Job Loss: ಕೆಲಸ ಹೋಯ್ತು… ಪೋಷಕರಿಗೆ ಸತ್ಯ ಹೇಳಲಾಗದೆ ಪ್ರತಿದಿನ ಆಫೀಸ್ಗೆ ಹೋಗುವಂತೆ ನಟಿಸಿದ ಯುವಕ!
ಉದ್ಯೋಗ ಕಳೆದುಕೊಳ್ಳುವುದು ಯಾರಿಗಾದರೂ ದೊಡ್ಡ ಆಘಾತವೇ ಸರಿ. ಅದರಲ್ಲೂ ಹಲವು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ಬಳಿಕ ದಿಢೀರ್ ಆಗಿ ಕೆಲಸ ಕಳೆದುಕೊಂಡರೆ ಮುಂದೇನು ಎಂಬ ಆತಂಕ ಕಾಡುವುದು ಸಹಜ. ಆದರೆ ಗುರುಗ್ರಾಮ್ನ ವ್ಯಕ್ತಿಯೊಬ್ಬರಿಗೆ ಉದ್ಯೋಗ ಕಳೆದುಕೊಂಡ ನೋವಿಗಿಂತಲೂ, ಆ ವಿಚಾರವನ್ನು ತಮ್ಮ ಪೋಷಕರಿಗೆ ಹೇಗೆ ಹೇಳುವುದು ಎಂಬ ಭಯವೇ ದೊಡ್ಡದಾಗಿದೆ. ಹೀಗಾಗಿ ಕೆಲಸ ಕಳೆದುಕೊಂಡಿದ್ದರೂ ಪ್ರತಿದಿನ ಬೆಳಗ್ಗೆ ಎಂದಿನಂತೆ ಮನೆಯಿಂದ ಹೊರಟು, ತಾನು ಆಫೀಸ್ಗೆ ಹೋಗುತ್ತಿರುವಂತೆ ನಟಿಸುತ್ತಿದ್ದಾರೆ.
ಗುರುಗ್ರಾಮ್ನ ಸೈಬರ್ ಸಿಟಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸುಮಾರು 7 ವರ್ಷಗಳ ಕಾಲ ಕೆಲಸ ಮಾಡಿದ್ದ ಈ ವ್ಯಕ್ತಿ ಸೆಪ್ಟೆಂಬರ್ 10ರಂದು ಲೇಆಫ್ಗೆ ಒಳಗಾಗಿದ್ದಾರೆ . ಆದರೆ ಈ ವಿಷಯವನ್ನು ತಮ್ಮ ಪೋಷಕರಿಗೆ ಹೇಳಲು ಇನ್ನೂ ಧೈರ್ಯವಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಲ್ಯಾಪ್ಟಾಪ್ ಹಿಡಿದು ಪ್ರತಿದಿನ ಮನೆಯಿಂದ ಹೊರಗೆ
ಉದ್ಯೋಗ ಕಳೆದುಕೊಂಡ ಬಳಿಕ ಮನೆಯಲ್ಲೇ ಕುಳಿತುಕೊಳ್ಳುವ ಬದಲು, ಅವರು ಹೊಸದೊಂದು ದಿನಚರಿಯನ್ನು ರೂಪಿಸಿಕೊಂಡಿದ್ದಾರೆ. ಪ್ರತಿದಿನ ಬೆಳಗ್ಗೆ ತಮ್ಮ ವೈಯಕ್ತಿಕ ಲ್ಯಾಪ್ಟಾಪ್ ತೆಗೆದುಕೊಂಡು ಮನೆಯಿಂದ ಹೊರಡುತ್ತಾರೆ. ತಾಯಿ ತನ್ನ ಕಂಪನಿಯ ಲ್ಯಾಪ್ಟಾಪ್ ಕಾಣೆಯಾಗಿರುವುದನ್ನು ಗಮನಿಸಿಲ್ಲ ಎಂಬುದು ಅವರಿಗೆ ಕೊಂಚ ಸಮಾಧಾನ ನೀಡುತ್ತಿದೆ.
ಮನೆಯವರಿಗೆ ತಾನು ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದೇನೆ ಎಂಬ ಭಾವನೆ ಮೂಡಿಸುವಂತೆ ಹೊರಡುವ ಅವರು, ದಿನವಿಡೀ ಸ್ಟಾರ್ಬಕ್ಸ್ನಲ್ಲಿ ಕುಳಿತು ಹೊಸ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರ ಜತೆಗೆ Python ಕಲಿಯುವ ಮೂಲಕ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ಸಂಜೆ ಸುಮಾರು 5 ಗಂಟೆಯ ವೇಳೆಗೆ ಮನೆಗೆ ಮರಳುತ್ತಾರೆ. ಹೀಗೆ ಪ್ರತಿದಿನ ಉದ್ಯೋಗದಲ್ಲಿರುವ ವ್ಯಕ್ತಿಯಂತೆ ವರ್ತಿಸುತ್ತಿರುವುದು ಅವರಿಗೆ ಮಾನಸಿಕವಾಗಿ ಸಾಕಷ್ಟು ಒತ್ತಡವನ್ನುಂಟು ಮಾಡುತ್ತಿದೆ.
ಉದ್ಯೋಗ ಹುಡುಕಾಟದ ನಡುವೆಯೂ ಮಕ್ಕಳಿಗೆ ಪಾಠ
ಇದರ ನಡುವೆ ಅವರು ಮತ್ತೊಂದು ಕೆಲಸವನ್ನೂ ಮಾಡುತ್ತಿದ್ದಾರೆ. ವಸಂತ್ ಕುಂಜ್ ಮತ್ತು ಹೌಜ್ ಖಾಸ್ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.
ಅಂದರೆ, ಒಂದು ಕಡೆ ಹೊಸ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವುದು, ಮತ್ತೊಂದೆಡೆ Python ಕಲಿಯುವುದು, ಇದರ ಜತೆಗೆ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಸಂಜೆ ವೇಳೆಗೆ ಮನೆಗೆ ಮರಳುವುದು ಅವರ ದಿನಚರಿಯಾಗಿದೆ. ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಈ ಜೀವನವನ್ನು "exhausting double life" ಎಂದು ವಿವರಿಸಿರುವ ಅವರು, ಇಂತಹ ದಿನಚರಿಯನ್ನು ಇನ್ನೆಷ್ಟು ದಿನ ಮುಂದುವರಿಸಲು ಸಾಧ್ಯ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.
Job Loss: 'ಪೋಷಕರಿಗೆ ಹೇಳಲು ಧೈರ್ಯವಾಗುತ್ತಿಲ್ಲ'
ತಮ್ಮ ಪೋಸ್ಟ್ನಲ್ಲಿ ಅವರು, ಗುರುಗ್ರಾಮ್ ಸೈಬರ್ ಸಿಟಿಯಲ್ಲಿರುವ MNCಯಲ್ಲಿ ಏಳು ವರ್ಷ ಕೆಲಸ ಮಾಡಿದ ಬಳಿಕ ಸೆಪ್ಟೆಂಬರ್ 10ರಂದು ಲೇಆಫ್ ಆಗಿರುವುದಾಗಿ ತಿಳಿಸಿದ್ದಾರೆ. ಆದರೆ ಈ ವಿಷಯವನ್ನು ಪೋಷಕರಿಗೆ ಹೇಳುವ ಧೈರ್ಯ ಇನ್ನೂ ಬಂದಿಲ್ಲ ಎಂದು ಹೇಳಿದ್ದಾರೆ.
ಉದ್ಯೋಗ ಕಳೆದುಕೊಂಡಿರುವ ವಿಚಾರ ತಿಳಿದರೆ ಪೋಷಕರು ಆತಂಕಕ್ಕೊಳಗಾಗಬಹುದು ಎಂಬ ಕಾರಣಕ್ಕೆ ಈ ವಿಷಯವನ್ನು ಮುಚ್ಚಿಟ್ಟಿರುವುದು ಅವರ ಮಾತುಗಳಿಂದ ತಿಳಿದುಬರುತ್ತದೆ.
Job Loss: ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ
ಈ ವ್ಯಕ್ತಿಯ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ತಮ್ಮದೇ ಉದ್ಯೋಗ ಕಳೆದುಕೊಂಡ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಹೊಸ ಕೌಶಲ್ಯ ಕಲಿಯುತ್ತಿರುವುದನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಮಕ್ಕಳಿಗೆ ಪಾಠ ಹೇಳುತ್ತಿರುವುದನ್ನು ಶ್ಲಾಘಿಸಿದ್ದಾರೆ.
ಇನ್ನು ಕೆಲವರು ಮಾತ್ರ ಪೋಷಕರಿಂದ ವಿಷಯ ಮುಚ್ಚಿಡಬೇಡಿ ಎಂದು ಸಲಹೆ ನೀಡಿದ್ದಾರೆ. ಉದ್ಯೋಗ ಕಳೆದುಕೊಳ್ಳುವುದು ವ್ಯಕ್ತಿಯ ಸಾಮರ್ಥ್ಯ ಅಥವಾ ವ್ಯಕ್ತಿತ್ವದ ಮೇಲೆ ಕಳಂಕವಲ್ಲ. ಇಂತಹ ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲ ಅಗತ್ಯವಾಗಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ತಾವೂ ಇತ್ತೀಚೆಗೆ ಉದ್ಯೋಗ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದು, ಆರಂಭದಲ್ಲಿ ಕುಟುಂಬದವರಿಗೆ ವಿಷಯ ತಿಳಿಸಿರಲಿಲ್ಲ. ಆದರೆ ಸುಮಾರು 10 ದಿನಗಳ ಬಳಿಕ ಕುಟುಂಬದೊಂದಿಗೆ ಮಾತನಾಡುವುದು ಸರಿಯಾದ ನಿರ್ಧಾರ ಎನಿಸಿತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.


Click it and Unblock the Notifications
