ಕರ್ನಾಟಕದ ಐಪಿಎಸ್ ಸಿಂಗಂ ತಮಿಳುನಾಡಿಗೆ ಹೋಗಿ ಅತಂತ್ರವಾದ ಕಥೆಯಿದು: ಅಣ್ಣಾಮಲೈ ಬದುಕಿನ ತಿರುವು ಹಲವು
ಕರ್ನಾಟಕದಲ್ಲಿ ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಇತ್ತೀಚೆಗೆ ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅವರ ಬದುಕಿನ ಏರಿಳಿತಗಳ ನೋಟ ಇಲ್ಲಿದೆ.
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ "ಸಿಂಗಂ" ಎಂದೇ ಹೆಸರಾಗಿದ್ದ ಕೆ.ಅಣ್ಣಾಮಲೈ ಇಂದು ತಮಿಳುನಾಡು ರಾಜಕೀಯದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಖಾಕಿ ತೊರೆದು ರಾಜಕಾರಣದತ್ತ ಬಂದ ಅವರ ಪಯಣ ದಿಟ್ಟವಾಗಿದ್ದರೂ, ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು, ಪಕ್ಷ ನೀಡಿದ್ದ ಜವಾಬ್ದಾರಿಗಳಿಂದ ಕೆಳಗೆ ಇಳಿದಿರುವ ನಿರ್ಧಾರಗಳು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಐಪಿಎಸ್ ಆಗಿ ಸಿಂಹದಂತೆ ಅಬ್ಬರಿಸುತ್ತಿದ್ದ ಅಣ್ಣಾಮಲೈ ಅವರು ರಾಜಕೀಯದಲ್ಲಿ ನಿಜಕ್ಕೂ ಎಡವಿದ್ರಾ? ಎನ್ನುವ ಪ್ರಶ್ನೆಗಳ ಸುತ್ತ ಅವರ ಕಥೆ ಸುತ್ತುತ್ತಿದೆ.
ಐಪಿಎಸ್‌ನಿಂದ ರಾಜಕೀಯಕ್ಕೆ
ಕೆ.ಅಣ್ಣಾಮಲೈ (ಕುಪ್ಪುಸಾಮಿ ಅಣ್ಣಾಮಲೈ) 4 ಜೂನ್ 1984ರಂದು ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಜನಿಸಿದರು. ರೈತ ಕುಟುಂಬದಲ್ಲಿ ಜನಿಸಿದ ಅಣ್ಣಾಮಲೈ ಕೊಯಮತ್ತೂರಿನ ಪಿಎಸ್‌ಜಿ ಕಾಲೇಜ್ ಆಫ್ ಟೆಕ್ನಾಲಜಿ ಮತ್ತು ಲಕ್ನೋದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ 2011ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರಿ, ಕರ್ನಾಟಕದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕ ಕ್ಯಾಡರ್‌ಗೆ ಸೇರಿದ ಅಣ್ಣಾಮಲೈ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಸ್‌ಪಿ ಆಗಿ ಸೇವೆ ಸಲ್ಲಿಸಿದರು. ಬಳಿಕ ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದರು. ಕಠಿಣ ಕಾನೂನು ಜಾರಿ ಮತ್ತು ಶಿಸ್ತಿನ ಆಡಳಿತದಿಂದ ಅವರಿಗೆ "ಸಿಂಗಂ" ಎಂಬ ಹೆಸರು ಬಂತು. ಆದರೆ 2019ರಲ್ಲಿ ಕೌಟುಂಬಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದರು.
ತಮಿಳುನಾಡಿನಲ್ಲಿ ಬಿಜೆಪಿಗೆ ಅಡಿಪಾಯ
ನಂತರ 2020ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿ, 2021ರಲ್ಲಿ ತಮಿಳುನಾಡು ಘಟಕದ ಅತಿ ಕಿರಿಯ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. ಅವರ ಐಪಿಎಸ್ ಹಿನ್ನೆಲೆ ಮತ್ತು ಶಿಸ್ತಿನ ವ್ಯಕ್ತಿತ್ವವು ಯುವಜನರನ್ನು ಬೇಗನೇ ಆಕರ್ಷಿಸಿತು. ಅಣ್ಣಾಮಲೈ ತಮ್ಮ ನಾಯಕತ್ವದಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಚರ್ಚೆಯ ಕೇಂದ್ರಬಿಂದುವಾಗುವಂತೆ ಮಾಡಿದರು. ಡಿಎಂಕೆ ವಿರುದ್ಧ ಭ್ರಷ್ಟಾಚಾರ ಆರೋಪಗಳೊಂದಿಗೆ "ಡಿಎಂಕೆ ಫೈಲ್ಸ್" ಬಿಡುಗಡೆ, 2024ರಲ್ಲಿ 'ಎನ್ ಮಣ್ಣು, ಎನ್ ಮಕ್ಕಳ್' ಯಾತ್ರೆಯ ಮೂಲಕ 234 ವಿಧಾನಸಭಾ ಕ್ಷೇತ್ರಗಳ ಸುತ್ತಾಟ ನಡೆಸಿದರು. ತಮಿಳುನಾಡಿನಲ್ಲಿ ಬಿಜೆಪಿ ಒಂದು ಅಡಿಪಾಯ ಹಾಕುವ ಹೊಣೆ ಹೊತ್ತರು.

ಅಣ್ಣಾಮಲೈ "ಎನ್ ಮಣ್ಣು, ಎನ್ ಮಕ್ಕಳ್" (ನಮ್ಮ ನೆಲ, ನಮ್ಮ ಜನ) ಪಾದಯಾತ್ರೆಯ ಮೂಲಕ ತಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಬೆಳೆಸುವ ಪ್ರಯತ್ನ ಮಾಡಿದರು. 2024ರ ಫೆಬ್ರವರಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಯಾತ್ರೆ ಬಿಜೆಪಿ ಸಂಘಟನೆ ಚಟುವಟಿಕೆಗೆ ಉತ್ತೇಜನ ನೀಡಿದ್ದಾಗಿ ಪಕ್ಷ ಹೇಳಿತ್ತು. ಅವರ ಅಧ್ಯಕ್ಷೀಯ ಅವಧಿಯಲ್ಲಿ ಬಿಜೆಪಿ ತಮಿಳುನಾಡಿನ ರಾಜಕೀಯ ಚರ್ಚೆಯಲ್ಲಿ ಹೆಚ್ಚು ಗೋಚರಿಸಿತು. 2021ರ ವಿಧಾನಸಭಾ ಚುನಾವಣೆಯಲ್ಲಿ ಅರಾವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತರೂ, 2024ರ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರು ಕ್ಷೇತ್ರದಿಂದ ಮತ್ತೆ ಪ್ರಯತ್ನಿಸಿದರು. ಆದರೆ ಜಯ ಸಾಧಿಸಲಿಲ್ಲ.
ಆರಂಭದಿಂದಲೂ ಅವರ ರಾಜಕೀಯ ಶೈಲಿಯು ಆಕ್ರಮಣಕಾರಿಯಾಗಿತ್ತು. 2024ರ ಡಿಸೆಂಬರ್‌ನಲ್ಲಿ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಪ್ರಕರಣದ ಬಳಿಕ ಅವರು ಸಾರ್ವಜನಿಕವಾಗಿ ತಮ್ಮನ್ನು ತಾವು ಛಡಿ ಏಟಿನ ಮೂಲಕ ಹೊಡೆದುಕೊಂಡು ಪ್ರತಿಭಟನೆ ನಡೆಸಿದರು. 2025ರ ಫೆಬ್ರವರಿಯಲ್ಲಿ ಡಿಎಂಕೆ ಮುಖ್ಯ ಕಚೇರಿಯಾದ "ಅಣ್ಣಾ ಅರಿವಾಲಯಂ" ಅನ್ನು "ಇಟ್ಟಿಗೆ ಇಟ್ಟಿಗೆ ಕೆಡವುತ್ತೇನೆ" ಎಂಬ ಹೇಳಿಕೆ ನೀಡಿದ್ದು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾದವು. ಆದರೆ ರಾಜಕೀಯ ವಿಶ್ಲೇಷಕರ ಪ್ರಕಾರ ಅಣ್ಣಾಮಲೈ ಅವರ ಕೇಂದ್ರಿತ ಮತ್ತು ವ್ಯಕ್ತಿನಿಷ್ಠ ನಾಯಕತ್ವವು ತಮಿಳುನಾಡಿನ ದ್ರಾವಿಡ ರಾಜಕೀಯ ಸಂಸ್ಕೃತಿಗೆ ಹೊಂದಿಕೆಯಾಗಲಿಲ್ಲ.
ಬಿಜೆಪಿಯ ಮೈತ್ರಿ ಅಣ್ಣಾಮಲೈಗೆ ಮುಳುವು?
ಇದಲ್ಲದೆ, ಮೈತ್ರಿ ಪಕ್ಷವಾದ ಎಐಡಿಎಂಕೆ ನಾಯಕರಾದ ಸಿ.ಎನ್.ಅಣ್ಣಾದುರೈ ಮತ್ತು ಜೆ.ಜಯಲಲಿತಾ ಕುರಿತ ಹೇಳಿಕೆಗಳು ಮೈತ್ರಿ ಸಂಬಂಧಗಳಲ್ಲಿ ಉದ್ವಿಗ್ನತೆ ತಂದವು. 2023ರ ಸೆಪ್ಟೆಂಬರ್‌ನಲ್ಲಿ ಎಐಡಿಎಂಕೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಯಿಂದ ಹೊರಬಂದಿತು. 2024ರ ಲೋಕಸಭಾ ಚುನಾವಣಾ ಸೋಲಿನ ನಂತರ ಎಐಡಿಎಂಕೆ ನಾಯಕರು ಅಣ್ಣಾಮಲೈ ಶೈಲಿಯೇ ಈ ಸೋಲಿಗೆ ಕಾರಣವೆಂದು ಟೀಕಿಸಿದರು. 2025ರ ಏಪ್ರಿಲ್‌ನಲ್ಲಿ ಬಿಜೆಪಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಮಾಜಿ ಎಐಎಡಿಎಂಕೆ ನಾಯಕ ನೈನಾರ್ ನಾಗೇಂದ್ರನ್ ಅವರನ್ನು ನೇಮಕ ಮಾಡಿತು.
ಈ ನಿರ್ಧಾರವನ್ನು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಜೊತೆ ಮೈತ್ರಿಯ ಭಾಗವೆಂದು ರಾಜಕೀಯ ವಲಯದಲ್ಲಿ ಅರ್ಥೈಸಲಾಯಿತು. ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೂ ಅಣ್ಣಾಮಲೈ ವಿರುದ್ಧ ತೀವ್ರ ಟೀಕೆ ಮಾಡಿದರು ಇಬ್ಬರೂ ಗೌಂಡರ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅಣ್ಣಾಮಲೈ ಅವರ ಬೆಳವಣಿಗೆ ಅವರ ಪ್ರಾಬಲ್ಯಕ್ಕೆ ಹಿನ್ನಡೆಯಾಗಬಹುದು ಎಂಬುದು ಮೈತ್ರಿ ಮಾತುಕತೆಗಳಿಗೆ ಅಡ್ಡಿ ಎಂಬ ಮಾತುಗಳು ಕೂಡ ಕೇಳಿಬಂದವು.

ಒಂದು ಸ್ಥಾನವೂ ಗೆಲ್ಲದ ಬಿಜೆಪಿ
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 23 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ ಒಂದು ಸ್ಥಾನವೂ ಗೆಲ್ಲಲಿಲ್ಲ. ಆಗ ಪಕ್ಷವು ಶೇ 11ರಷ್ಟು ಮತಹಂಚಿಕೆ ಪಡೆದಿದ್ದೇವೆ ಎಂದು ಹೇಳಿಕೊಂಡರೂ, ವಿಶ್ಲೇಷಕರ ಪ್ರಕಾರ 2014ರಲ್ಲಿ 7 ಸ್ಥಾನಗಳಲ್ಲಿ ಸ್ಪರ್ಧಿಸಿ ಶೇ 6ರಷ್ಟು ಮತ ಪಡೆದಿದ್ದ ಹಿನ್ನೆಲೆಯೊಂದಿಗೆ ಹೋಲಿಸಿದರೆ, ಅಂತಹ ಏರಿಕೆಯೇನೂ ಕಂಡುಬಂದಿಲ್ಲ. ಇನ್ನು 2019ರೊಂದಿಗೆ ಈ ಚುನಾವಣಾ ಫಲಿತಾಂಶ ಹೋಲಿಕೆ ಮಾಡುವುದು ಸರಿಯಲ್ಲ. ಏಕೆಂದರೆ ಆ ಸಮಯದಲ್ಲಿ ಬಿಜೆಪಿ ಎಐಎಡಿಎಂಕೆ ಮೈತ್ರಿಯ ಭಾಗವಾಗಿತ್ತು. 2024ರಲ್ಲಿ ಸ್ವತಂತ್ರ ಸ್ಪರ್ಧೆಯ ಫಲಿತಾಂಶವು ಪಕ್ಷದ ನಿಜವಾದ ನೆಲೆಯನ್ನಾಧರಿಸಿತ್ತು ಎನ್ನಲಾಗಿದೆ.
ವಿವಾದಗಳು ಮತ್ತು ಹಿನ್ನಡೆ
2022ರ ಅಣ್ಣಾಮಲೈ ಅರಿಯಲೂರು ಲಾವಣ್ಯ ಪ್ರಕರಣದಲ್ಲಿ ಧಾರ್ಮಿಕ ಪರಿವರ್ತನೆ ಒತ್ತಡದ ಆರೋಪಗಳನ್ನು ಮಾಡಿದರು. ಆದರೆ ಸಿಬಿಐ ತನಿಖೆ ಬಳಿಕ ಅದು ವಸತಿ ನಿಲಯದ ಮೇಲ್ವಿಚಾರಕನ ಹಲ್ಲೆಯಿಂದಾಗಿ ನಡೆದ ಆತ್ಮಹತ್ಯೆ ಎಂದು ತೀರ್ಮಾನಿಸಿತು. ಈ ಪ್ರಕರಣ ಕೂಡ ಅಣ್ಣಾಮಲೈ ಅವರು ರಾಜಕೀಯ ನಿಲುವಿನ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತ ನೀಡಿತು. ಹಾಗೆಯೇ, ಪಕ್ಷದೊಳಗಿನ ಅಸಮಾಧಾನವೂ ಹೆಚ್ಚಾಯಿತು.
ಬ್ರಾಹ್ಮಣರ ಲಾಬಿ ಕಡೆಗಣನೆಯಾಗಿದೆ ಎಂಬ ಆರೋಪ, ಅಪರಾಧ ಹಿನ್ನೆಲೆಯವರನ್ನು ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂಬ ಟೀಕೆ, ಇವೆಲ್ಲವೂ ಅವರ "ಮಿಸ್ಟರ್ ಕ್ಲೀನ್" ಇಮೇಜ್‌ಗೆ ವಿರುದ್ಧವಾದ ಅಭಿಪ್ರಾಯವನ್ನು ಹುಟ್ಟುಹಾಕಿತು. ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ 2026ರ ಫೆಬ್ರವರಿ 3ರಂದು ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಭಾರಿಯಾಗಿ ನೇಮಕಗೊಂಡಿದ್ದ ಅಣ್ಣಾಮಲೈ ಅವರು ತಂದೆಯ ಅನಾರೋಗ್ಯ ಕಾರಣ ನೀಡಿ ದಿಢೀರ್ ರಾಜೀನಾಮೆ ನೀಡಿದ್ದು ಕೂಡ ಹೊಸ ಚರ್ಚೆಗಳಿಗೆ ಕಾರಣವಾಯಿತು.
ಮುಂದಿನ ದಾರಿ?
ಪ್ರಸ್ತುತ ತಮಿಳುನಾಡು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯಲ್ಲಿ ಅಣ್ಣಾಮಲೈ ಅವರ ಹೆಸರು ಕಾಣಿಸದಿರುವುದು ಅವರ ರಾಜಕೀಯ ಭವಿಷ್ಯವನ್ನು ಪ್ರಶ್ನಾರ್ಥಕವಾಗಿಸಿದೆ. ಇದರ ನಡುವೆ ಅಣ್ಣಾಮಲೈ ಅವರ ಹೊಸ ಪಕ್ಷ ಸ್ಥಾಪನೆ ಬಗ್ಗೆ ಊಹಾಪೋಹಗಳಿದ್ದರೂ, ಅದು ತಕ್ಷಣ ಸಾಧ್ಯವೆಂದು ತೋರುವುದಿಲ್ಲ.
ಅಣ್ಣಾಮಲೈ ಇನ್ನೂ ಕೇವಲ 41 ವರ್ಷದವರು. ಯುವ ನಾಯಕತ್ವ, ಆಡಳಿತ ಅನುಭವ ಮತ್ತು ವೈಯಕ್ತಿಕ ಧೈರ್ಯ ಇವೇ ಅವರ ಬಲ. ಆದರೆ ತಮಿಳುನಾಡಿನ ದ್ರಾವಿಡ ರಾಜಕೀಯ ವಾಸ್ತವಿಕತೆ, ಮೈತ್ರಿ ಲೆಕ್ಕಾಚಾರ ಹಾಗೂ ಸಂಘಟನೆ ಆಧಾರಿತ ರಾಜಕೀಯದ ಸವಾಲುಗಳನ್ನು ಎದುರಿಸಲು ಅವರ ಶೈಲಿಯಲ್ಲಿ ಬದಲಾವಣೆ ಅಗತ್ಯವಾಗಬಹುದು. 2026ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಅಣ್ಣಾಮಲೈ ಅವರ ರಾಜಕೀಯ ಹೆಜ್ಜೆಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೊಸ ಪಕ್ಷ ಸ್ಥಾಪನೆ ವದಂತಿ
2025ರ ಏಪ್ರಿಲ್‌ನಲ್ಲಿ ಅವರು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ, "ಅಣ್ಣಾಮಲೈ ಹೊಸ ಪಕ್ಷ ಕಟ್ಟಲಿದ್ದಾರೆ" ಎಂಬ ವದಂತಿಗಳು ರಾಜಕೀಯ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಸ್ಥಾನದಿಂದ ಅವರನ್ನು ಬದಲಾಯಿಸಿದ ನಂತರ, ಅವರ ಪಾತ್ರ ಪಕ್ಷದೊಳಗೆ ಸ್ಪಷ್ಟವಾಗಿ ಕಾಣಿಸದಿರುವುದು ಈ ಪ್ರಶ್ನೆಗಳಿಗೆ ಕಾರಣವಾಯಿತು. ಎಐಎಡಿಎಂಕೆ ಜೊತೆ ಮೈತ್ರಿ ರಾಜಕಾರಣದ ಒತ್ತಡದ ಬಗ್ಗೆ ಅಣ್ಣಾಮಲೈ ಬೆಂಬಲಿಗರಲ್ಲಿ ಅಸಮಾಧಾನ ಮೂಡಿತು.
ಅಣ್ಣಾಮಲೈ ಬೆಂಬಲಿಗರ "ವಾರ್ ರೂಂ"ಗಳು ಮತ್ತು ಆನ್‌ಲೈನ್ ಅಭಿಯಾನಗಳು ಇನ್ನೂ ಸಕ್ರಿಯವಾಗಿರುವುದು, ಸ್ವತಂತ್ರ ರಾಜಕೀಯ ವೇದಿಕೆ ಸಾಧ್ಯತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಇದುವರೆಗೂ ಅಣ್ಣಾಮಲೈ ಸಾರ್ವಜನಿಕವಾಗಿ ಹೊಸ ಪಕ್ಷ ಸ್ಥಾಪನೆ ಮಾಡುವ ಯೋಜನೆ ಇಲ್ಲವೆಂದು ಹೇಳಿದ್ದಾರೆ. ಅವರು ತಮ್ಮ ಬದ್ಧತೆ ಬಿಜೆಪಿ ಪಕ್ಷಕ್ಕೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಪಕ್ಷದೊಳಗಿನ ಅವಕಾಶಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.
ಅಣ್ಣಾಮಲೈ ರಾಜಕೀಯ ಪಯಣವು ವೇಗದ ನಡುವೆ ಏರಿಳಿತಗಳ ಕಥೆಗೆ ಉತ್ತಮ ನಿದರ್ಶನ. ಐಪಿಎಸ್ ಆಗಿ "ಸಿಂಗಂ" ಎನಿಸಿಕೊಂಡಿದ್ದ ಅವರು, ರಾಜಕೀಯ ಅರಣ್ಯದಲ್ಲಿ ದಾರಿ ತಪ್ಪಿದರೇ? ಎಂಬ ಪ್ರಶ್ನೆಯಂತೂ ಎಲ್ಲರ ಮುಂದಿದೆ. ಮೈತ್ರಿ ರಾಜಕಾರಣ ಮತ್ತು ಚುನಾವಣಾ ಫಲಿತಾಂಶಗಳ ಹಿನ್ನೆಲೆ ನೋಡಿದರೆ, ಅವರ ಪ್ರಭಾವ ಕ್ಷೀಣಿಸಿದಂತೆಯೂ ಗೋಚರಿಸುತ್ತಿದೆ. ಆದರೆ ರಾಜಕೀಯದಲ್ಲಿ ಅಂತಿಮ ಅಧ್ಯಾಯ ಬರೆಯಲಾಗುವುದಿಲ್ಲ. ಮುಂದಿನ ಚುನಾವಣೆಗಳು ಅವರು ರಾಜಕೀಯದಲ್ಲೂ "ಸಿಂಗಂ" ಆಗಿ ಮತ್ತೆ ಗರ್ಜಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದಕ್ಕೆ ಉತ್ತರ ಅವರೇ ನೀಡಬೇಕಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications