• search

ಕೇರಳದ ನೈಸರ್ಗಿಕ ವಿಕೋಪಕ್ಕೆ ಅನರ್ಥ ಸಂಬಂಧ ಕಲ್ಪಿಸುತ್ತಿರುವ ವಿಘ್ನ ಸಂತೋಷಿಗಳು!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕೆಲವೊಂದು ವರ್ಗವಿದೆ, ಸಮಯ ಸಂದರ್ಭ ನೋಡದೇ ತಾನು ನಡೆದಿದ್ದೇ ದಾರಿಯೆಂದು ಪ್ರಪಂಚಕ್ಕೆ ಬೋಧನೆ ಮಾಡಲು ಶುರು ಮಾಡುತ್ತಾರೆ. ಇಂತಹ ವರ್ಗದವರಿಗೆ ಒಂದಷ್ಟು ಜನ ಹಿಂಬಾಲಕರೂ ಇರುತ್ತಾರೆ. ಹಾಗೆಯೇ, ಇವರು ಮಾಡುವ ಧರ್ಮಬೋಧನೆಗೆ ಅಹುದು..ಅಹದು ಎಂದು ಅವರು ತಲೆಯಾಡಿಸುತ್ತಾರೆ.. ಇದೇ ತಮಗೆ ಸಿಕ್ಕ ಸರ್ಟಿಫಿಕೇಟ್ ಎಂದು ಮತ್ತಷ್ಟು ಸಮಾಜದ ಸ್ವಾಸ್ಥ್ಯ ಕದಡುವ ಕೆಲಸವನ್ನು ಮುಂದುವರಿಸುತ್ತಾರೆ.

  ಇಂತವರು ಇಂತದ್ದೇ ಧರ್ಮಕ್ಕೆ ಎಂದು ಸೀಮಿತರಾದವರಲ್ಲ, ಎಲ್ಲಾ ಜಾತಿ, ಕೋಮಿನಲ್ಲೂ ಈ ಮನಸ್ಥಿತಿಯವರು ಸಿಗುತ್ತಾರೆ. ಪರಿಸ್ಥಿತಿ ಏನಾದರೂ ಆಗಲಿ, ಎಷ್ಟೇ ಜನ ಸಾವನ್ನಪ್ಪಿರಲಿ, ಅತಂತ್ರರಾಗಿರಲಿ, ಒಂದಕ್ಕೊಂದು ಸಂಬಂಧ ತಳುಕುಹಾಕಿ ಅದನ್ನು ಚರ್ಚೆಯ ವಿಷಯವನ್ನಾಗಿ ಮಾಡುತ್ತಾರೆ. ಇದರಿಂದಾಗಿ ಒಗ್ಗಟ್ಟಾಗಿ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವವರ ನಡುವಿನ ಮನಸ್ಸು ಒಡೆದ ಹಾಲಿನಂತಾಗುತ್ತದೆ.

  ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿ

  ಕೇರಳ ಮತ್ತು ಕೊಡಗಿನ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಎಂತಾ ಕ್ರೂರಿಗಳ ಮನಸ್ಸು ಚುರ್ ಅನ್ನದೇ ಇರದು. ಸುಮಾರು 350ಕ್ಕೂ ಹೆಚ್ಚು ಜನ ಕೇರಳದಲ್ಲಿ ನೈಸರ್ಗಿಕ ವಿಕೋಪದಿಂದ ಸಾವನ್ನಪ್ಪಿದ್ದಾರೆ. ಒಂದೊಂದು ಕುಟುಂಬದ್ದು ಒಂದೊಂದು ನೋವಿನ ಕಥೆ, ಮನೆಮಠ ಕಳೆದುಕೊಂಡವರು ಬದುಕು ಕಟ್ಟಿಕೊಳ್ಳಲು, ಇನ್ನೆಷ್ಟು ವರುಷಗಳು ಬೇಕಾಗುತ್ತೋ ಎನ್ನುವ ನಿಟ್ಟುಸಿರು ನಡುವೆ, ಕೇರಳದ ಈ ಸಂಕಷ್ಟಕ್ಕೆ ಧರ್ಮದ ಲೇಪನ ಹಚ್ಚುವ ಕೆಲಸ ಶುರುವಾಗಿದೆ.

  Kerala flood: Unwanted news and debates spreading in Social Media

  ಸೈನಿಕರು, ಮೀನುಗಾರರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಪ್ರವಾಹ ಪೀಡಿತರು ಯಾವ ಜಾತಿಯವರೆಂದು ನೋಡದೇ, ಸಂತ್ರಸ್ತರ ಕಷ್ಟಕ್ಕೆ ಧ್ವನಿಯಾಗುತ್ತಿದ್ದಾರೆ. ನಮ್ಮ ಪಕ್ಕದ ಊರಿನ ಕುಟುಂಬ ತೊಂದರೆಯಲ್ಲಿದೆ ಎಂದು ಜನ ಅಭೂತಪೂರ್ವವಾಗಿ ಸ್ಪಂದಿಸುತ್ತಿದ್ದಾರೆ. ಜಾತಿ, ಹಣದ ವಿಚಾರದಲ್ಲಿ ಎಷ್ಟೇ ದರ್ಪ ತೋರಿದರೂ, ಕೊನೆಗೆ ಮೇಲುಗೈ ನನ್ನದೇ ಎನ್ನುವುದನ್ನು ಪ್ರಕೃತಿ ಸಾರಿಸಾರಿ ರುಜುವಾತು ಪಡಿಸುತ್ತಿದೆ.

  ಕೇರಳದ ಇಂದಿನ ಪ್ರಳಯ ಪ್ರವಾಹದ ದುರ್ಘಟನೆಯ ಸುತ್ತ ಎರಡು ಘಟನೆಯನ್ನು ತುಳುಕುಹಾಕಲಾಗುತ್ತಿದೆ. ಈ ಎರಡು ಘಟನೆಗಳು, ಚರ್ಚೆಗೆ ಅರ್ಹವಾದ ವಿಚಾರಗಳಾದರೂ, ಆ ವಿಚಾರ ಎತ್ತುತ್ತಿರುವವರು ಯಾವ ವಿಷಯವನ್ನು ಯಾವಾಗ ಪ್ರಸ್ತಾವಿಸಬೇಕು ಎನ್ನುವುದರ ಕನಿಷ್ಟ ಅರಿವಿರದ ಅಪ್ರಬುದ್ದರಂತೆ ಕಾಣುತ್ತಾರೆ.

  ನವಜಾತಶಿಶು ನೋಡಿ ಸಂತಸಪಟ್ಟ ನೌಕಾಪಡೆ ಅಧಿಕಾರಿಗಳು

  ಕೇರಳದ ಪ್ರವಾಹದ ವಿಚಾರವನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದವರು ಸೈನಿಕರನ್ನೂ ಬಿಡದಂತೆ ಟ್ರೋಲ್ ಮಾಡುತ್ತಿರುವುದು ತಲೆತಗ್ಗಿಸುವಂತಹ ವಿಚಾರ. ಮುಸ್ಲಿಂ ಮಹಿಳೆಯೊಬ್ಬರು ಮಂಡಿಯೂರಿ ಸಹಾಯಕ್ಕೆ ನಿಂತಿದ್ದ ಯೋಧನ ಬೆನ್ನೇರಿ ದಡದಾಟಿದ ಫೋಟೋಗಳನ್ನು ಹಾಕಿ, ಈಗ ನಿಮಗೆ ಯೋಧರ ಸಹಾಯ ಬೇಕಾ ಎಂದು ವ್ಯಂಗ್ಯವಾಡುವ ಪೋಸ್ಟುಗಳು ಸಾಮಾಜಿಕ ತಾಣದಲ್ಲಿ ಬಂದು ಬೀಳುತ್ತಿವೆ.

  Kerala flood: Unwanted news and debates spreading in Social Media

  ಶಬರಿಮಲೆಯಲ್ಲಿ ಮಹಿಳೆಯರಿಗೆ ಅನುಮತಿ ನೀಡುವ ವಿಚಾರದಲ್ಲಿ ನಡೆಯುತ್ತಿರುವ ವಿಚಾರವನ್ನು ಇಟ್ಟುಕೊಂಡು, ಕೇರಳದ ಇಂದಿನ ಸ್ಥಿತಿಗೆ ಶಬರಿಮಲೆ ಸ್ವಾಮಿ ಅಯ್ಯಪ್ಪನ ಶಾಪವೇ ಕಾರಣ ಎಂದು ಅನಗತ್ಯ ಚರ್ಚೆ ನಡೆಯುತ್ತಿದೆ. ನೆಟ್ಟಿಗರ ಮನಸ್ಥಿತಿಯನ್ನು ನೋಡಿ, ಅಯ್ಯಪ್ಪನೇ ಮರುಗುತ್ತಿರಬಹುದೇನೋ? ಕೇರಳದ ಪುರಾಣಪ್ರಸಿದ್ದ ಶಬರಿಮಲೆ ದೇವಾಸ್ಥಾನಕ್ಕೆ ಮಹಿಳೆಯರು (ಖುತುಮತಿ ಆದ ಮತ್ತು ನಿಲ್ಲುವ ತನಕ) ಪ್ರವೇಶ ನಿಷಿದ್ದ ಎನ್ನುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ.

  ಶಬರಿಮಲೆ ದೇವಸ್ಥಾನ: ಮಹಿಳೆಯರಿಗೆ ಪ್ರವೇಶ ನೀಡಲು ಕೇರಳ ಸರ್ಕಾರ ಒಲವು

  ಶಬರಿಮಲೆ ದೇವಸ್ಥಾನದ ಜೊತೆಗೆ, ಗೋವನ್ನು ಕೇರಳದ ಇಂದಿನ ಪರಿಸ್ಥಿತಿಗೆ ಎಳೆದು ತರಲಾಗುತ್ತಿದೆ. ಬೀಫ್ ಬ್ಯಾನ್ ವಿಚಾರದಲ್ಲಿ, ದನವನ್ನು ಕಣ್ಣೂರಿನ ನಡುರಸ್ತೆಯಲ್ಲೇ ಕಡಿದು ರಕ್ತ ಸಮೇತ ಅದರ ಮಾಂಸವನ್ನು ತಿಂದು ಯುವ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಕೇರಳ ಕಂಡುಕೇಳರಿಯ ಇಂದಿನ ದುರಂತಕ್ಕೆ ಗೋತಾಯಿಯ ಶಾಪವೇ ಕಾರಣ ಎನ್ನುವ ಇನ್ನೊಂದು ಆಯಾಮದ ಬಿಸಿಬಿಸಿ ಚರ್ಚೆಯೂ ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ.

  ಗೋವನ್ನು ದೇವರೆಂದು ಪೂಜಿಸುವ ಮತ್ತು ಗೋವಿನಲ್ಲಿ ನವಕೋಟಿ ದೇವರಿದ್ದಾರೆಂದು ನಂಬುವ ಲಕ್ಷಾಂತರ ಜನರ ಧಾರ್ಮಿಕ ಭಾವನೆಗೆ ಆ ಘಟನೆಯಿಂದ ಧಕ್ಕೆಯಾಗಿದೆ ಎನ್ನುವುದು ಒಪ್ಪಿಕೊಳ್ಳುವ ವಿಚಾರ, ಆದರೆ ಸಮಯ ಸಂದರ್ಭ ಎನ್ನುವುದರ ಅರಿವು ಇರಬೇಕಲ್ಲಾ..

  Kerala flood: Unwanted news and debates spreading in Social Media

  ಹಾಲೀ ಕರ್ನಾಟಕದ ಸಚಿವೆ ಜಯಮಾಲ, ನಾನು ಅಯ್ಯಪ್ಪನನ್ನು ಮುಟ್ಟಿ ಪ್ರಾರ್ಥಿಸಿದ್ದೆ ಎಂದು ಬಹಿರಂಗ ಹೇಳಿಕೆ ನೀಡಿದ ನಂತರ, ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶದ ವಿಚಾರ ಮುನ್ನಲೆಗೆ ಬಂತು. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿರುವ ನಾವು, ಮಹಿಳೆಯರಿಗೆ ಯಾಕೆ ದೇವಾಲಾಯ ಪ್ರವೇಶಿಸಲು ಅವಕಾಶ ಹಿಂದಿನಿಂದಲೂ ಇರಲಿಲ್ಲ ಎನ್ನುವುದನ್ನು ಧಾರ್ಮಿಕ ಆಯಾಮದಲ್ಲಿ ಕಂಡುಕೊಳ್ಳಲು, ಚರ್ಚೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಅವಕಾಶ ನೀಡಬೇಕಿತ್ತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಇದೂ ಒಪ್ಪಿಕೊಳ್ಳುವ ವಿಚಾರವೇ, ಆದರೆ?

  ನೊಂದವರು ಶಪಿಸಬಾರದು ಎಂದೇನಿಲ್ಲ..ಆದರೆ, ಮಾನವೀಯತೆ ತೋರಬೇಕಾದ ಇಂತಹ ಸಂದರ್ಭದಲ್ಲಿ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ಅಶಾಂತಿ ಹುಟ್ಟುಹಾಕುವುದು ಎಷ್ಟು ಸರಿ ಎನ್ನುವುದು ಇಲ್ಲಿ ಪ್ರಶ್ನೆ. ಕೇರಳದ ಇಂದಿನ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು, ಅದಕ್ಕೆ ನಮ್ಮಿಂದಾಗುವ ಸಹಾಯವೇನು ಎನ್ನುವುದನ್ನು ಅರಿಯುವ ಕೆಲಸ ಪ್ರಜ್ಞಾವಂತ ನಾಗರೀಕರಿಂದ ಆಗಬೇಕಿದೆ. ಅದಾಗದಿದ್ದರೆ, ಸ್ವಾಸ್ಥ್ಯ ಕದಡುವ ಇಂತಹ ವಿಘ್ನ ಸಂತೋಷಿಗಳನ್ನು ಅಯ್ಯಪ್ಪನೇ ಕಾಪಾಡಬೇಕಾದೀತು..

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Kerala flood: Unwanted news and debates spreading in Social Media. People are spreading news that because of cow slaughter and allowing women into Sabarimala Ayyappa Swamy temple, Kerala is facing such a massive flood.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more