ಸುಪ್ರೀಂಕೋರ್ಟ್ ವಿರುದ್ಧ ಟೀಕೆ: ಕ್ಷಮೆಯಾಚಿಸುವುದಿಲ್ಲ ಎಂದ ಕುನಾಲ್ ಕಮ್ರಾ
ನವದೆಹಲಿ, ನವೆಂಬರ್ 13: ಸುಪ್ರೀಂಕೋರ್ಟ್ ಅನ್ನು ಸರಣಿ ಟ್ವೀಟ್‌ಗಳಲ್ಲಿ ಟೀಕಿಸಿರುವ ಕಾರಣಕ್ಕೆ ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅನುಮತಿ ನೀಡಿದ ಮರುದಿನ ಪ್ರತಿಕ್ರಿಯೆ ನೀಡಿರುವ ಹಾಸ್ಯ ಕಲಾವಿದ ಕುನಾಲ್ ಕಮ್ರಾ, ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆಯು ಅಥವಾ ಕ್ಷಮೆ ಯಾಚಿಸಲು ಬಯಸಿಲ್ಲ ಎಂದಿದ್ದಾರೆ. ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಘೋಷಣೆ ಮಾಡುವ ಮೊದಲು ಸುಪ್ರೀಂಕೋರ್ಟ್ ಸುಮ್ಮನೆ ನಕ್ಕುಬಿಡಬಹುದು ಎಂದು ಹೇಳಿಕೊಂಡಿದ್ದಾರೆ.
'ನನ್ನ ಟ್ವೀಟ್‌ಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ನಾನು ಬಯಸಿಲ್ಲ ಅಥವಾ ಅವುಗಳಿಗಾಗಿ ಕ್ಷಮೆ ಕೋರುವುದಿಲ್ಲ. ಅವರು ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಿದ್ದಾರೆ ಎನಿಸುತ್ತದೆ' ಎಂದು ಕುನಾಲ್ ಕಮ್ರಾ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮತ್ತು ಅಟಾರ್ನಿ ಜನರಲ್ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.
'ಸುಪ್ರೀಂಕೋರ್ಟ್ ಇದುವರೆಗೂ ನನ್ನ ಟ್ವೀಟ್‌ಗಳ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಅವರು ಹಾಗೆ ಮಾಡಿದಾಗ ಅವುಗಳು ನ್ಯಾಯಾಂಗ ನಿಂದನೆ ಎಂದು ಘೋಷಿಸುವ ಮುನ್ನ ಸಣ್ಣದಾಗಿ ನಗಬಹುದು ಎಂದು ಭರವಸೆ ಹೊಂದಿದ್ದೇನೆ' ಎಂದು ಅವರು ಹೇಳಿದ್ದಾರೆ.

'ಪ್ರೈಮ್ ಟೈಮ್‌ನ ಲೌಡ್ ಸ್ಪೀಕರ್ (ಅರ್ನಬ್ ಗೋಸ್ವಾಮಿ) ಪರವಾಗಿ ಪಕ್ಷಪಾತಿ ನಿರ್ಣಯ ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಕುರಿತು ನನ್ನ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದೇನೆ. ಇತರೆ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯದ ವಿಚಾರಗಳು ಟೀಕೆಗೆ ಒಳಗಾಗದೆ ಸುಪ್ರೀಂಕೋರ್ಟ್ ಮೌನವಹಿಸಿರುವುದರಿಂದ ನನ್ನ ದೃಷ್ಟಿಕೋನ ಬದಲಾಗುವುದಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.
'ವಕೀಲರಿಲ್ಲ, ಕ್ಷಮೆಯಿಲ್ಲ, ದಂಡವಲ್ಲ, ಜಾಗದ ವ್ಯರ್ಥವೂ ಇಲ್ಲ' ಎಂದು ಅವರು ತಮ್ಮ ಸುದೀರ್ಘ ಬರಹದ ಟಿಪ್ಪಣಿಯೊಂದಿಗೆ ಹೇಳಿಕೊಂಡಿದ್ದಾರೆ.











Click it and Unblock the Notifications