Breaking: ಜಮ್ಮು & ಕಾಶ್ಮೀರದಲ್ಲಿ ಬಗೆಹರಿದ ಕಾಂಗ್ರೆಸ್, ಎನ್‌ಸಿ ಸೀಟು ಹಂಚಿಕೆ ಕಗ್ಗಂಟು!
ಶ್ರೀನಗರ, ಆಗಸ್ಟ್ 27: ಮೂರು ಹಂತಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ 2024 ನಡೆಯಲಿದೆ. ಚುನಾವಣೆಗೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಬಳಿಕವೂ ಕಗ್ಗಂಟಾಗಿದ್ದ ಸೀಟು ಹಂಚಿಕೆ ಅಂತೂ ಅಂತಿಮಗೊಂಡಿದೆ. ಬಿಜೆಪಿ ಸಹ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಏಕಾಂಗಿಯಾಗಿ ಪಕ್ಷ ಚುನಾವಣೆ ಎದುರಿಸುತ್ತಿದೆ.
'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ. 90 ಕ್ಷೇತ್ರಗಳ ಪೈಕಿ 51 ಕ್ಷೇತ್ರಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು 32 ಸೀಟುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಉಳಿದ ಸೀಟುಗಳಲ್ಲಿ ಸ್ನೇಹಯುತವಾದ ಸ್ಪರ್ಧೆ ಇರಲಿದೆ.

ಕಣಿವೆ ರಾಜ್ಯದ ಈ ಬಾರಿ ಕದನ ಭಾರೀ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು, 2019ರ ಆಗಸ್ಟ್ 5ರಂದು ರದ್ದುಪಡಿಸಿದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ.
ಸೆಪ್ಟೆಂಬರ್ 18ರಂದು ಮೊದಲ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರದ 24 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಆಗಸ್ಟ್ 27ರ ಮಂಗಳವಾರ ಅಂತಿಮ ದಿನವಾಗಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕರು ಸೋಮವಾರ ಸಂಜೆ ಸರಣಿ ಸಭೆಗಳನ್ನು ನಡೆಸಿ ಸೀಟು ಹಂಚಿಕೆ ಕಗ್ಗಂಟು ಬಗೆಹರಿಸಿದ್ದಾರೆ.
ಕಳೆದ ಗುರುವಾರವೇ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕರು ಚುನಾವಣಾ ಪೂರ್ವ ಮೈತ್ರಿ ಘೋಷಣೆ ಮಾಡಿದ್ದರು. ಇದಕ್ಕಾಗಿಯೇ ಲೋಕಸಭೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಆದರೆ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಕಗ್ಗಂಟಾಗಿತ್ತು.
ಸೋಮವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಸಲ್ಮಾನ್ ಖುರ್ಷಿದ್ ನ್ಯಾಷನಲ್ ಕಾನ್ಫರೆನ್ಸ್ ನಾಯಕರ ಜೊತೆ ಸಭೆ ನಡೆಸಿ ಸೀಟು ಹಂಚಿಕೆ ಅಂತಿಮಗೊಳಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಕಡೆಯಿಂದ ಕಣಿವೆ ರಾಜ್ಯದಲ್ಲಿ ಸೀಟು ಹಂಚಿಕೆ ಮಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಈಗ ವಿಧಾನಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸಿವೆ.
ಜಮ್ಮು ಮತ್ತು ಕಾಶ್ಮೀರದ 90 ಸೀಟುಗಳ ಪೈಕಿ 51ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು 32ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಉಳಿದ ಸೀಟುಗಳಲ್ಲಿ 'ಇಂಡಿಯಾ' ಮೈತ್ರಿಕೂಟದ ಟಿಎಂಸಿ ಸೇರಿದಂತೆ ಇತರ ಪಕ್ಷಗಳು ಸ್ಪರ್ಧಿಸಲಿವೆ.
ಸೀಟು ಹಂಚಿಕೆ ಬಳಿಕ ಮಾತನಾಡಿದ ಕೆ. ಸಿ. ವೇಣುಗೋಪಾಲ್, "ನಾವು ಚರ್ಚೆಗಳನ್ನು ಮಾಡಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದೇನೆ. ನಾವು ಒಟ್ಟಾಗಿ ಸ್ಪರ್ಧೆ ಮಾಡುತ್ತೇವೆ ಮತ್ತು ನಾವು ಜಮ್ಮು ಮತ್ತು ಕಾಶ್ಮೀರದ ಚುನಾವಣೆಯನ್ನು ಗೆಲ್ಲುತ್ತೇವೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ರಚನೆ ಮಾಡಲಿದ್ದೇವೆ" ಎಂದು ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮಾತನಾಡಿ, "ನಾವು ಒಟ್ಟಾಗಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದೆವು. ಇಲ್ಲಿನ ಜನರನ್ನು ಒಡೆದು ಆಳುವವರ ವಿರುದ್ಧ ನಾವು ಒಂದಾಗಿರುವುದು ಸಂತಸ ತಂದಿದೆ. ಕೋಮುವಾದ, ದೇಶವನ್ನು ಒಡೆಯುವ ಶಕ್ತಿಗಳ ವಿರುದ್ಧವಾಗಿಯೇ ನಾವು ಇಂಡಿಯಾ ಮೈತ್ರಿಕೂಟ ರಚನೆ ಮಾಡಿದ್ದೆವು" ಎಂದರು.












Click it and Unblock the Notifications