ಕೇಂದ್ರ ಸಚಿವೆ ಜಯಂತಿ ನಟರಾಜನ್ ರಾಜೀನಾಮೆ
ನವದೆಹಲಿ, ಡಿ.21: ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆ ರಾಜ್ಯ ಸಚಿವೆ ಜಯಂತಿ ನಟರಾಜನ್ ಅವರು ಶನಿವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ತ್ರಪತಿ ಪ್ರಣಬ್ ಮುಖರ್ಜಿ ಅವರು ಜಯಂತಿ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಸಮರ್ಥ ತಂಡವನ್ನು ರೂಪಿಸುವ ನಿಟ್ಟಿನಲ್ಲಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಯುಪಿಎ ಕ್ಯಾಬಿನೇಟ್ ನಿಂದ ಹಲವಾರು ಮಂದಿ ಹೊರ ಬೀಳುವ ಸಾಧ್ಯತೆಗಳಿವೆ. ಕೇಂದ್ರ ಸಚಿವರಾದ ಜೈರಾಮ್ ರಮೇಶ್ ಹಾಗೂ ಸಚಿನ್ ಪೈಲಟ್ ಕೂಡಾ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ಶಕ್ತಿ ತುಂಬಲು ಸಜ್ಜಾಗುತ್ತಿದ್ದಾರೆ.
ಮೂಲಗಳ ಪ್ರಕಾರ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ಅವರಿಗೆ ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆ ಹೆಚ್ಚುವರಿಯಾಗಿ ನೀಡುವ ಸಾಧ್ಯತೆಗಳು ಕಂಡು ಬಂದಿದೆ.

ಇತ್ತೀಚೆಗೆ ನಡೆದ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಮಿಜೋರಾಂ ಮಾತ್ರ ಉಳಿಸಿಕೊಳ್ಳುವಲ್ಲಿ ಸಫಲವಾಗಿತ್ತು. ದೆಹಲಿ ಹಾಗೂ ಛತ್ತೀಸ್ ಗಢಗಳ ಕಾಂಗ್ರೆಸ್ ಮುಖ್ಯಸ್ಥರಾಗಿ ಅರವಿಂದ್ ಸಿಂಗ್ ಲವ್ಲಿ ಹಾಗೂ ಭೂಪೇಶ್ ಬಾಘೇಲ್ ಅವರನ್ನು ನೇಮಿಸಲಾಗಿದೆ. ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಟೀಂ ಬದಲಾಗುವ ಮುನ್ಸೂಚನೆ ಸಿಕ್ಕಿದೆ.
ತಮಿಳುನಾಡು ಮೂಲದವರಾದ ಜಯಂತಿ ನಟರಾಜನ್ ಅವರು ಕೇಂದ್ರದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಮೂರನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜಯಂತಿ ನಟರಾಜನ್ ಅವರಿಗೆ ಯುಪಿಎ 2 ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷದ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.












Click it and Unblock the Notifications