'ಸುಮ್ನೆ ಮುಚ್ಕೊಂಡ್ ಇರಿ, ಇಲ್ಲವೇ ಬಿಜೆಪಿ ಸೇರಿ': ತಮಿಳುನಾಡು ರಾಜ್ಯಪಾಲ ರವಿಗೆ ಡಿಎಂಕೆ ಅವಾಜ್
ಚೆನ್ನೈ, ಅಕ್ಟೋಬರ್ 25: ದ್ರಾವಿಡ ಸಿದ್ಧಾಂತದ ಕುರಿತು ಟೀಕೆ ಮಾಡಿದ್ದಕ್ಕಾಗಿ ರಾಜ್ಯಪಾಲ ಆರ್‌ಎನ್ ರವಿ ಅವರನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸಂಯಮದಿಂದ ವರ್ತಿಸಿ, ಇಲ್ಲವೇ ಹುದ್ದೆ ತ್ಯಜಿಸಿ ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಸೇರಿಕೊಳ್ಳಿ ಎಂದು ಡಿಕೆಎಂ ಅವಾಜ್ ಹಾಕಿದೆ.
ಭಾರತದ ಹಲವಾರ ಸ್ವಾತಂತ್ರ್ಯ ಹೋರಾಟಗಾರರನ್ನು ಜಾತಿ ನಾಯಕರನ್ನಾಗಿ ಬಿಂಬಿಸಲಾಗಿದೆ. ಇದು ಬ್ರಿಟಿಷರು ಹುಟ್ಟುಹಾಕಿರುವ ದ್ರಾವಿಡ ಸಿದ್ದಾಂತದ ಷಡ್ಯಂತ್ರವಾಗಿದೆ ಎಂದು ರವಿ ಹೇಳಿಕೆ ನೀಡಿದ್ದಾರೆ.

ಈ ಕುರಿತು ಖಂಡನಾ ಹೇಳಿಕೆ ನೀಡಿರುವ ಡಿಎಂಕೆ, 'ರಾಜಭವನ, ನಿಮ್ಮ ಬಾಯಿ ಮುಚ್ಚಿಕೊಳ್ಳಿ' ಎಂದು ಪ್ರತಿಕ್ರಿಯಿಸಿದೆ.
ಈ ವಿಚಾರವಾಗಿ ಮಾತನಾಡಿರುವ ಡಿಎಂಕೆ ನಾಯಕ ಟಿಆರ್ ಬಾಲು, 'ರಾಜ್ಯಪಾಲರು ಬಿಜೆಪಿಯ ತುತ್ತೂರಿಯಾಗಿ ಮಾರ್ಪಟ್ಟಿದ್ದು, ದೇಶಾದ್ಯಂತ ದ್ರಾವಿಡ ಮಾದರಿಯ ಬಗ್ಗೆ ಅಸೂಯೆಯನ್ನು ಹುಟ್ಟುಹಾಕಲು ಪ್ರಯತ್ನ ನಡೆಸಿದ್ದಾರೆ' ಎಂದು ಆರೋಪಿಸಿದ್ದಾರೆ.
'ತಮಿಳುನಾಡಿನ ಜನರ ತೆರಿಗೆ ಹಣವನ್ನು ರವಿ ಅವರು ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಎಐಎಡಿಎಂಕೆ ಸಚಿವರ ಭ್ರಷ್ಟಾಚಾರ ತನಿಖೆಗೆ ಅವರು ಒಪ್ಪಿಗೆ ನೀಡುತ್ತಿಲ್ಲ. ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಂಬಂಧಿಸಿದ ಕಡತಗಳನ್ನು ಅವರು ಅನುಮೋದಿಸುತ್ತಿಲ್ಲ. ಸುಮ್ಮನೇ ಅಲೆದಾಡುವ ಮೂಲಕ ಈ ರಾಜ್ಯದ ಜನರಿಗೆ ದ್ರೋಹ ಎಸಗುತ್ತಿದ್ದಾರೆ' ಎಂದು ಬಾಲು ಹೇಳಿದ್ದಾರೆ.

ರವಿ ಅವರು ಅವರು ತಮ್ಮ ಹುದ್ದೆಯನ್ನು ತೊರೆದು ರಾಜಕಾರಣಿಯಾಗಲಿ. ಬಿಜೆಪಿ ಅಥವಾ ಆರ್‌ಎಸ್‌ಎಸ್‌ನ ನಾಯಕರಾಗಲಿ ಎಂದು ಬಾಲು ತಿಳಿಸಿದ್ದಾರೆ.
ತಮಿಳುನಾಡು ಸರ್ಕಾರ ಮತ್ತು ಜನರ ಭಾವನೆಗಳ ವಿರುದ್ಧ ರಾಜ್ಯಪಾಲರ ನಿರಂತರ ಭಾಷಣಗಳು ಸಂವಿಧಾನಕ್ಕೆ ಮಾಡಿದ ದ್ರೋಹವಾಗಿದೆ ಎಂದು ಅವರು ಹೇಳಿದ್ದಾರೆ.
'ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಬ್ರಿಟಿಷರಿಗೆ ಕ್ಷಮೆ ಕೋರಿ ಬರೆದವರು ಯಾರು ( ಸಾವರ್ಕರ್ ಅವರನ್ನು ಉದ್ದೇಶಿಸಿ ) ಎಂಬುದು ಗೊತ್ತಾಗುತ್ತದೆ. ಕುಡಿಯರಸು ಪತ್ರಿಕೆಯಲ್ಲಿ ಸಂಪಾದಕೀಯ ಬರೆದು ಜೈಲಿಗೆ ಹೋದವರು ಯಾರು ( ಪೆರಿಯಾರ್ ರಾಮಸ್ವಾಮಿ ಅವರನ್ನು ಉದ್ದೇಶಿಸಿ ) ಎಂದು ತಿಳಿಯುತ್ತದೆ' ಎಂಬುದಾಗಿ ಅವರು ತಿಳಿಸಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಹ ರಾಜ್ಯಪಾಲ ರವಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರಪಿತ ಗಾಂಧಿ ಅವರ ಕೊನೆಯ ದಿನಗಳು ದೇಶಭಕ್ತರ ಕಥೆಗಳನ್ನು ಸಾರಿ ಹೇಳುತ್ತವೆ ಎಂದು ತಿಳಿಸಿದ್ದಾರೆ.
ಡಿಎಂಕೆ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರ ಪರಂಪರೆಗೆ ದಕ್ಕೆ ತಂದಿದೆ ಎಂದು ರಾಜ್ಯಪಾಲ ರವಿ ಆರೋಪಿಸಿದ್ದಾರೆ. ನಿರ್ದಿಷ್ಟವಾಗಿ ಮಾರುತು ಸಹೋದರರು ಮತ್ತು ಮುತ್ತುರಾಮಲಿಂಗ ತೇವರ್ ಅವರ ಉದಾಹರಣೆಯನ್ನು ನೀಡಿದ್ದಾರೆ. ಡಿಎಂಕೆ ಸ್ವಾತಂತ್ರ್ಯ ಹೋರಾಟಗಾರರನ್ನು ಜಾತಿಯೊಂದರ ನಾಯಕರನ್ನಾಗಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
'ತಮಿಳುನಾಡು ಪುಣ್ಯಭೂಮಿ, ಇಲ್ಲಿ ಆರ್ಯರು ಅಥವಾ ದ್ರಾವಿಡರು ಇಲ್ಲ. ಸ್ವಾತಂತ್ರ್ಯ ದಿನವನ್ನು ಕರಾಳ ದಿನ ಎಂದವರು ಇಲ್ಲಿದ್ದಾರೆ. ತಮಿಳುನಾಡು ಸರ್ಕಾರ ಸ್ವಾತಂತ್ರ್ಯ ಹೋರಾಟದ ಹುತಾತ್ಮರನ್ನು ಜನರ ನೆನಪಿನಿಂದ ಅಳಿಸಿಹಾಕಲು ಪ್ರಯತ್ನಿಸುತ್ತಿದೆ' ಎಂದು ರವಿ ಹೇಳಿದ್ದಾರೆ.
ಬ್ರಿಟಿಷರು ಹುಟ್ಟುಹಾಕಿರುವ ದ್ರಾವಿಡ ನಿರೂಪಣೆಯನ್ನು ಡಿಎಂಕೆ ಮುಂದುವರಿಸಿಕೊಂಡು ಬಂದಿದೆ. ರಾಜಕೀಯ ಪಿತೂರಿಯಿಂದಾಗಿ ತಮಿಳುನಾಡಿನ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರನ್ನು ಜಾತಿ ನಾಯಕರನ್ನಾಗಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications