ಕೇರಳದ ಮಾಜಿ ಸಚಿವ ಶಶೀಂದ್ರನ್ ಹನಿ ಟ್ರ್ಯಾಪಿಗೆ ಬಲಿಯಾದರೆ?
ಮಹಿಳೆಯೊಂದಿಗೆ ಅಶ್ಲೀಲ ಮಾತುಕತೆ ನಡೆಸಿದ ಆರೋಪದ ಮೇಲೆ ರಾಜೀನಾಮೆ ನೀಡಿರುವ ಕೇರಳದ ಮಾಜಿ ಸಚಿವ ಶಶೀಂದ್ರನ್ ಅವರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇದೊಂದು ಹನಿ ಟ್ರ್ಯಾಪ್ ಎಂದು ವರದಿ ಬಂದಿದೆ.
ತಿರುವನಂತಪುರಂ, ಮಾರ್ಚ್ 30: ಮಹಿಳೆಯೊಂದಿಗೆ ಅಶ್ಲೀಲ ಮಾತುಕತೆ ನಡೆಸಿದ ಆರೋಪದ ಮೇಲೆ ರಾಜೀನಾಮೆ ನೀಡಿರುವ ಕೇರಳದ ಮಾಜಿ ಸಚಿವ ಶಶೀಂದ್ರನ್ ಅವರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇದೊಂದು ಹನಿ ಟ್ರ್ಯಾಪ್ ಎಂದು ಫೇಸ್ ಬುಕ್ ನಲ್ಲಿ ವರದಿಗಾರೊಬ್ಬರು ಹಾಕಿಕೊಂಡಿದ್ದಾರೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ.
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಫೋನ್ ಕರೆ ಮಾಡಿ ಅಶ್ಲೀಲ ಮಾತುಗಳನ್ನಾಡಿ ಕಿರುಕುಳ ನೀಡಿದ ಆರೋಪವನ್ನು ಸಚಿವ ಸಸೀಂದ್ರನ್ ಹೊತ್ತಿದ್ದಾರೆ. ಈ ಕುರಿತಂತೆ ಮಂಗಳ ಟಿವಿ, ಆಡಿಯೋ ಕ್ಲಿಪ್ ಪ್ರಸಾರ ಮಾಡಿತ್ತು.

ನಂತರ ಸುದ್ದಿಗೋಷ್ಠಿ ನಡೆಸಿ, ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದರು. ಈಗ ಅದೇ ಚಾನೆಲ್ ನ ಮಾಜಿ ವರದಿಗಾರರೊಬ್ಬರು, ಈ ಇಡೀ ಪ್ರಸಂಗದ ಬಗ್ಗೆ ವಿವರಣೆ ನೀಡಿ, ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದೊಂದು ಹನಿ ಟ್ರ್ಯಾಪ್ ಪ್ರಕರಣ ಎಂದಿದ್ದಾರೆ.
ಮಂಗಳಂ ಸುದ್ದಿವಾಹಿನಿಯ ಮಾಜಿ ಉದ್ಯೋಗಿ ಅಲ್ ನೀಮಾ ಅಶ್ರಫ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಫೇಸ್ ಬುಕ್ ಪೋಸ್ಟ್ ಆಧಾರವಾಗಿಟ್ಟುಕೊಂಡು ಸತ್ಯಾಸತ್ಯತೆ ಬಯಲಿಗೆಳೆಯುವಂತೆ ಪತ್ರಕರ್ತೆಯರ ಸಮೂಹವೊಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಹನಿ ಟ್ರ್ಯಾಪ್?: ಚಾನೆಲ್ ನ ಬಾಸ್ ಹಾಗೂ ಐವರು ವರದಿಗಾರರ ಗುಂಪು ಈ ಟ್ರ್ಯಾಪ್ ಸಂಚು ರೂಪಿಸಿದ್ದು, ಸಚಿವ ಶಶೀಂದ್ರನ್ ಅಲ್ಲದೆ ಇನ್ನೂ ಅನೇಕ ವಿವಿಐಪಿಗಳು ಇವರ ಟಾರ್ಗೆಟ್ ಪಟ್ಟಿಯಲ್ಲಿದ್ದಾರೆ ಎಂದು ನೀಮಾ ಹೇಳಿದ್ದಾರೆ. ಸುಮಾರು 6 ತಿಂಗಳಿನಿಂದ ಈ ಟ್ರ್ಯಾಪ್ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಚಾನೆಲ್ ನ ಮೌಲ್ಯರಹಿತ ವರದಿಗಾರಿಕೆಗೆ ಬೇಸತ್ತು ರಾಜೀನಾಮೆ ಸಲ್ಲಿಸಿ, ಹೊರಬಂದೆ ಎಂದು ನೀಮಾ ಹೇಳಿದ್ದಾರೆ.












Click it and Unblock the Notifications