ಬುರ್ಖಾ ಬ್ಯಾನ್ ಆಗಲಿ, ಜೊತೆಗೆ ಗೂಂಗಟ್ ಕೂಡ: ಜಾವೆದ್ ಅಖ್ತರ್
ನವದೆಹಲಿ, ಮೇ 03: ಭೀಕರ ಭಯೋತ್ಪಾದಕ ದಾಳಿಗೆ ತುತ್ತಾದ ಪಕ್ಕದ ಶ್ರೀಲಂಕಾದಲ್ಲಿ ಭದ್ರತಾ ಕಾರಣದಿಂದ ಬುರ್ಖಾ ಸೇರಿದಂತೆ ಮುಖ ಮುಚ್ಚುವ ಉಡುಪುಗಳಿಗೆ ನಿಷೇಧ ಹೇರಿದ ಬೆನ್ನಲ್ಲೆ ಭಾರತದಲ್ಲೂ ಈ ಬಗ್ಗೆ ಚರ್ಚೆ ಗರಿಗೆದರಿದೆ.
ಈ ಬಗ್ಗೆ ಹಲವರು ಪರ ವಿರೋಧ ದನಿಗಳನ್ನು ಎತ್ತಿದ್ದಾರೆ, ದೇಶದ ಖ್ಯಾತ ಸಾಹಿತಿ, ಗೀತರಚನೆಕಾರ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ಅವರು ಬುರ್ಖಾ ನಿಷೇಧದ ಬಗ್ಗೆ ಮಾತನಾಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ.
ಬುರ್ಖಾ ನಿಷೇಧದ ಬಗ್ಗೆ ಮಾತನಾಡಿರುವ ಅವರು, ಬುರ್ಖಾ ನಿಷೇಧ ಮಾಡುವುದಾದರೆ ಉತ್ತರ ಭಾರತದ ಹಲವೆಡೆ ಹಿಂದೂ ಮಹಿಳೆಯರು ಮುಖದ ಮೇಲೆ ಸೆರಗು ಹಾಕಿಕೊಳ್ಳುವ 'ಗೂಂಗಟ್' ಅನ್ನೂ ನಿಷೇಧಿಸಲಿ ಎಂದಿದ್ದಾರೆ. ಜಾವೇದ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ.
ಬುರ್ಖಾ ನಿಷೇಧದ ವಿಷಯವು ಮಹಿಳಾ ಹಕ್ಕುಗಳ ಚರ್ಚೆಯ ವಿಷಯವಾಗುವ ಬದಲಿಗೆ, ಹಿಂದೂ vs ಮುಸ್ಲಿಂ ಚರ್ಚೆಗೆ ದಾರಿ ಮಾಡಿಕೊಟ್ಟಿದೆ, ಈ ಚರ್ಚೆಗೆ ಒಂದು ಪಂಗಡದವರು ಜಾವೇದ್ ಅಖ್ತರ್ ಅವರ ಮೇಲಿನ ಹೇಳಿಕೆಯನ್ನು ಮತ್ತೊಂದು ಪಂಗಡದ ವಾದಕ್ಕೆ ಗುರಾಣಿಯಾಗಿ ಬಳಸುತ್ತಿದ್ದಾರೆ.

ಸ್ಪಷ್ಟೀಕರಣ ನೀಡಿರುವ ಜಾವೇದ್ ಅಖ್ತರ್
ಆದರೆ ತಮ್ಮ ಹೇಳಿಕೆ ಬಗ್ಗೆ ಮತ್ತೆ ಸ್ಪಷ್ಟೀಕರಣ ನೀಡಿರುವ ಜಾವೇದ್ ಅಖ್ತರ್ ಅವರು, 'ನನ್ನ ಹೇಳಿಕೆಯನ್ನು ಬೇರೆಯದ್ದೇ ರೀತಿಯಲ್ಲಿ ಬಿಂಬಿಸಲಾಗುತ್ತಿದೆ, ಶ್ರೀಲಂಕಾದಲ್ಲಿ ಭದ್ರತಾ ಕಾರಣಗಳಿಗಾಗಿ ಬುರ್ಖಾಗೆ ನಿಷೇಧ ಹೇರಲಾಗಿದೆ, ಆದರೆ ನಿಷೇಧ ಹೇರಬೇಕಾಗಿರುವುದು ಮಹಿಳಾ ಸಬಲೀಕರಣಕ್ಕಾಗಿ ಎಂದು ಅವರು ಹೇಳಿದ್ದಾರೆ.

ಬುರ್ಖಾ, ಗೂಂಗಟ್ ಎರಡನ್ನೂ ನಿಷೇಧಿಸಿ
ಮಹಿಳೆಯರು ಮುಖ ಮುಚ್ಚಿಕೊಳ್ಳುವುದು ನಿಲ್ಲಬೇಕಿದೆ, ಅದು ಬುರ್ಖಾ ಆಗಿರಲಿ ಅಥವಾ ಗೂಂಗಟ್ ಆಗಿರಲಿ ಎಂದು ಜಾವೇದ್ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ನಿಲವು ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಂ ಸಮುದಾಯದ ಹಲವರ ವಿರೋಧ
ಬುರ್ಖಾ ನಿಷೇಧಕ್ಕೆ ಮುಸ್ಲಿಂ ಮೂಲಭೂತವಾದಿಗಳು ಈಗಾಗಲೇ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿವಸೇನಾ ಪಕ್ಷವು ಭಾರತದಲ್ಲಿ ಬುರ್ಖಾ ನಿಷೇಧ ಮಾಡಬೇಕೆಂದು ಬಿಜೆಪಿಯನ್ನು ಒತ್ತಾಯಿಸಿದೆ.

ಹಿಂದೂ vs ಮುಸ್ಲಿಂ ಆಗುತ್ತಿರುವ ಚರ್ಚೆ
ಬುರ್ಖಾ ಅಥವಾ ಇನ್ನಾವುದೇ ಮಹಿಳೆಯ ಮುಖ ಮುಚ್ಚುವಂತಹ ಆಚರಣೆ ಅಥವಾ ಪದ್ಧತಿಯ ಹಿನ್ನೆಲೆಯಲ್ಲಿ ಮಹಿಳಾ ಸ್ವಾತಂತ್ರ್ಯ, ಆಕೆಯ ಹಕ್ಕಿನ ಚರ್ಚೆ ಆಗಬೇಕಾದ ವಿಷಯವು ನಿಧಾನವಾಗಿ ಮುಸ್ಲಿಂ vs ಹಿಂದೂ ಎಂದು ಸಾಮಾಜಿಕ ಜಾಲತಾಣದಲ್ಲಿ ಬದಲಾವಣೆ ಆಗುತ್ತಿರುವುದು ಆತಂಕಕಾರಿ.












Click it and Unblock the Notifications