
ಹಿಜಾಬ್ ನಿಷೇಧ ಪ್ರಕರಣ; ನ್ಯೂಸ್ 18 ಇಂಡಿಯಾಗೆ 50,000 ರೂ.ದಂಡ
ಬೆಂಗಳೂರು, ಅಕ್ಟೋಬರ್ 27: ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣದಲ್ಲಿ ವಿದ್ಯಾರ್ಥಿಗಳು ಮತ್ತು ಹಿಜಾಬ್ ಪರ ಮಾತನಾಡುವವರನ್ನು ಉಗ್ರವಾದಿಗಳ ಜೊತೆ ಹೋಲಿಕೆ ಮಾಡಿದ್ದ ನ್ಯೂಸ್ 18 ಇಂಡಿಯಾಗೆ ದಂಡ ವಿಧಿಸಲಾಗಿದೆ.
ನ್ಯೂಸ್ 18 ಇಂಡಿಯಾ ಚಾನೆಲ್‌ಗೆ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ ಅಥಾರಿಟಿಯು 50,000 ರೂಪಾಯಿ ದಂಡವನ್ನು ಹಾಕಿದೆ.
ಹಿಜಾಬ್ ಪ್ರಕರಣ ತೀರ್ಪು ಇಬ್ಬರು ಸುಪ್ರೀಂ ನ್ಯಾಯಾಧೀಶರ ಅಭಿಪ್ರಾಯ ಭಿನ್ನವಾಗಿದ್ದೇಕೆ?
ಇಂದ್ರಜಿತ್ ಘೋರ್ಪಡೆ ಎಂಬುವವರು ಏಪ್ರಿಲ್ 10ರಂದು ಸಲ್ಲಿಸಿದ ದೂರಿನ ಮೇರೆಗೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ 50,000 ರೂಪಾಯಿ ದಂಡವನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ.
ಏಪ್ರಿಲ್ 6ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ನ್ಯೂಸ್ 18 ಇಂಡಿಯಾದ ನಿರೂಪಕ ಅಮನ್ ಚೋಪ್ರಾ ಅವರು ಮುಸ್ಲಿಂ ವಿದ್ಯಾರ್ಥಿಗಳನ್ನು "ಹಿಜಾಬಿ ಗ್ಯಾಂಗ್" ಮತ್ತು "ಹಿಜಾಬ್ವಾಲಿ ಗಜ್ವಾ ಗ್ಯಾಂಗ್" ಎಂದು ಉಲ್ಲೇಖಿಸಿದ್ದಾರೆ ಎಂದು ಇಂದ್ರಜಿತ್ ಘೋರ್ಪಡೆ ಆರೋಪಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ಗಲಭೆ ನಡೆಸುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಫೆಬ್ರವರಿ 5 ರಂದು ಹಿಜಾಬ್ ನಿಷೇಧಿಸಿದ ರಾಜ್ಯ ಸರ್ಕಾರ
ಉಡುಪಿ ನಗರದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದ ನಂತರ ರಾಜ್ಯದಲ್ಲಿ ಹಿಜಾಬ್ ಕಿಚ್ಚು ಆರಂಭವಾಯಿತು.
ನಂತರ ಇದು ರಾಜ್ಯದ ಇತರ ಕಾಲೇಜುಗಳಿಗೂ ಹರಡಿತ್ತು. ಹಿಜಾಬ್ - ಕೇಸರಿ ಶಾಲು ವಿವಾದವಾಗಿ ಕೆಲ ದಿನಗಳು ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ವಿಷಯವು ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಫೆಬ್ರವರಿ 5 ರಂದು ಹಿಜಾಬ್ ನಿಷೇಧಿಸಿ ಆದೇಶವನ್ನು ಹೊರಡಿಸಿತ್ತು.
ವಿದ್ಯಾರ್ಥಿಗಳು ತಮ್ಮ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ಸೂಚಿಸಿದ ಸಮವಸ್ತ್ರವನ್ನು ಮಾತ್ರ ಧರಿಸಬೇಕು ಎಂದು ತಿಳಿಸಿತು. ಇದೇ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಾರ್ಚ್‌ನಲ್ಲಿ ಎತ್ತಿಹಿಡಿದಿದೆ.

ಆರೋಪಗಳಿಗೆ ಸಮರ್ಥನೆ ನೀಡುವಲ್ಲಿ ನ್ಯೂಸ್ 18 ಇಂಡಿಯಾ ವಿಫಲ
ದೂರಿನ ಹಿನ್ನೆಲೆ ಸೆಪ್ಟೆಂಬರ್‌ನಲ್ಲಿ ನ್ಯೂಸ್ 18 ಇಂಡಿಯಾ ಚಾನೆಲ್‌ನಿಂದ ದೂರಿನ ಕುರಿತು ಪ್ರತಿಕ್ರಿಯೆಯನ್ನು ಪಡೆಯಲಾಗಿದೆ. ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ ಅಥಾರಿಟಿಯು ಏಳು ದಿನಗಳಲ್ಲಿ ತನ್ನ ವೆಬ್‌ಸೈಟ್ ಮತ್ತು ಅದರ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಈ ಕಾರ್ಯಕ್ರಮವನ್ನು ತೆಗೆದುಹಾಕುವಂತೆ ಚಾನಲ್‌ಗೆ ನಿರ್ದೇಶಿಸಿತು.
"#AlQaedaGangExposed", "Hijab kafata poster" ಎಂದು ಬರೆಯುವ ಮೂಲಕ, ಹಿಜಾಬ್ ನಿಷೇಧದ ವಿರುದ್ಧ ಮಾತನಾಡುವ ಪ್ಯಾನೆಲಿಸ್ಟ್‌ಗಳನ್ನು ಭಯೋತ್ಪಾದಕ ಸಂಘಟನೆ ಅಲ್-ಖೈದಾಗೆ ಹೋಲಿಸಲಾಗಿದೆ. ಈ ಬಗ್ಗೆ ಚಾನೆಲ್ ಯಾವುದೇ ಸಮರ್ಪಕ ಸಮರ್ಥನೆಯನ್ನು ನೀಡಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.'

ನೀತಿ ಸಂಹಿತೆಗೆ ಅಗೌರವ ಸಲ್ಲಿಸಿರುವ ನಿರೂಪಕ ಅಮನ್ ಚೋಪ್ರಾ!
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ಯಾನೆಲಿಸ್ಟ್‌ಗಳನ್ನು ಮಾಜಿ ಅಲ್-ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿಯೊಂದಿಗೆ ಹೋಲಿಸಲಾಗಿದೆ. ಪ್ಯಾನೆಲಿಸ್ಟ್‌ಗಳನ್ನು "ಜವಾಹಿರಿ ಗ್ಯಾಂಗ್ ಸದಸ್ಯ" ಮತ್ತು "ಜವಾಹಿರಿಯ ರಾಯಭಾರಿ" ಎಂದು ಕರೆದಿದ್ದಾರೆ.
ನ್ಯೂಸ್ 18 ಇಂಡಿಯಾದ ನಿರೂಪಕ ಅಮನ್ ಚೋಪ್ರಾ ಅವರು ನೀತಿ ಸಂಹಿತೆ ಮತ್ತು ಪ್ರಸಾರವನ್ನು ಅಗೌರವಿಸಿದ್ದಾರೆ. ಜೊತೆಗೆ ನೀಲೇಶ್ ನವಲಖಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ನಿರ್ದೇಶನಗಳನ್ನು ಪಾಲಿಸಲು ವಿಫಲರಾಗಿದ್ದಾರೆ ಎಂದು ಸುದ್ದಿ ನಿಯಂತ್ರಕರು ಹೇಳಿದ್ದಾರೆ.

ಜಹಾಂಗೀರ್ಪುರಿ ವಿಚಾರದಲ್ಲಿಯೂ ನ್ಯೂಸ್ 18 ಇಂಡಿಯಾಗೆ ತರಾಟೆ
ಇಂತಹ ಉಲ್ಲಂಘನೆಗಳು ಮುಂದುವರಿದರೆ, ನಿರೂಪಕ ಅಮನ್ ಚೋಪ್ರಾರನ್ನು ತನ್ನ ಮುಂದೆ ಹಾಜರಾಗುವಂತೆ ಹೇಳುವುದಾಗಿಯೂ ಸುದ್ದಿ ನಿಯಂತ್ರಕ ಸಂಸ್ಥೆ ತಿಳಿಸಿದೆ.
ಮತ್ತೊಂದು ಆದೇಶದಲ್ಲಿ, ಜಹಾಂಗೀರ್ಪುರಿ ಕೆಡವುವಿಕೆಯ ವರದಿಗಾಗಿ ನ್ಯೂಸ್ 18 ಇಂಡಿಯಾಗೆ ತರಾಟೆ ತೆಗೆದುಕೊಂಡಿದೆ. ಈ ವರದಿಯಲ್ಲಿಯೂ ಚಾನೆಲ್ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
ಏಪ್ರಿಲ್‌ನಲ್ಲಿ ಜಹಾಂಗೀರ್‌ಪುರಿಯಲ್ಲಿ ಹಲವಾರು ಮುಸ್ಲಿಂ ಒಡೆತನದ ಅಂಗಡಿಗಳು ಮತ್ತು ಆಸ್ತಿಗಳನ್ನು ನೆಲಸಮಗೊಳಿಸಲು ಭಾರತೀಯ ಜನತಾ ಪಕ್ಷದ ನಿಯಂತ್ರಿತ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಆದೇಶಕ್ಕೆ ಸಂಬಂಧಿಸಿದೆ.