ಜಯಾ ಕಡೆಯಿಂದ ಬರಬೇಕಿದ್ದ 100 ಕೋಟಿ ರು.ಗೆ ಕರ್ನಾಟಕ ಮೇಲ್ಮನವಿ
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರು ನಿಧನವಾಗಿರುವ ಹಿನ್ನೆಲೆಯಲ್ಲಿ, ಕೆಳ ಹಂತದ ನ್ಯಾಯಾಲಯವು ಜಯ ಅವರ ಮೇಲೆ ವಿಧಿಸಿದ್ದ 100 ಕೋಟಿ ರು.ಗಳನ್ನು ಹೇಗೆ ವಸೂಲಿ ಮಾಡಬೇಕು ಎಂಬ ಸಂದಿಗ್ಧತೆಗೆ ಸಿಲುಕಿದೆ.
ನವದೆಹಲಿ, ಮಾರ್ಚ್ 21: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಧಿಸಲಾಗಿದ್ದ ದಂಡ ವಸೂಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿದ್ದ ಈ ಹಿಂದಿನ ಆದೇಶವನ್ನು ಮರು ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರು ನಿಧನವಾಗಿರುವ ಹಿನ್ನೆಲೆಯಲ್ಲಿ, ಕೆಳ ಹಂತದ ನ್ಯಾಯಾಲಯವು ಜಯ ಅವರ ಮೇಲೆ ವಿಧಿಸಿದ್ದ 100 ಕೋಟಿ ರು.ಗಳನ್ನು ಹೇಗೆ ವಸೂಲಿ ಮಾಡಬೇಕು ಎಂಬ ಸಂದಿಗ್ಧತೆಗೆ ಸಿಲುಕಿದೆ.
ಇದರ ಜತೆಗೇ, ಜಯಲಲಿತಾ ಅವರು ತೀರಿ ಹೋಗಿರುವುದರಿಂದ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಿರುವ 100 ಕೋಟಿ ರು. ಹಣ ಎಲ್ಲಿಂದ ಬರಲಿದೆ ಎಂಬ ಗೊಂದಲವೂ ಕಾಡುತ್ತಿದೆ. ಹಾಗಾಗಿಯೇ, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ.

100 ಕೋಟಿ ರು. ನೀಡಬೇಕೆಂಬ ತೀರ್ಪು
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಜಯಲಲಿತಾ ಅವರ ವಿಚಾರಣೆ ನಡೆದಿದ್ದ ಹಿನ್ನೆಲೆಯಲ್ಲಿ ಕೆಳ ಹಂತದ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ಜಯಾ ಅವರು, 100 ಕೋಟಿ ರು. ನೀಡಬೇಕು ಎಂದು ಸೂಚಿಸಿತ್ತು.

ಆ ಮೂಲಕ ಬರಬೇಕಿತ್ತು ಹಣ
ಕರ್ನಾಟಕಕ್ಕೆ ನೀಡಬೇಕಾದ 100 ರು. ಗಳನ್ನು ಜಯಾ ಅವರಿಗೆ ಸೇರಿದ ಆಸ್ತಿ, ಪಾಸ್ತಿಯನ್ನು ಹರಾಜು ಹಾಕಿ 100 ಕೋಟಿ ರು. ಕಲೆಹಾಕುವ ಮೂಲಕ ಕರ್ನಾಟಕಕ್ಕೆ ಹಣ ನೀಡಬೇಕು ಎಂದೂ ಸೂಚಿಸಿತ್ತು.

ಅಲ್ಲೂ ಕೆಳ ನ್ಯಾಯಾಲಯ ತೀರ್ಪಿಗೆ ಮನ್ನಣೆ
ಆನಂತರ, ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಇತ್ತೀಚೆಗೆ ಅಲ್ಲಿಂದಲೂ ತೀರ್ಪು ಹೊರಬಿದ್ದಿದೆ. ಕೆಳ ಹಂತದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಅದರ ಜತೆಗೇ ಸುಪ್ರೀಂ ಕೋರ್ಟ್, ಜಯಲಲಿತಾ ನಿಧನರಾದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿದೆ.

ಸುಪ್ರೀಂ ಕೋರ್ಟ್ ತೀರ್ಪು ತಂದ ಫಜೀತಿ
ಸುಪ್ರೀಂ ಕೋರ್ಟ್ ಜಯಲಲಿತಾ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿರುವುದು ಕರ್ನಾಟಕ ಸರ್ಕಾರವನ್ನು ಗೊಂದಲಕ್ಕೀಡು ಮಾಡಿದೆ. ನಿಯಮಗಳ ಪ್ರಕಾರ, ವಿಚಾರಣೆ ಮುಕ್ತಾಯವಾಗಿ ತೀರ್ಪು ಕಾಯ್ದಿರಿಸಲಾಗಿದೆ ಎಂದು ನ್ಯಾಯಾಲಯ ಘೋಷಿಸಿದ ಸಂದರ್ಭದಲ್ಲಿ ಆರೋಪಿಯು ಇನ್ನೂ ಬದುಕಿದ್ದರೆ, ಆನಂತರ ಆತ ತೀರಿಹೋದರೂ ಆತನ ವಿರುದ್ಧದ ಪ್ರಕರಣವನ್ನು ಕೈಬಿಡುವ ಹಾಗಿಲ್ಲ. ಆದರೆ, ಜಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಅವರು ನಿಧನರಾದ ಕಾರಣವನ್ನು ಹೇಳಿ ಅವರ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿರುವುದನ್ನು ಕರ್ನಾಟಕ ಸರ್ಕಾರ ಪ್ರಶ್ನೆ ಮಾಡಿದೆ.

ಮೇಲ್ಮನವಿ ಸಲ್ಲಿಸಿದ ಕರ್ನಾಟಕ
ಸುಪ್ರೀಂ ಕೋರ್ಟ್ ನೀಡಿದ್ದ ಕರ್ನಾಟಕಕ್ಕೆ ಬರಬೇಕಿದ್ದ 100 ಕೋಟಿ ರು. ಹಣಕ್ಕೆ ಕೊಕ್ಕೆ ಹಾಕಿದಂತಾಗಿದೆ. ಹಾಗಾಗಿಯೇ, ಕರ್ನಾಟಕವು, ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿ, ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ಇರುವ ನಿಯಮವನ್ನು ಮತ್ತೊಮ್ಮೆ ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದಿದೆ. ಅಲ್ಲದೆ, ಜಯಾ ಅವರ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದ ಆರೋಪಿ ಎಂದು ಘೋಷಿಸಬೇಕು ಹಾಗೂ ಕೆಳ ಹಂತದ ನ್ಯಾಯಾಲಯವು ಸೂಚಿಸಿದ್ದಂತೆ 100 ಕೋಟಿ ರು. ನಮಗೆ ಸಿಗಬೇಕು ಎಂದು ಕೇಳಿಕೊಂಡಿದೆ.












Click it and Unblock the Notifications