ಕರ್ನಾಟಕದಲ್ಲಿ ಭಾರತ್(BH) ಸರಣಿ ನೋಂದಣಿ ಶುರು: ಯಾರಿಗೆ ಲಾಭ?
ಬೆಂಗಳೂರು, ಡಿಸೆಂಬರ್ 22: ಕರ್ನಾಟಕದಲ್ಲಿ ಹೊಸ ವಾಹನಗಳ ಭಾರತ್ ಸರಣಿ ನೋಂದಣಿ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ರಾಜ್ಯದಲ್ಲಿ ಸಾರಿಗೆ ಇಲಾಖೆಯು ಹೊಸ ವಾಹನಗಳಿಗೆ ಭಾರತ್ (ಬಿಎಚ್) ಸರಣಿಯ ನೋಂದಣಿ ಸಂಖ್ಯೆ ಫಲಕಗಳನ್ನು ವಿತರಿಸಲು ಪ್ರಾರಂಭಿಸಿದೆ.
ಕಳೆದ ಆಗಸ್ಟ್ 26ರಂದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MORTH) ಬಿಹೆಚ್ ಸರಣಿಯ ಕುರಿತು ಅಧಿಸೂಚನೆಯನ್ನು ಹೊರಡಿಸಿತು. ಇದು ಸೆಪ್ಟೆಂಬರ್ 15ರಂದು ಜಾರಿಗೆ ಬಂದಿತು. ಆದರೆ, ರಾಜ್ಯ ಸಾರಿಗೆ ಇಲಾಖೆಯು ನವೆಂಬರ್ 30ರಂದು ಮಾತ್ರ ಅಧಿಸೂಚನೆಯನ್ನು ಹೊರಡಿಸಿತು, ಇದರ ಹೊರತಾಗಿಯೂ ವಿಳಂಬವಾಗಿರುವ ಬಗ್ಗೆ ಅನೇಕ ವಾಹನ ಮಾಲೀಕರು ದೂರಿದ್ದಾರೆ.
ಮೂಲಗಳ ಪ್ರಕಾರ, ಬೆಂಗಳೂರಿನ ಕೆ ಆರ್ ಪುರಂ ಆರ್‌ಟಿಓ ಕಚೇರಿಯಲ್ಲಿ ವಿಜಯ್ ಕುಮಾರ್ ಜಾಧವ್ ಎಂಬುವವರು ಕರ್ನಾಟಕದಲ್ಲೇ ಮೊದಲು ಬಿಹೆಚ್ ಸರಣಿಯ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. "ಕೆಆರ್ ಪುರಂನಲ್ಲಿ ಎರಡು ವಾಹನಗಳು ಸೇರಿದಂತೆ ಈವರೆಗೂ ಮೂರು ವಾಹನಗಳಿಗೆ ಬಿಹೆಚ್ ನೋಂದಣಿಯನ್ನು ಮಾಡಲಾಗಿದೆ," ಎಂದು ಸಾರಿಗೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ.

ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಬಿಹೆಚ್ ನೋಂದಣಿ
ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ಖಾಸಗಿ ಉದ್ಯೋಗಿಗಳಿಗೆ ಬಿಹೆಚ್ ಸರಣಿ ನೋಂದಣಿಯನ್ನು ನೀಡುತ್ತಿಲ್ಲ. "ಕೇಂದ್ರ ಸರ್ಕಾರದ ಉದ್ಯೋಗಿಗಳು, ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ಹಂತದ ಅಧಿಕಾರಿಗಳು, ಹಿರಿಯ ಬ್ಯಾಂಕಿಂಗ್ ಅಧಿಕಾರಿಗಳಿಗೆ ಮಾತ್ರ ಬಿಹೆಚ್ ಸರಣಿ ನೋಂದಣಿಗೆ ಅನುಮತಿ ನೀಡಲಾಗುತ್ತಿದೆ. ಬಹುತೇಕ ಖಾಸಗಿ ಉದ್ಯೋಗಿಗಳು ಗುತ್ತಿಗೆ ನೌಕರರಾಗಿದ್ದಾರೆ. ದೆಹಲಿಯಲ್ಲೂ ಸಹ ಗುತ್ತಿಗೆ ಹಾಗೂ ಖಾಸಗಿ ಉದ್ಯೋಗಿಗಳಿಗೆ ಬಿಹೆಚ್ ನೋಂದಣಿಯನ್ನು ನೀಡುತ್ತಿಲ್ಲ," ಎಂದು ಸಾರಿಗೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ.

ಎಲ್ಲರಿಗೂ ಬಿಹೆಚ್ ಸರಣಿ ನೋಂದಣಿಗೆ ಆಗ್ರಹ
ದೇಶದಲ್ಲಿ 2014ರಿಂದಲೂ ಗಡಿ ನಿಯಂತ್ರಣದ ಮಿತಿಯಿಲ್ಲದೇ ದೇಶಾದ್ಯಂತ ಸಂಚರಿಸುವುದಕ್ಕೆ ಒಂದು ರಾಷ್ಟ್ರ, ಒಂದು ತೆರಿಗೆ ಕುರಿತು ಎನ್ ಜಿಓ ಸಂಸ್ಥೆಯ ಅಭಿಯಾನ ನಡೆಸುತ್ತಿದೆ. "ಇದು ಸಕಾರಾತ್ಮಕ ನಡೆಯಾಗಿದೆ. ಕರ್ನಾಟಕದಲ್ಲಿ ಕೊಂಚ ತಡವಾಗಿದ್ದರೂ, ಅಂತಿಮವಾಗಿ ಅನುಷ್ಠಾನಕ್ಕೆ ಬಂದಿದೆ. ಆದರೆ ಸರ್ಕಾರವು ಉದ್ಯೋಗ ಮತ್ತು ಆದಾಯವನ್ನು ಆಧಾರವಾಗಿಟ್ಟುಕೊಂಡು ತಾರತಮ್ಯವನ್ನು ಎಸಗುತ್ತಿದೆ. ಇದು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಎಲ್ಲರಿಗೂ ಬಿಹೆಚ್ ಸರಣಿ ನೋಂದಣಿ ಮಾಡಿಸಿಕೊಳ್ಳುವುದಕ್ಕೆ ಅನುಮತಿ ನೀಡಬೇಕು," ಎಂದು ಎನ್ ಜಿಓ ಸಂಸ್ಥೆಯ ವಾಸಿಮ್ ಮೆಮೋನ್ ಆಗ್ರಹಿಸಿದ್ದಾರೆ.

ಬಿಹೆಚ್ ಸರಣಿ ನೋಂದಣಿ ಉಪಯೋಗ
ಸಾಮಾನ್ಯವಾಗಿ ಬಿಹೆಚ್ ಸರಣಿ ನೋಂದಣಿಯು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳು ಮುಕ್ತವಾಗಿ ಸಂಚರಿಸುವುದಕ್ಕೆ ಅವಕಾಶ ಸಿಕ್ಕಂತೆ ಆಗುತ್ತದೆ. ಇದು ಕೇಂದ್ರ ಸರ್ಕಾರದ ಒಂದು ದೇಶ, ಒಂದು ಮೋಟಾರು ವಾಹನ ತೆರಿಗೆ ಯೋಜನೆ ಜಾರಿಗೆ ಸಂಬಂಧಿಸಿದ ಮೊದಲ ಹೆಜ್ಜೆಯಂತೆ ಗೋಚರಿಸುತ್ತಿದೆ. ಮೋಟಾರು ವಾಹನ ನಿಯಮದ ಪ್ರಕಾರ, ಒಂದು ವಾಹನವನ್ನು ಮತ್ತೊಂದು ರಾಜ್ಯದಲ್ಲಿ ಓಡಿಸಲು ಅನುಮತಿ ನೀಡಲಾಗುವುದಿಲ್ಲ. 11 ತಿಂಗಳ ನಂತರ ಮತ್ತೊಂದು ರಾಜ್ಯದ ನೋಂದಣಿ ಸಂಖ್ಯೆಯೊಂದಿಗೆ ವಾಹನ ಓಡಿಸಲು ಅನುಮತಿಸಲಾಗುವುದಿಲ್ಲ. ಅನಿವಾರ್ಯವಾಗಿದ್ದಲ್ಲಿ ವಾಹನ ಮಾಲೀಕರು ಬೇರೆ ರಾಜ್ಯದಲ್ಲಿ ಮರು-ನೋಂದಣಿ ಮಾಡಬೇಕಾಗುತ್ತದೆ, ಇದು ತೊಡಕಿನ ಪ್ರಕ್ರಿಯೆ ಆಗಿರುತ್ತದೆ.

ಬಿಹೆಚ್ ವಾಹನಗಳ ನೋಂದಣಿ ಯಾರಿಗೆ ಅನ್ವಯ?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ಬಿಹೆಚ್ ಸರಣಿ ನೋಂದಣಿಯು ರಕ್ಷಣಾ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿರುವ ಅಧಿಕಾರಿಗಳು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳ ಸಿಬ್ಬಂದಿ ವಾಹನಗಳಿಗೆ ಮಾತ್ರ ಬಿಹೆಚ್ ಸರಣಿ ನೋಂದಣಿಗೆ ಅನುಮತಿ ನೀಡಲಾಗಿದೆ. ಈ ಯೋಜನೆ ಅಡಿಯಲ್ಲಿ, ಪ್ರಸ್ತುತ ಒಂದು ಬಾರಿ ಜೀವಿತಾವಧಿಯ ಆಡಳಿತದ (15 ವರ್ಷಗಳು) ಬದಲಿಗೆ ಎರಡು ವರ್ಷಗಳವರೆಗೆ ಅಥವಾ ಎರಡರ ಗುಣಕಗಳಲ್ಲಿ MV ತೆರಿಗೆಯನ್ನು ವಿಧಿಸಲಾಗುತ್ತದೆ. 14 ವರ್ಷಗಳ ನಂತರ, ವಾರ್ಷಿಕ ತೆರಿಗೆಯನ್ನು ವಿಧಿಸಲಾಗುತ್ತದೆ, ಇದು ಮೊದಲು ವಿಧಿಸಿದ ಮೊತ್ತದ ಅರ್ಧದಷ್ಟು ಇರುತ್ತದೆ.












Click it and Unblock the Notifications