Breaking: ಬಿಜೆಪಿ ಸೇರುವ ಸುದ್ದಿಗೆ ಟ್ವಿಸ್ಟ್ ಕೊಟ್ಟ ಜಾರ್ಖಂಡ್ ಮಾಜಿ ಸಿಎಂ!
ರಾಂಚಿ, ಆಗಸ್ಟ್ 21: ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ಜಾರ್ಖಂಡ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ರಾಜಕಾರಣದಿಂದ ನಿವೃತರಾಗುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣಾ ಆಯೋಗ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಶೀಘ್ರವೇ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ.
ಬುಧವಾರ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್, "ನಾನು ರಾಜಕೀಯದಿಂದ ದೂರವಾಗುವುದಿಲ್ಲ. ಹೊಸ ರಾಜಕೀಯ ಪಕ್ಷವನ್ನು ಆರಂಭಿಸುತ್ತೇನೆ" ಎಂದು ಘೋಷಣೆ ಮಾಡಿದರು. ಜಾರ್ಖಂಡ್ ಮುಕ್ತಿ ಮೋರ್ಚಾದಿಂದ ಹೊರ ಬಂದು ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಅವರ ಘೋಷಣೆ ಕುತೂಹಲಕ್ಕೆ ಕಾರಣವಾಗಿದೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಂಧನವಾಗಿದ್ದಾಗ 2 ಫೆಬ್ರವರಿ 2024 ರಿಂದ 3 ಜುಲೈ 2024 ರವರೆಗೆ ಚಂಪೈ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಪ್ರಸ್ತುತ ಅವರು ರಾಜಕೀಯದಿಂದ ನಿವೃತ್ತಿ ಪಡೆಯಲಿದ್ದಾರೆ ಅಥವ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಬುಧವಾರದ ಅವರ ಘೋಷಣೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
"ನನಗೆ ಅವಮಾನ ಮಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯನ್ನೂ ಸಹ ಕರೆಯಲು ನನಗೆ ಅವಕಾಶ ನೀಡಲಿಲ್ಲ. ದಿಢೀರ್ ಎಂದು ನನಗೆ ರಾಜೀನಾಮೆ ನೀಡಲು ಸೂಚನೆ ನೀಡಲಾಯಿತು. ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯ ತನಕ ನನ್ನ ಮುಂದೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ" ಎಂದು ಚಂಪೈ ಸೊರೇನ್ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಂಧಿಸಿದಾಗ ಚಂಪೈ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾದರು. ಜುಲೈನಲ್ಲಿ ಹೇಮಂತ್ ಸೊರೇನ್ ಜಾಮೀನು ಪಡೆದು ಬಿಡುಗಡೆಗೊಂಡರು. ಆಗ ಚಂಪೈ ಸೊರೇನ್ ರಾಜೀನಾಮೆ ಪಡೆದು ಮತ್ತೆ ಹೇಮಂತ್ ಸೊರೇನ್ ಮುಖ್ಯಮಂತ್ರಿಯಾದರು. ಈ ಬೆಳವಣಿಗೆ ಬಳಿಕ ಚಂಪೈ, ಹೇಮಂತ್ ನಡುವೆ ಅಸಮಾಧಾನ ಉಂಟಾಗಿತ್ತು.
ಬುಧವಾರ ಚಂಪೈ ಸೊರೇನ್, "ನನ್ನ ಮುಂದೆ ನಿವೃತ್ತಿ, ಸಂಘಟನೆ, ಸ್ನೇಹ ಎಂಬ ಆಯ್ಕೆಗಳಿವೆ. ಆದರೆ ನಾನು ನಿವೃತ್ತಿಯಾಗುವುದಿಲ್ಲ. ಹೊಸ ಪಕ್ಷ ಸ್ಥಾಪನೆ ಮಾಡಿ, ಪಕ್ಷ ಸಂಘಟನೆ ಮಾಡುತ್ತೇನೆ. ಹಾಗೆಯೇ ಇತರ ರಾಜಕೀಯ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತೇನೆ" ಎಂದು ಹೇಳಿದರು.
"ಒಂದು ವಾರದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಲಾಗುತ್ತದೆ. ಸುಮಾರು 30-40 ಸಾವಿರ ಕಾರ್ಯಕರ್ತರು ಹೊಸ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದರಿಂದ ನನಗೆ ಯಾವುದೇ ತೊಂದರೆ ಆಗುವುದಿಲ್ಲ" ಎಂದು ಚಂಪೈ ಸೊರೇನ್ ಸ್ಪಷ್ಟಪಡಿಸಿದರು.
ಚಂಪೈ ಸೊರೇನ್ ಬಿಜೆಪಿ ಸೇರಲಿದ್ದಾರೆ. ಬಿಜೆಪಿ ಸಹ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದೆ ಎಂದು ಹೇಮಂತ್ ಸೊರೇನ್ ಬಿಜೆಪಿ ಮತ್ತು ಚಂಪೈ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಆದರೆ ಈಗ ಚಂಪೈ ಹೊಸ ಪಕ್ಷ ಸ್ಥಾಪನೆ ಘೋಷಣೆ ಮಾಡಿದ್ದು, ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.












Click it and Unblock the Notifications