಾಬ್ಸ್ ಅವರಿಗೆ ಅಲರ್ಜಿ ಉಂಟಾಗಿತ್ತು. ಲಾರೆನ್ ಹಲವು ದಿನಗಳ ಕಾಲ ಕುಂಭ ಮೇಳದಲ್ಲಿ ತಂಗಬೇಕಿತ್ತು ಆದರೆ ಅವರು ಭೂತಾನ್‌ಗೆ ತೆರಳಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.

ತಮ್ಮ ಗುರುಗಳಾದ ಮಹಾ ಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ನಿರಂಜನಿ ಅಖಾಡದ ಶಿಬಿರದಲ್ಲಿ ತಂಗಿದ್ದ ಲಾರೆನ್ ಅವರು ಬುಧವಾರ ಮಧ್ಯಾಹ್ನವೇ ಭೂತಾನ್‌ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಖಾಡದ ಹಿರಿಯ ಮಠಾಧೀಶರ ಪ್ರಕಾರ ಗುರುವಾರ ಲಾರೆನ್ ಹೊರಡುವ ಮೊದಲು ಮಂತ್ರ ದೀಕ್ಷೆ ನೀಡಲಾಗಿದೆ. ಅವರಿಗೆ ಕಾಳಿ ದೇವಿಯ ಮಂತ್ರದ ದೀಕ್ಷೆಯನ್ನು ನೀಡಲಾಗಿದ್ದು, ಈಗ ಅವರು ದೀಕ್ಷೆಯ ಭಾಗವಾಗಿ ಮಂತ್ರವನ್ನು ಪಠಿಸುತ್ತಾರೆ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಭೇಟಿ
ಸೋಮವಾರ ಮಹಾ ಕುಂಭ ಮೇಳಕ್ಕೆ ಆಗಮಿಸಿದ್ದ ಲಾರೆನ್ ಹಲವು ದಿನಗಳ ಕಾಲ ಇಲ್ಲೇ ತಂಗಲು ನಿರ್ಧರಿಸಿದ್ದರು. ಆದರೆ ಇಷ್ಟೊಂದು ಜನದಟ್ಟಣೆ ಇರುವ ಪ್ರದೇಶದಲ್ಲಿ ಅವರು ಎಂದಿಗೂ ಹೋಗಿಲ್ಲವಾದ ಕಾರಣ, ಅವರ ಆರೋಗ್ಯದಲ್ಲಿ ಏರು ಪೇರಾಗಿತ್ತು.
ಶನಿವಾರ ವಾರಣಾಸಿಗೆ ಬಂದಿದ್ದ ಲಾರೆನ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಲಾರೆನ್ ಮಹಾ ಕುಂಭ ಮೇಳದಲ್ಲಿ ಕಲ್ಪವಾಸಿಯಾಗಲು ಯೋಜಿಸಿದ್ದರು. ಅದರಂತೆ ಅವರು ಕುಂಭ ಮೇಳದಲ್ಲಿ ಧಾರ್ಮಿಕವಾಗಿ ಶಿಸ್ತು ಬದ್ಧ ಜೀವನ ನಡೆಸಬೇಕಾಗಿತ್ತು, ಆದರೆ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ತಮ್ಮ ದೀಕ್ಷೆಯನ್ನು ಅರ್ಧಕ್ಕೆ ಬಿಟ್ಟು ವಾಪಸ್ ಹೋಗಿದ್ದಾರೆ.
ಸ್ವಾಮಿ ಕೈಲಾಶಾನಂದ ಅವರು ಲಾರೆನ್ ಗುರುಗಳು ಎಂದು ಹೇಳಲಾಗಿದೆ. ಕೈಲಾಶಾನಂದ ಅವರು ಲಾರೆನ್ ಅವರನ್ನು ಮಗಳೆಂದು ದತ್ತು ಸ್ವೀಕರಿಸಿದ್ದು 'ಕಮಲಾ' ಎಂದು ಹೊಸ ಹೆಸರು ಇಡಲಾಗಿದೆ. ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಲಾರೆನ್ ಹೆಚ್ಚಿನ ಕುತೂಹಲ ಹೊಂದಿದ್ದಾರೆ ಎಂದು ಮಠಾಧೀಶರು ಹೇಳಿದ್ದಾರೆ.
ಮಹಾ ಕುಂಭ ಮೇಳಕ್ಕೆ ಜನವರಿ 13ರಿಂದ ಚಾಲನೆ ಸಿಕ್ಕಿದ್ದು ಸಂಕ್ರಾಂತಿ ಹಬ್ಬದ ದಿನ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ದೇಶ ವಿದೇಶಗಳಿಂದ ಕೋಟ್ಯಂತರ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾರೆ. ಸುಮಾರು 40-50 ಕೋಟಿ ಭಕ್ತರು ಭಾಗವಹಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications