5 ರೂ. ಸಂಬಳ ಪಡೆದ ಮಹಿಳೆ ಇಂದು ಬಹುಕೋಟಿ ಕಂಪನಿ ಒಡತಿ: ಜ್ಯೋತಿ ರೆಡ್ಡಿ ಕಥೆ ಕೇಳಿದ್ರೆ ಬೆರಗಾಗುತ್ತೀರಿ!
ತೆಲಂಗಾಣದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಜ್ಯೋತಿ ರೆಡ್ಡಿ ನಾಲ್ವರು ಸಹೋದರಿಯರಲ್ಲಿ ಕಿರಿಯವಳು. ಆಕೆಯ ತಂದೆ ಕಡು ಬಡವರಾಗಿದ್ದರು. ಮಕ್ಕಳಿಗೆ ಒಂದು ಹೊತ್ತಿನ ಊಟ ನೀಡುವುದು ಕೂಡಾ ಅವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ಅವರು ಜ್ಯೋತಿಯನ್ನು ಅನಾಥಾಶ್ರಮದಲ್ಲಿ ಬಿಟ್ಟರು. ಜ್ಯೋತಿಗೆ ಕುಟುಂಬವಿದ್ದರೂ, ಹಣವಿಲ್ಲದ ಕಾರಣಕ್ಕೆ ಅವರು ಅನಾಥಳಂತೆ ಬಾಲ್ಯ ಕಳೆಯಬೇಕಾಯಿತು. ತನಗೆ ಎಲ್ಲರೂ ಇದ್ದರೂ ಯಾರೂ ಇಲ್ಲ ಎಂಬಂತೆ ಬೆಳೆದರು. ಓಂದೊತ್ತಿನ ಊಟಕ್ಕೆ ಪರದಾಡುತ್ತಿದ್ದ ಜ್ಯೋತಿ ಇವತ್ತು ಕೋಟ್ಯಾಧಿಪತಿ. ಈ ಅನಾಥ ಹುಡುಗಿ ಅಮೆರಿಕದಲ್ಲಿ ಬಹು ಮಿಲಿಯನ್ ಡಾಲರ್ ಕಂಪನಿಯ ಒಡತಿ.
ಶೂನ್ಯದಿಂದ ಎದ್ದು ಬಂದ ಜ್ಯೋತಿ ರೆಡ್ಡಿ
ಜ್ಯೋತಿ ೧೯೭೦ ರಲ್ಲಿ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಜನಿಸಿದರು. ಅನಾಥಾಶ್ರಮದಲ್ಲಿಯೇ ಓದಿ ೧೦ ನೇ ತರಗತಿಯಲ್ಲಿ ಪಾಸಾಗುತ್ತಾರೆ. ೧೬ ನೇ ವಯಸ್ಸಿನಲ್ಲಿ, ತನಗಿಂತ ೧೦ ವರ್ಷ ದೊಡ್ಡವನಾದ ವ್ಯಕ್ತಿಯ ಜೊತೆ ಮದುವೆಯಾಗುತ್ತಾರೆ. ೧೮ ನೇ ವಯಸ್ಸಿಗೆ, ಜ್ಯೋತಿ ಇಬ್ಬರು ಮಕ್ಕಳ ತಾಯಿಯಾಗುತ್ತಾರೆ. ಸಂಸಾರಿಕ ಜೀವನವನ್ನು ನಿಭಾಯಿಸುವುದು ಜ್ಯೋತಿಗೆ ಕಷ್ಟವಾಗುತ್ತದೆ. ಅವರು ಎಲ್ಲವನ್ನೂ ಬಿಟ್ಟು ದೂರ ಹೋಗುವ ನಿರ್ಧಾರ ಮಾಡುತ್ತಾರೆ. ಆದರೆ ಅವರ ನಿರ್ಧಾರಕ್ಕೆ ಯಾರ ಬೆಂಬಲವೂ ಸಿಗುವುದಿಲ್ಲ. ೧೯೮೦ ರ ದಶಕದಲ್ಲಿ, ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಗಂಡನಿಗೆ ವಹಿಸಿ ಬೇರೆಡೆ ಹೋಗುವುದನ್ನು ಯಾರೂ ಒಪ್ಪುತ್ತಿರಲಿಲ್ಲ. ಗಂಡ, ಮಕ್ಕಳು ಹೆಂಡತಿಯ ಮೊದಲ ಆದ್ಯತೆಯಾಗಿರಬೇಕು ಎಂದು ಯೋಚಿಸುತ್ತಿದ್ದವರೇ ಹೆಚ್ಚು.

೫ ರೂ.ಯಿಂದ ಆರಂಭವಾದ ಹೋರಾಟ
ಗೊತ್ತು ಗುರಿಯಿಲ್ಲದ ಊರು, ಜನ. ಅದರ ಜೊತೆಗೆ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ. ಜ್ಯೋತಿ ಕೃಷಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಈ ಕೆಲಸದಲ್ಲಿ ಅವರಿಗೆ ಸಿಗುತ್ತಿದ್ದದ್ದು ದಿನಕ್ಕೆ ಕೇವಲ ಐದು ರೂಪಾಯಿ. ಆ ಐದು ರೂಪಾಯಿಯಲ್ಲಿ ಮೂವರಿಗೆ ಆಹಾರ ನೀಡಲು ಹೇಗೆ ಸಾಧ್ಯ? ಇದಕ್ಕಾಗಿ ದಿನಗೂಲಿ ಕಾರ್ಮಿಕಳಾಗಿ ಮತ್ತು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ, ಮನೆ ಮನೆಗೆ ಹೋಗಿ ಸೀರೆಗಳನ್ನು ಮಾರಾಟ ಮಾಡುತ್ತಾರೆ. ಜ್ಯೋತಿ ಒಂದು ನಿಮಿಷವನ್ನೂ ವೇಸ್ಟ್ ಮಾಡ್ತಾ ಇರ್ಲಿಲ್ಲ.
ಶಿಕ್ಷಣದ ಆಧಾರದ ಮೇಲೆ ಬದಲಾದ ಅದೃಷ್ಟ
ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಿದ್ದರೂ ಜ್ಯೋತಿ ಓದುವುದಕ್ಕೆ ಸಮಯವನ್ನು ಮೀಸಲಿಡುತ್ತಿದ್ದರು. ತನ್ನ ಶಿಕ್ಷಣವನ್ನು ಮುಗಿಸಿದ್ದು ಮಾತ್ರವಲ್ಲ, ಬೇರೆ ಬೇರೆ ಕೌಶಲ್ಯಗಳನ್ನು ಕೂಡಾ ಕಲಿಯುತ್ತಾರೆ. ಟೈಪಿಂಗ್ ಕಲಿತು ಶಾಲೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1992 ರಲ್ಲಿ, ಶಾಲಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುತ್ತಾರೆ. ಈ ಕೆಲಸಕ್ಕೆ 398 ರೂ. ಸಂಬಳವನ್ನು ಪಡೆಯುತ್ತಾರೆ. ಅವರ ಹೆಣ್ಣುಮಕ್ಕಳಿಗೆ ಮಿಷನರಿ ಶಾಲೆಯಲ್ಲಿ ಅಡ್ಮೀಶನ್ ಆಗುತ್ತದೆ. ಎಲ್ಲವೂ ಚೆನ್ನಾಗಿಯೇ ನಡೀತಾ ಇತ್ತು. ಆದ್ರೂ ಜ್ಯೋತಿಗೆ ಸಮಾಧಾನ, ಸಂತೋಷ ಇರಲಿಲ್ಲ.
ಅಮೆರಿಕಾಕ್ಕೆ ಪ್ರಯಾಣ
ಇದೇ ವೇಳೆ ಜ್ಯೋತಿಯ ಸೋದರಸಂಬಂಧಿ ಅಮೆರಿಕದಿಂದ ವಾಪಾಸಾಗಿದ್ದರು. ಆಕೆಯ ಸಹಾಯದಿಂದ ಜ್ಯೋತಿ ಕೂಡಾ ಅಮೆರಿಕಕ್ಕೆ ಹೋಗಲು ನಿರ್ಧರಿಸುತ್ತಾರೆ. ಆರಂಭದಲ್ಲಿ, ಅವರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ವೀಸಾ ಪಡೆಯಲು ಅವರು ಪದೇ ಪದೇ ವೀಸಾ ಕಚೇರಿ ಮತ್ತು ಕೋರ್ಟ್‌ಗೆ ಹೋಗಬೇಕಾಗುತ್ತಿತ್ತು. ಇದು ಅವರ ಜೀವನದ ಮಹತ್ವದ ತಿರುವು. ವೀಸಾ ಪ್ರಕ್ರಿಯೆಗಾಗಿ ಜನರು ಅತಿಯಾದ ಮೊತ್ತವನ್ನು ಪಾವತಿಸಲು ಸಿದ್ಧರಿರುವುದನ್ನು ಜ್ಯೋತಿ ಗಮನಿಸುತ್ತಾರೆ. ನಂತರ, ವೀಸಾ ವಿಷಯಗಳಲ್ಲಿ ಸಮಾಲೋಚನೆ ಒದಗಿಸಲು ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದರು.
ಐಟಿ ಕಂಪನಿ ಒಡತಿ
ಯಾವುದೇ ಹೂಡಿಕೆ ಇಲ್ಲ, ಮಾರ್ಗದರ್ಶಕರಿಲ್ಲ, ಯಾವುದೇ ಯೋಜನೆ ಇರಲಿಲ್ಲ. ಆದರೆ ಅದೃಷ್ಟ ಕೈ ಬಿಟ್ಟಿರಲಿಲ್ಲ. 5 ರೂ.ಗೆ ದುಡಿತಾ ಇದ್ದ ಜ್ಯೋತಿ ಅಮೆರಿಕದಲ್ಲಿ ಸ್ವಂತವಾಗಿ ಕೀ ಸಾಫ್ಟ್‌ವೇರ್ ಸೊಲ್ಯೂಷನ್ಸ್ ಎಂಬ ಐಟಿ ಸೇವೆಗಳ ಕಂಪನಿಯನ್ನು ಪ್ರಾರಂಭಿಸಿದರು. ಅವರ ಕಂಪನಿ ಫೀನಿಕ್ಸ್‌ನಲ್ಲಿದೆ. ಈಗ ಅವರು ಅಮೆರಿಕದಲ್ಲಿ ಆರು ಮನೆಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಕೂಡಾ ಹಲವಾರು ಫ್ಲಾಟ್‌ಗಳು ಮತ್ತು ಆಸ್ತಿಗಳ ಒಡತಿ.
ನಿಮ್ಮ ಮನಸ್ಸನ್ನು ಒಂದು ಗುರಿಯತ್ತ ನೆಟ್ಟರೆ ಅದೆಂಥ ಕಷ್ಟಗಳೇ ಎದುರಾಗಲಿ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಜ್ಯೋತಿಯ ಕಥೆ ಕೂಡಾ ಅದನ್ನೇ ಕಲಿಸುತ್ತದೆ.


Click it and Unblock the Notifications
