ಮೋಡಿ ಮಾಡಿದ್ದ ನೃತ್ಯಗಾರ್ತಿ ಬಾರದ ಲೋಕಕ್ಕೆ
ಬೆಂಗಳೂರು, ಸೆ. 2 : ಅದ್ವೀತಿಯ ನೃತ್ಯಗಾರ್ತಿ, ಕಲಾಸಾಧಕಿ ಮಾಯಾರಾವ್(86) ಬಾರದ ಲೋಕಕ್ಕೆ ತೆರಳಿದ್ದಾರೆ. ಉತ್ತರ-ದಕ್ಷಿಣದ ಮಧ್ಯೆ ಕಥಕ್ ನೃತ್ಯದ ಕೊಂಡಿ ಬೆಸೆದಿದ್ದ ಮಾಯಾರಾವ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಭಾನುವಾರ ರಾತ್ರಿ ನಿಧನರಾದರು. ಪುತ್ರಿ ಹೆಸರಾಂತ ನೃತ್ಯಗಾರ್ತಿ ಮಧು ನಟರಾಜ್ ಸೇರಿದಂತೆ ಅಪಾರ ಶಿಷ್ಯವೃಂದವಿದೆ.
ಭಾನುವಾರ ಮಧ್ಯರಾತ್ರಿ ಮಾಯಾರಾವ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹೃದಯಾಘಾತದಿಂದ ನೃತ್ಯಗಾರ್ತಿ ತಮ್ಮ ಜೀವನದ ಕುಣಿತ ಮುಗಿಸಿದ್ದಾರೆ. ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿತು.ಬಾಲ್ಯದ 'ಮಾಯಾ' ಜೀವನ
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮೇ 2, 1928ರಲ್ಲಿ ಸಂಜೀವ್ ರಾವ್ ಮತ್ತು ಸುಭದ್ರಾ ಬಾಯಿ ಅವರ ಮಗಳಾಗಿ ಜನಸಿದ ಮಾಯಾ ರಾವ್ ಕಲಾ ಪಯಣ ಆರಂಭವಾಗಿದ್ದು 6ನೇ ವಯಸ್ಸಿಗೆ. ಹಿಂದೂಸ್ತಾನಿ ಸಂಗೀತದ ಜತೆಜತೆಗೆ ವೀಣೆ ಅಭ್ಯಾಸ ಮಾಡಿದರು. ಆದರೆ ಕಲಿಕೆ ಅಲ್ಲಿಗೆ ನಿಲ್ಲಲಿಲ್ಲ 12ನೇ ವಯಸ್ಸಿಗೆ ನೃತ್ಯ ಕಲಿಕೆ ಶುರುವಿಟ್ಟುಕೊಂಡರು. ಜೈಪುರ ಘರಾನಾದ ಸೋಹನ್‌ಲಾಲ್ ಅವರಿಂದ 1942ರಲ್ಲಿ ಕಥಕ್ ಕಲಿಯಲು ಆರಂಭಿಸಿದರು. ಇದು ಅವರ ಜೀವನದ ಪಥವನ್ನೇ ಬದಲಾಯಿಸಿತು.
ತಂದೆಯಿಂದ ಪ್ರೇರಣೆ
ಸಾಂಪ್ರದಾಯಿಕ ಕುಟುಂಬದಲ್ಲಿ ಯಾರಿಗೂ ನೃತ್ಯದ ಬಗ್ಗೆ ಆಸಕ್ತಿ ಇರಲಿಲ್ಲ. ಸಂಗೀತವನ್ನು ಆರಾಧಿಸುತ್ತಿದ್ದ ಕುಟುಂಬಕ್ಕೆ ನೃತ್ಯ ಪರಂಪರೆಯಾದ ಘಟನೆ ಕುತೂಹಲಕಾರಿಯಾಗಿದೆ. ಒಮ್ಮೆ ಮಾಯಾ ರಾವ್ ತಂದೆ ಸಂಜೀವ್ ರಾವ್ ಖ್ಯಾತ ನೃತ್ಯಪಟು ಉದಯ್ ಶಂಕರ್ ಅವರ ಪ್ರದರ್ಶನವನ್ನು ವೀಕ್ಷಿಸಿದ್ದರು, ಇದರಿಂದ ಪ್ರಭಾವಿತರಾದ ಸಂಜೀವ್ ರಾವ್ ತಮ್ಮ ಮಗಳಿಗೂ ನೃತ್ಯ ಕಲಿಕೆ ಆರಂಭಿಸಿದರು.
ಬೆಂಗಳೂರಿಗೆ ಬಂದು ನೆಲೆಸಿದರು
ನೃತ್ಯ ಕಲಿಕೆ ಬೆನ್ನು ಹತ್ತಿದ್ದ ಮಾಯಾರಾವ್ ಜೈಪುರ, ರಷ್ಯಾ, ದೆಹಲಿ ಹೀಗೆ ದೇಶ ಮತ್ತು ವಿದೇಶಗಳಲ್ಲಿ ಸುತ್ತಾಟ ನಡೆಸಿದರು. ಆದರೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆಹ್ವಾನದ ಮೇರೆಗೆ ಮತ್ತೆ ಬೆಂಗಳೂರಿಗೆ ಬಂದು ನೆಲೆಸಿದರು.
ಕೋರಿಯೋಗ್ರಫಿಗೆ ಹೊಸ ಭಾಷ್ಯ ಬರೆದ ಸಾಧಕಿ
ಶ್ರೀಲಂಕಾಕ್ಕೆ ತೆರಳಿ ಅಲ್ಲಿ ಕ್ಯಾಂಡಿಯನ್ ನೃತ್ಯ ಅಭ್ಯಾಸ ಮಾಡಿದರು. 1955ರಲ್ಲಿ ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ಗುರು ಶಂಭುಮಹಾರಾಜ್ ಅವರಲ್ಲಿ
ಮಲ್ಲೇಶ್ವರಂನಲ್ಲಿ ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಮತ್ತು ಕೊರಿಯೋಗ್ರಫಿ ಆರಂಭಿಸಿದರು. ಇವರ ಆಸಕ್ತಿ ಪರಿಗಣಿಸಿದ ಸರ್ಕಾರ ಶಿಷ್ಯವೇತನ ನೀಡಿ ರಷ್ಯಾದಲ್ಲಿ ಒಂದು ವರ್ಷ ಕಲಿಕೆಗೆ ಅವಕಾಶ ಮಾಡಿಕೊಟ್ಟಿತು. ನಂತರ ದೇಶ-ವಿದೇಶಗಳಲ್ಲಿ ಹೊಸ ರೀತಿಯ, ಪ್ರಯೋಗಾತ್ಮಕ ನೃತ್ಯ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿದರು.
ಸಂದ ಪ್ರಶಸ್ತಿಗಳು
ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ(1998), ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿ ಪ್ರಶಸ್ತಿ(1968), ಕರ್ನಾಟಕ ಸರ್ಕಾರದಿಂದ ಶಾಂತಲಾ ಪ್ರಶಸ್ತಿ(2000) ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಮಾಯಾರಾವ್ ಅವರಿಗೆ ಸಂದಿದೆ.
ಗಮನ ಸೆಳೆದ ವಿಶಿಷ್ಟ ಪ್ರಯೋಗಗಳು
ತುಳಸಿರಾಂ ಕೃಷ್ಣಲೀಲಾ, ವೆಂಕಟೇಶ್ವರ ವಿಲಾಸಂ, ಶಾಂತಲಾ, ಕುವೆಂಪುರವರ ಶ್ರೀ ರಾಮಾಯಣ ದರ್ಶನಂ, ಬಸವೇಶ್ವವರ ವೈಭವದಂಥ ಅನೇಕ ವಿನೂತನ ಪ್ರಯತ್ನಗಳು, ಪ್ರದರ್ಶನಗಳನ್ನು ಮಾಯಾ ರಾವ್ ನಡೆಸಿಕೊಟ್ಟಿದ್ದು ನೃತ್ಯ ಪರಂಪರೆ ಪುಟದಲ್ಲಿ ದಾಖಲಾಗಿದೆ.













Click it and Unblock the Notifications