Namma Metro: ಜನರಿಗಾಗಿ ಮೆಟ್ರೋ ದರ ಕಡಿತಗೊಳಿಸಿದ್ದ ಮುಖ್ಯಮಂತ್ರಿ!
ಚೆನ್ನೈ, ಫೆಬ್ರವರಿ 12: ಬೆಂಗಳೂರು ನಗರದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ನಗರದಿಂದ ಲೋಕಸಭೆ ಕಲಾಪದ ತನಕ ಈ ಚರ್ಚೆಗಳು ಸಾಗಿವೆ. ರಾಜ್ಯದ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷವಾದ ನಡುವೆ ಈ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ.
2017ರ ಬಳಿಕ ಮೊದಲ ಬಾರಿಗೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಫೆಬ್ರವರಿ 9ರ ಭಾನುವಾರದಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಜನರು ಮೆಟ್ರೋ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರವನ್ನು ಟೀಕಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಚೆನ್ನೈ ನಗರದಲ್ಲಿ ಮೆಟ್ರೋ ಸೇವೆ ಇದೆ. ಅಲ್ಲಿಯೂ ಕೂಡಾ ಹೀಗೆ ದರ ಏರಿಕೆ ಮಾಡಿದಾಗ ಜನರಿಗೆ ಹೊರೆ ಆಗಿತ್ತು. ಆಗ ಎಐಎಡಿಎಂಕೆ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಎಡಪ್ಪಾಡಿ ಕೆ. ಪಳನಿಸ್ವಾಮಿ ಮುಖ್ಯಮಂತ್ರಿಯಾಗಿದ್ದರು.
ದರ ಕಡಿಮೆ ಮಾಡಿದ್ದ ಮುಖ್ಯಮಂತ್ರಿಗಳು: ಉತ್ತರ ಚೆನ್ನೈ ಮೆಟ್ರೋ ಮಾರ್ಗ ಉದ್ಘಾಟನೆ ಬಳಿಕ ಚೆನ್ನೈ ಮೆಟ್ರೋದ ಗರಿಷ್ಠ ಪ್ರಯಾಣ ದರ 70 ರೂ. ಗೆ ಏರಿಕೆಯಾಗಿತ್ತು. ಆಗ ಜನರ ಬೇಡಿಕೆಯಂತೆ ಮುಖ್ಯಮಂತ್ರಿಯಾಗಿದ್ದ ಎಡಪ್ಪಾಡಿ ಕೆ. ಪಳನಿಸ್ವಾಮಿ ಗರಿಷ್ಠ ಪ್ರಯಾಣ ದರವನ್ನು 50 ರೂ.ಗೆ ಇಳಿಕೆ ಮಾಡಿದ್ದರು.
ದರ ಕಡಿತದ ಬಳಿಕ ಪ್ರಯಾಣ ದರ 1-2 ಕಿ. ಮೀ. 10 ರೂ., 2-5 ಕಿ. ಮೀ. 20 ರೂ., 5-12 ಕಿ. ಮೀ. 30 ರೂ., 12 ರಿಂದ 21 ಕಿ. ಮೀ. 40 ರೂ., 21-32 ಕಿ. ಮೀ. ದರ 50 ರೂ. ಆಗಿತ್ತು.
ಈಗ ಈ ದರ ಕಡಿತವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರ್ಕಾರಕ್ಕೆ ಜನರು ಮನವಿಗಳನ್ನು ಸಲ್ಲಿಸುತ್ತಿದ್ದಾರೆ. ಪ್ರಸ್ತುತ ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಬಳಿಕ 0-2 ಕಿ. ಮೀ. ಪ್ರಯಾಣಕ್ಕೆ 10 ರೂ. ಮತ್ತು 30 ಕಿ. ಮೀ. ಪ್ರಯಾಣಕ್ಕೆ 90 ರೂ. ಪಾವತಿ ಮಾಡಬೇಕಿದೆ.
ಪರಿಷ್ಕೃತ ಮೆಟ್ರೋ ದರವನ್ನು ನೋಡಿದ ಜನರು ಮೆಟ್ರೋಗಿಂತ ಬಿಎಂಟಿಸಿ ಬಸ್, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ. ನಮ್ಮ ಮೆಟ್ರೋ ಪ್ರಯಾಣ ದರವನ್ನು ಕಡಿತಗೊಳಿಸಬೇಕು ಎಂದು ಒತ್ತಡ ಹೇರಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಮೆಟ್ರೋ ಪ್ರಯಾಣ ದರದ ಕುರಿತು ಪ್ರತಿಕ್ರಿಯೆ ನೀಡಿದ್ದು, "ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯ ಅಧಿಕಾರ ರಾಜ್ಯ ಸರ್ಕಾರದ ಕೈಲಿದ್ದರೆ ಬಿಎಂಆರ್‌ಸಿಎಲ್‌ನವರು ದರ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಯಾಕೆ ಪತ್ರ ಬರೆಯುತ್ತಿದ್ದರು?. ಇವೆಲ್ಲವೂ ಗೊತ್ತಿದ್ದೂ ಬಿಜೆಪಿ ಸಂಸದರು ಹಾಗೂ ನಾಯಕರು ದರ ಏರಿಕೆಯ ಜವಾಬ್ದಾರಿಯನ್ನು ನಮ್ಮ ಹೆಗಲಿಗಿಟ್ಟು ಜನರ ಆಕ್ರೋಶದ ಲಾಭ ಗಳಿಸಲು ಹೊರಟಿದ್ದಾರೆ' ಎಂದು ಆರೋಪಿಸಿದ್ದಾರೆ.
'ಜನರು ವಿರೋಧ ಪಕ್ಷದ ಸ‍್ಥಾನದಲ್ಲಿ ಕೂರಿಸಿರುವುದರಿಂದ ಬಿಜೆಪಿ ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ. ಒಂದೆಡೆ ಮೆಟ್ರೋ ರೈಲು ನಿರ್ಮಾಣದ ಸಾಧನೆ ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ಡಂಗುರ ಬಾರಿಸುತ್ತಿರುವ ಬಿಜೆಪಿ ನಾಯಕರು ದರ ಪರಿಷ್ಕರಣೆ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಅದರ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವುದು ಆತ್ಮವಂಚಕ ನಡವಳಿಕೆಯಾಗಿದೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
'ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಬೆಂಗಳೂರು ಮೆಟ್ರೋ ರೈಲು ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಸಮ (50:50) ಪಾಲುದಾರಿಕೆ ಇದೆ. ಕೇಂದ್ರ ನಗರ ಮತ್ತು ವಸತಿ ವ್ಯವಹಾರ ಇಲಾಖೆಯ ಕಾರ್ಯದರ್ಶಿಯಾಗಿರುವ ಶ್ರೀನಿವಾಸ ಕಟಿಕಿಥಲ ಅವರು ನಿಗಮದ ಈಗಿನ ಅಧ್ಯಕ್ಷರು. ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರ ಸ‍್ಥಾನದಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications