ಜಮ್ಮು:ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಸಾವು
ಬನಿಹಾಲ್, ಜಮ್ಮು, ಅಕ್ಟೋಬರ್ 10: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಎರಡನೇ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿ ಮತದಾನ ಕೊಠಡಿಯಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ರಾಮಬನ ಜಿಲ್ಲೆಯಲ್ಲಿ ನಡೆದಿದ್ದು ಚುನಾವಣೆ ಕೊಠಡಿಯಲ್ಲಿ ಮತ ಚಲಾಯಿಸುವ ವೇಳೆ ಬಿಜೆಪಿ ಅಭ್ಯರ್ಥಿ ಆಜಾದ್ ಸಿಂಗ್ ರಾಜು ಎಂಬುವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ಇದಾಗಿದೆ. ಆಜಾದ್ ಸಿಂಗ್ ರಾಜು ಅವರಿಗೆ 62 ವರ್ಷ ವಯಸ್ಸಾಗಿತ್ತು.
ನೀರಾವರಿ ಮತ್ತು ನೆರೆ ನಿಯಂತ್ರಣ ಇಲಾಖೆಯ ಮಾಜಿ ನೌಕರ ರಾಜು ಅವರು ಮತದಾನ ಮಾಡುವ ಮುನ್ನವೇ ಮತಗಟ್ಟೆಯಲ್ಲಿ ಹೃದಯಾಘಾತಕ್ಕೆ ಒಳಗಾದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಆಜಾದ್ ಸಿಂಗ್ ಅವರು ರಾಮಬನ ಜಿಲ್ಲೆಯ ಏಲು ಮುನಿಸಿಪಾಲಿಟಿಗಳ ಚುನಾವಣೆಗಾಗಿ ಕಣದಲ್ಲಿದ್ದ 24 ಅಭ್ಯರ್ಥಿಗಳ ಪೈಕಿ ಒಬ್ಬರಾಗಿದ್ದರು. ಮತದಾನ ಬುಧವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಿದ್ದು ಸಂಜೆ 4 ಗಂಟೆಗೆ ಮುಗಿಯಲಿದೆ. ಮೊದಲ ಎರಡು ತಾಸುಗಳಲ್ಲಿ ಇಂದು ಕಠುವಾ ಜಿಲ್ಲೆಯಲ್ಲಿ ಅತ್ಯಧಿಕ ಶೇ.17.2ರ ಮತದಾನವಾಗಿದ್ದು 54,622 ಮತದಾನವಾಗಿದೆ.

ಉಳಿದಂತೆ ರಿಯಾಸಿ ಶೇ.16.6, ಕಿಷ್ತ್‌ವಾರ್ ಶೇ.15.3, ದೋಡಾ ಶೇ.12.6, ರಾಮಬನ ಶೇ.12.4, ಉಧಾಂಪುರ ಜಿಲ್ಲೆಯಲ್ಲಿ ಶೇ.10.3 ಮತದಾನ ದಾಖಲಾಗಿದೆ. ಜಮ್ಮು ಕಾಶ್ಮೀರಲ್ಲಿ ಇಂದು ಬುಧವಾರ 263 ಮುನಿಸಿಪಲ್ ವಾರ್ಡುಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಪೈಕಿ ಜಮ್ಮು ಪ್ರಾಂತ್ಯದ ಕಿಷ್ತ್ ವಾರ್, ದೋಡಾ, ರಾಮಬನ, ರಿಯಾಸಿ, ಉಧಾಂಪುರ ಮತ್ತು ಕಠುವಾ ಸೇರಿದಂತೆ ಒಟ್ಟು ಆರು ಜಿಲ್ಲೆಯಗಳ 214 ಮುನಿಸಿಪಲ್ ವಾರ್ಡುಗಳೂ ಇದರಲ್ಲಿವೆ.












Click it and Unblock the Notifications