ದೆಹಲಿ ಮದ್ಯ ನೀತಿ ಪ್ರಕರಣ: ಕೆಸಿಆರ್ ಪುತ್ರಿ ಕೆ ಕವಿತಾ ಬಂಧನ
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಶುಕ್ರವಾರ ಹೈದರಾಬಾದ್ ನಿವಾಸದಲ್ಲಿ ಗಂಟೆಗಳ ದಾಳಿಯ ನಂತರ ದೆಹಲಿ ಮದ್ಯ ನೀತಿ ತನಿಖೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿದೆ.
ಕವಿತಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುವುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇಡಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಅವರ ಹೈದರಾಬಾದ್ ನಿವಾಸದಲ್ಲಿ ಬಿಆರ್‌ಎಸ್ ಬೆಂಬಲಿಗರ ಪ್ರತಿಭಟನೆ ನಡುವೆಯೂ ಶೋಧ ನಡೆಸಿದ ಗಂಟೆಗಳ ನಂತರ ಬಂಧಿಸಲಾಗಿದೆ.

ಕವಿತಾ ಅವರನ್ನು ಇಡಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾದ ನಂತರ ಅವರ ಸಹೋದರ ಮತ್ತು ತೆಲಂಗಾಣ ಮಾಜಿ ಸಚಿವ ಕೆಟಿ ರಾಮರಾವ್ ಅವರು ಕವಿತಾ ಅವರ ನಿವಾಸಕ್ಕೆ ಆಗಮಿಸಿದರು.
ದೆಹಲಿಯಲ್ಲಿ ವಿಚಾರಣೆ
ಆಮ್ ಆದ್ಮಿ ಪಕ್ಷದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ನಂತರ ಇದು ಮೂರನೇ ಪ್ರಮುಖ ಬಂಧನವಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೂ ತನಿಖೆ ನಡೆಸಲಾಗುತ್ತಿದ್ದು, ಇಡಿಯಿಂದ ಇತ್ತೀಚಿನ ಎಲ್ಲಾ ಸಮನ್ಸ್‌ಗಳನ್ನು ಕೇಜ್ರಿವಾಲ್ ನಿರ್ಲಕ್ಷಿಸಿದ್ದಾರೆ.
"ಕವಿತಾ ಅವರನ್ನು ರಾತ್ರಿ 8.45 ರ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಮನೆಯಲ್ಲಿ ನಮಗೆ ತಿಳಿಸಿದ್ದರು. ಅವರು ಇಲ್ಲಿಗೆ ಬರುವ ಮುನ್ನವೇ ಆಕೆಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಕವಿತಾಗೆ ವಿಮಾನ ಟಿಕೆಟ್ ಅನ್ನು ಸಹ ಬುಕ್ ಮಾಡಿದ್ದಾರೆ ಎನಿಸುತ್ತದೆ." ಎಂದು ಬಿಆರ್‌ಎಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಪ್ರಶಾಂತ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇದೇ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಆರೋಪಗಳ ಪ್ರಕಾರ, ದೆಹಲಿ ಮದ್ಯ ನೀತಿ ಹಗರಣದಲ್ಲಿ 'ಸೌತ್ ಕಾರ್ಟೆಲ್' ಭಾಗಿಯಾಗಿತ್ತು, ಇದರಲ್ಲಿ ಕೆ ಕವಿತಾ ಪ್ರಮುಖ ಪಾತ್ರ ವಹಿಸಿದ್ದರು. ಹೈದರಾಬಾದ್ ಉದ್ಯಮಿ ಶರತ್ ರೆಡ್ಡಿ, ವೈಎಸ್‌ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ, ಅವರ ಮಗ ರಾಘವ್ ಮಾಗುಂಟ ರೆಡ್ಡಿ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಇದೆ.
ಕವಿತಾ ಅವರನ್ನು ವಿಚಾರಣೆಗಾಗಿ ಹಲವು ಬಾರಿ ದೆಹಲಿಗೆ ಕರೆಸಲಾಗಿತ್ತು ಮತ್ತು ಅವರು ಕನಿಷ್ಠ ಎರಡು ಇತ್ತೀಚಿನ ಸಮನ್ಸ್‌ಗಳ ಬಳಿಕ ವಿಚಾರಣೆಗೆ ಹಾಜರಾಗಿರಲಿಲ್ಲ. ಕಳೆದ ವರ್ಷ ಈ ಪ್ರಕರಣದಲ್ಲಿ ಅವರನ್ನು ಮೂರು ಬಾರಿ ವಿಚಾರಣೆಗೊಳಪಡಿಸಲಾಗಿತ್ತು ಮತ್ತು ಕೇಂದ್ರ ಸಂಸ್ಥೆಯು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
"ಕೆ ಕವಿತಾ ಮತ್ತು ದೆಹಲಿಯ ಮುಖ್ಯಮಂತ್ರಿ (ಅರವಿಂದ್ ಕೇಜ್ರಿವಾಲ್) ಮತ್ತು (ಮಾಜಿ) ದೆಹಲಿಯ ಉಪ ಮುಖ್ಯಮಂತ್ರಿ (ಮನೀಷ್ ಸಿಸೋಡಿಯಾ) ನಡುವೆ ರಾಜಕೀಯ ಪರಿಚಯ ಇತ್ತು. ಆ ಪ್ರಕ್ರಿಯೆಯಲ್ಲಿ, ಕೆ ಕವಿತಾ ಅವರು 2021 ರ ಮಾರ್ಚ್ 19-20 ರಂದು ವಿಜಯ್ ನಾಯರ್ ಅವರನ್ನು ಭೇಟಿ ಮಾಡಿದ್ದಾರೆ," ಎಂದು ಬುಚ್ಚಿಬಾಬು ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.












Click it and Unblock the Notifications